ಕನಕದುರ್ಗ, ಬಿಂದುಗಿಂತ ಮೊದಲೇ ಅಯ್ಯಪ್ಪ ದರ್ಶನ ಪಡೆದಿದ್ದರು ಮಲೇಷ್ಯಾದ ಮೂವರು ಮಹಿಳೆಯರು
ಸುದ್ದಿ ಸಾರ

ಕನಕದುರ್ಗ, ಬಿಂದುಗಿಂತ ಮೊದಲೇ ಅಯ್ಯಪ್ಪ ದರ್ಶನ ಪಡೆದಿದ್ದರು ಮಲೇಷ್ಯಾದ ಮೂವರು ಮಹಿಳೆಯರು

ಜನವರಿ 1ರಂದೇ ಮೂವರು ಮಲೇಷ್ಯಾದ ಮಹಿಳೆಯರು ಅಯ್ಯಪ್ಪನ ದರ್ಶನ ಮಾಡಿದ್ದಾರೆ ಎಂಬ ಮಾಹಿತಿಯನ್ನು ಇದೀಗ ಕೇರಳ ಪೊಲೀಸರು ನೀಡಿದ್ದಾರೆ.

ವಿದೇಶಿ ಮಹಿಳೆಯರೂ ಸೇರಿದಂತೆ ಈವರೆಗೆ 10 ಜನ 50 ವರ್ಷಕ್ಕಿಂತ ಕೆಳಗಿನ ಮಹಿಳೆಯರು ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಮಾಡಿದ್ದಾರೆ ಎಂದು ಕೇರಳ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಜನವರಿ 2ರ ನಸುಕಿನಲ್ಲಿ ಕನಕದುರ್ಗ ಹಾಗೂ ಬಿಂದು ಎಂಬ ಇಬ್ಬರು ಮಹಿಳೆಯರು ಸಂಪ್ರದಾಯವಾದಿಗಳ ಪ್ರತಿರೋಧವನ್ನೂ ಮೀರಿ ಶಬರಿಮಲೆಗೆ ಆಗಮಿಸಿ ಅಯ್ಯಪ್ಪನ ದರ್ಶನ ಪಡೆದಿದ್ದರು. ಎಲ್ಲಾ ವಯೋಮಾನದ ಮಹಿಳೆಯರಿಗೂ ಶಬರಿಮಲೆಗೆ ಮುಕ್ತ ಪ್ರವೇಶ ನೀಡುವಂತೆ ಸುಪ್ರೀಂಕೋರ್ಟ್‌ ಸೆಪ್ಟೆಂಬರ್ 28 ರಂದು ತೀರ್ಪು ನೀಡಿದ ಬಳಿಕ 50ಕ್ಕಿಂತ ಕಡಿಮೆ ವಯೋಮಾನದ ಮಹಿಳೆಯರು ಅಯ್ಯಪ್ಪನ ದರ್ಶನ ಮಾಡಿದ್ದು ಅದೇ ಮೊದಲು ಎನ್ನಲಾಗಿತ್ತು. ಆದರೆ, ಜನವರಿ 1ರಂದೇ ಮೂವರು ಮಲೇಷ್ಯಾ ಮಹಿಳೆಯರು ಅಯ್ಯಪ್ಪನ ದರ್ಶನ ಪಡೆದಿದ್ದಾರೆ ಎಂಬ ಮಾಹಿತಿಯನ್ನು ಇದೀಗ ಕೇರಳ ಪೊಲೀಸರು ನೀಡಿದ್ದಾರೆ.

ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಬಂದಿರುವ ಮಹಿಳೆ
ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಬಂದಿರುವ ಮಹಿಳೆ
ಚಿತ್ರಕೃಪೆ: ಟೈಮ್ಸ್ ಆಫ್ ಇಂಡಿಯಾ

ಜನವರಿ 1ರಂದು ಹೊಸ ವರ್ಷದ ದಿನವೇ ತಮಿಳು ಭಾಷಿಕರಾದ ಮೂವರು ಮಲೇಷ್ಯಾ ಮಹಿಳೆಯರು ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಇದಲ್ಲದೆ ಕೇರಳದ ಇಬ್ಬರು, ಶ್ರೀಲಂಕಾದ ಒಬ್ಬರು ಮಹಿಳೆಯರು ಸೇರಿದಂತೆ ಕಳೆದ 6 ದಿನದಲ್ಲಿ ಒಟ್ಟು 10 ಮಹಿಳೆಯರು ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಸರಕಾರ ಹಾಗೂ ಸುಪ್ರೀಂಕೋರ್ಟ್‌ಗೆ ಈ ಕುರಿತ ಸ್ಪಷ್ಟ ದಾಖಲೆ ನೀಡುವ ಸಲುವಾಗಿ, ಮಹಿಳೆಯರು ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪನ ದರ್ಶನ ಮಾಡಿದ ದೃಶ್ಯವನ್ನು ವಿಡಿಯೋ ಮಾಡಲಾಗಿದೆ. ಅಲ್ಲದೆ ಮಹಿಳೆಯರ ಕುರಿತ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜನವರಿ 2ರಂದು 50 ವರ್ಷಕ್ಕಿಂತ ಕೆಳಗಿನ ಇಬ್ಬರು ಮಹಿಳೆಯರು ಅಯ್ಯಪ್ಪನ ದರ್ಶನ ಮಾಡಿದರು ಎಂಬುದು ದೊಡ್ಡ ಸುದ್ದಿಯಾಗಿತ್ತು. ಕೇರಳದಲ್ಲಿ ಇದು ದೊಡ್ಡ ಮಟ್ಟದ ಪ್ರತಿಭಟನೆಗೆ ಕಾರಣವಾಗಿತ್ತು. ಈಗಲೂ ಕೇರಳದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಪ್ರತಿಭಟನಾಕಾರರ ಮೇಲೆ ಈವರೆಗೆ ಒಟ್ಟು 850ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ.

Also read: ಶಬರಿಮಲೆ ಎಂಬ ಸ್ಥಾಪಿತ ನಂಬಿಕೆ ಮತ್ತು 250 ಕೋಟಿ ರೂ. ವಾರ್ಷಿಕ ಆದಾಯದ ಹಿಂದಿನ ಅಸಲಿ ಕತೆ!