samachara
www.samachara.com
ಎಬಿಪಿ ಸುದ್ದಿ ಸಂಸ್ಥೆ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಉತ್ತರಪ್ರದೇಶ ಸಚಿವರ ಆಪ್ತ ಸಹಾಯಕರು.
ಸುದ್ದಿ ಸಾರ

ಉತ್ತರ ಪ್ರದೇಶ ವಿಧಾನಸೌಧದಲ್ಲೂ ಲಂಚಾವತಾರ; ಸಿಕ್ಕಿಬಿದ್ದ ಸಚಿವರ ಮೂವರು ಆಪ್ತರು

ಉತ್ತರ ಪ್ರದೇಶ ವಿಧಾನಸೌಧದಲ್ಲಿ ಲಂಚ ಪಡೆದ ಆರೋಪದ ಮೇಲೆ ಸಚಿವರ ಮೂರು ಮಂದಿ ಆಪ್ತ ಸಹಾಯಕರನ್ನು ವಿಶೇಷ ತನಿಖಾ ದಳದ (ಎಸ್‌ಐಟಿ) ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಕರ್ನಾಟಕದ ವಿಧಾನಸೌಧದ ಸಚಿವರ ಕಚೇರಿಯ ಟೈಪಿಸ್ಟ್‌ ಮೋಹನ್‌ ಹಣದ ಬ್ಯಾಗಿನೊಂದಿಗೆ ಸಿಕ್ಕಿಬಿದ್ದ ಪ್ರಕರಣದ ಬೆನ್ನಲ್ಲೇ ಇಂತಹದ್ದೇ ಪ್ರಕರಣ ಉತ್ತರ ಪ್ರದೇಶದ ವಿಧಾನಸೌಧದಲ್ಲೂ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶ ವಿಧಾನಸೌಧದಲ್ಲಿ ಲಂಚ ಪಡೆದ ಆರೋಪದ ಮೇಲೆ ಸಚಿವರ ಮೂರು ಮಂದಿ ಆಪ್ತ ಸಹಾಯಕರನ್ನು ವಿಶೇಷ ತನಿಖಾ ದಳದ (ಎಸ್‌ಐಟಿ) ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಬಂಧಿತ ಮೂವರು ಆರೋಪಿಗಳೂ ಗಣಿಗಾರಿಕೆ ಮತ್ತು ಅಬಕಾರಿ ಸಚಿವೆ ಅರ್ಚನಾ ಪಾಂಡೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಓಂ ಪ್ರಕಾಶ್ ರಾಜ್‌ಬರ್ ಹಾಗೂ ಶಿಕ್ಷಣ ಸಚಿವ ಸಂದೀಪ್ ಸಿಂಗ್ ಅವರ ಆಪ್ತ ಸಹಾಯಕರು.

ಗಣಿಗಾರಿಕೆ ಹಾಗೂ ಪುಸ್ತಕ ಖರೀದಿಗೆ ಸಂಬಂಧಿಸಿದಂತೆ 40 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ದೃಶ್ಯಗಳನ್ನು ಎಬಿಪಿ ಸುದ್ದಿಸಂಸ್ಥೆ ಪ್ರಸಾರ ಮಾಡಿತ್ತು. ಈ ವರದಿಯ ಬಳಿಕ ಮೂವರನ್ನೂ ಬಂಧಿಸಲಾಗಿದೆ.

ಉತ್ತರಪ್ರದೇಶದ ವಿಧಾನಸಭೆ
ಉತ್ತರಪ್ರದೇಶದ ವಿಧಾನಸಭೆ

ಎಬಿಪಿ ಸುದ್ದಿ ಸಂಸ್ಥೆಯ ಕುಟುಕು ಕಾರ್ಯಾಚರಣೆ ವರದಿ ಪ್ರಸಾರದ ನಂತರ ವಿಶೇಷ ತನಿಖಾ ದಳದ ಹೆಚ್ಚುವರಿ ನಿರ್ದೇಶಕ ರಾಜೀವ್‌ ಕೃಷ್ಣನ್‌ ಜೊತೆಗೆ ಸಭ ನಡೆಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಯೋಗಿ ಆದಿತ್ಯಾನಾಥ್, “ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ನಮ್ಮ ಗುರಿಯಾಗಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ತನಿಖೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೂವರೂ ಆರೋಪಿಗಳನ್ನು ಅಮಾನತು ಮಾಡಲಾಗಿದೆ” ಎಂದಿದ್ದಾರೆ.

ಮೂವರನ್ನೂ ಅಮಾತು ಮಾಡಲಾಗಿದೆ. ತನಿಖೆಗೂ ಆದೇಶಿಸಲಾಗಿದೆ. ಆದರೆ, ಭ್ರಷ್ಟಾಚಾರ ಎಂಬುದು ರಾಜ್ಯ, ಪಕ್ಷಗಳನ್ನೂ ಮೀರಿ ದೇಶದಾದ್ಯಂತ ದಟ್ಟವಾಗಿ ವ್ಯಾಪಿಸಿರುವುದು ಸುಳ್ಳಲ್ಲ. ಭ್ರಷ್ಟಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ಆಶ್ವಾಸನೆ ನೀಡದವರ ಸರ್ಕಾರಗಳಲ್ಲಿ ಲಂಚಾವತಾರ ಎಗ್ಗಿಲ್ಲದೆ ನಡೆಯುತ್ತಿರುವುದು ವಿಪರ್ಯಾಸ.