samachara
www.samachara.com
ಮೇಲ್ಜಾತಿಗಳ ಬಡವರಿಗೆ 10% ಮೀಸಲಾತಿ; ಸಂವಿಧಾನ ತಿದ್ದುಪಡಿಗೆ ಕೇಂದ್ರ ಸಂಪುಟ ನಿರ್ಧಾರ
ಸುದ್ದಿ ಸಾರ

ಮೇಲ್ಜಾತಿಗಳ ಬಡವರಿಗೆ 10% ಮೀಸಲಾತಿ; ಸಂವಿಧಾನ ತಿದ್ದುಪಡಿಗೆ ಕೇಂದ್ರ ಸಂಪುಟ ನಿರ್ಧಾರ

ಕೆಲವು ಷರತ್ತುಗಳೊಂದಿಗೆ ಮೇಲ್ಜಾತಿಗಳ ಆರ್ಥಿಕ ದುರ್ಬಲರಿಗೆ ಶೇಕಡ 10ರಷ್ಟು ಮೀಸಲಾತಿ ನೀಡಲು ಕೇಂದ್ರ ಸರಕಾರ ಮುಂದಾಗಿದೆ.

ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡ 10ರಷ್ಟು ಮೀಸಲಾತಿ ಕಲ್ಪಿಸಲು ಸಂವಿಧಾನ ತಿದ್ದುಪಡಿಗೆ ಕೇಂದ್ರ ಸಂಪುಟ ನಿರ್ಧರಿಸಿದೆ.

ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂಪಾಯಿಯ ಒಳಗಿರುವ, 5 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ, 1000 ಚದರ ಅಡಿಯೂ ಕಡಿಮೆ ವಿಸ್ತೀರ್ಣದ ಮನೆ ಹೊಂದಿರುವ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ 327 ಚದರ ಅಡಿಗಿಂತ ಕಡಿಮೆ ಹಾಗೂ ಇತರ ಕಡೆಗಳಲ್ಲಿ 627 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ವಸತಿ ಫ್ಲ್ಯಾಟ್‌ಗಳನ್ನು ಹೊಂದಿರುವವರನ್ನು ಆರ್ಥಿಕವಾಗಿ ದುರ್ಬಲರು ಎಂದು ಗುರುತಿಸಲು ಕೇಂದ್ರ ಸರಕಾರ ಮುಂದಾಗಿದೆ.

ಈ ವರ್ಗಕ್ಕೆ ಶೇಕಡ 10ರಷ್ಟು ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ನೀಡುವ ಮೂಲಕ ಈ ವರ್ಗವನ್ನು ಮೇಲೆತ್ತಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ‘ಇದು ಮೋದಿ ನೇತೃತ್ವದ ಕೇಂದ್ರ ಸರಕಾರದ ಐತಿಹಾಸಿಕ ನಿರ್ಧಾರ,’ ಎಂದು ಬಿಜೆಪಿ ಮುಖಂಡರು ಪ್ರತಿಕ್ರಿಯಿಸಿದ್ದಾರೆ.

ಆದರೆ, ಲೋಕಸಭಾ ಚುನಾವಣೆಗೂ ಮುನ್ನಾ ಮೇಲ್ಜಾತಿಗಳನ್ನು ಓಲೈಸಲು ಮುಂದಾಗಿರುವ ಬಿಜೆಪಿ ಶೇಕಡ 10ರಷ್ಟು ಮೀಸಲಾತಿ ಘೋಷಿಸುವ ಮೂಲಕ ಮೀಸಲಾತಿ ವ್ಯವಸ್ಥೆಯನ್ನೇ ಹಾಳು ಮಾಡಲು ಹೊರಟಿದೆ ಎಂದು ಕಾಂಗ್ರೆಸ್‌ ಪ್ರತಿಕ್ರಿಯಿಸಿದೆ.

ಮೀಸಲಾತಿ ಕುರಿತು ಇನ್ನಷ್ಟು...:

ಕೇಂದ್ರದ ಈ ಹೊಸ ನಿರ್ಧಾರದಿಂದ ಮೀಸಲಾತಿ ಪ್ರಮಾಣ ಶೇಕಡ 59.5ಕ್ಕೆ ಹೆಚ್ಚಾಗಲಿದೆ. ಇದು ಸುಪ್ರೀಂಕೋರ್ಟ್‌ ವಿಧಿಸಿರುವ ಶೇಕಡ 50ರ ಮಿತಿಯನ್ನು ದಾಟಲಿದೆ. ಇತರೆ ಹಿಂದುಳಿದ ವರ್ಗಗಳ (ಒಬಿಸಿ) 27%, ಪರಿಶಿಷ್ಟ ಜಾತಿಗಳ 15% ಹಾಗೂ ಪರಿಶಿಷ್ಟ ಪಂಗಡಗಳ 7.5% ಮೀಸಲಾತಿ ಸೇರಿ ಒಟ್ಟು 49.5% ಮೀಸಲಾತಿ ಕೇಂದ್ರ ಸರಕಾರದ ಶೈಕ್ಷಣಿಕ ಹಾಗೂ ಔದ್ಯೋಗಿಕ ವ್ಯವಸ್ಥೆಯಲ್ಲಿ ಜಾರಿಯಲ್ಲಿದೆ.

ಆದರೆ, ಒಟ್ಟಾರೆ ಮೀಸಲಾತಿ ಪ್ರಮಾಣ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿದೆ. ತಮಿಳುನಾಡಿನಲ್ಲಿ ಅತಿ ಹೆಚ್ಚಿನ ಪ್ರಮಾಣದ ಮೀಸಲಾತಿ 69% ಇದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಒಬಿಸಿ, ಎಸ್‌ಸಿ, ಎಸ್‌ಟಿ ಸಮುದಾಯಗಳ ಒಟ್ಟು ಮೀಸಲಾತಿಯನ್ನು ಶೇಕಡ 70ಕ್ಕೆ ಹೆಚ್ಚಿಸುವ ಇಂಗಿತವನ್ನು 2017ರ ಅಕ್ಟೋಬರ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದರು.

Also read: ಆಶಯದ ನೆಲೆಯಲ್ಲಷ್ಟೇ ಉಳಿದಿರುವ ಸಮಾನತೆ; ಹೊಸ್ತಿಲಾಚೆ ನಿಂತಿರುವ ಮೀಸಲಾತಿ ಚರ್ಚೆ!

ತಮಿಳುನಾಡು ರಾಜ್ಯ ಸರಕಾರ ‘ತಮಿಳುನಾಡು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ (ಮೀಸಲಾತಿ) ಕಾಯ್ದೆ-1993’ ಅನ್ನು 1994ರಲ್ಲಿ ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುವ ಮೂಲಕ ಪರಿಷ್ಕೃತ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಕಾಯ್ದೆಯ ಪ್ರಕಾರ ತಮಿಳುನಾಡಿನಲ್ಲಿ ಹಿಂದುಳಿದ ವರ್ಗಗಳಿಗೆ 30%, ಅತಿ ಹಿಂದುಳಿದ ಹಾಗೂ ಸಮಾಜದ ಅಂಚಿನಲ್ಲಿರುವ ಸಮುದಾಯಗಳಿಗೆ 25%, ಪರಿಶಿಷ್ಟ ಜಾತಿಗಳಿಗೆ 18% ಹಾಗೂ ಪರಿಶಿಷ್ಟ ಪಂಗಡಗಳಿಗೆ 1% ಮೀಸಲಾತಿಯನ್ನು ನೀಡಲಾಗಿದೆ. ಹೀಗಾಗಿ ತಮಿಳುನಾಡಿನಲ್ಲಿ ಒಟ್ಟು 69% ಮೀಸಲಾತಿ ವ್ಯವಸ್ಥೆ ಜಾರಿಯಲ್ಲಿದೆ.

ಈ ಕಾಯ್ದೆಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಿರುವುದರಿಂದ ಈ ಕಾಯ್ದೆ ಹಾಗೂ ತಮಿಳುನಾಡಿನ ಮೀಸಲಾತಿ ವ್ಯವಸ್ಥೆಯನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲ. ಕರ್ನಾಟಕದಲ್ಲಿ ಇದೇ ಮಾದರಿಯಲ್ಲಿ ಶೇಕಡ 70% ಮೀಸಲಾತಿ ತರಲು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದರು.

ಕರ್ನಾಟಕದಲ್ಲಿ ಸದ್ಯ ಪರಿಶಿಷ್ಟ ಜಾತಿಗಳಿಗೆ 15%, ಪರಿಶಿಷ್ಟ ಪಂಗಡಗಳಿಗೆ 3%, ಹಿಂದುಳಿದ ವರ್ಗಗಳ ಪ್ರವರ್ಗ 1ಕ್ಕೆ 4%, 2ಎ ಸಮುದಾಯಗಳಿಗೆ 15%, 2ಬಿಗೆ (ಮುಸ್ಲಿಂ) 4%, 3ಎಗೆ 4 3ಬಿಗೆ 5% ಒಟ್ಟು 50% ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ವ್ಯವಸ್ಥೆ ಜಾರಿಯಲ್ಲಿದೆ.