ಸಂಕಷ್ಟದಲ್ಲಿ ಎಚ್‌ಎಎಲ್‌: ‘ದಾಖಲೆ ಕೊಡಿ, ಇಲ್ಲವೇ ರಾಜೀನಾಮೆ ಕೊಡಿ’ ಎಂದ ರಾಹುಲ್‌ ಗಾಂಧಿ
ಸುದ್ದಿ ಸಾರ

ಸಂಕಷ್ಟದಲ್ಲಿ ಎಚ್‌ಎಎಲ್‌: ‘ದಾಖಲೆ ಕೊಡಿ, ಇಲ್ಲವೇ ರಾಜೀನಾಮೆ ಕೊಡಿ’ ಎಂದ ರಾಹುಲ್‌ ಗಾಂಧಿ

“ರಫೇಲ್ ಡೀಲ್ ಕುರಿತಾಗಿ ಪ್ರಧಾನಿ ಹೇಳಿದ ಸುಳ್ಳನ್ನು ಮುಚ್ಚಲು ರಕ್ಷಣಾ ಸಚಿವೆ ಸದನಕ್ಕೆ ಮತ್ತೊಂದು ಸುಳ್ಳನ್ನು ಹೇಳಿದ್ದಾರೆ...

ಕೇಂದ್ರ ಸರ್ಕಾರದಿಂದ ಎಚ್‌ಎಎಲ್‌ಗೆ 1 ಲಕ್ಷ ಕೋಟಿ ರೂಪಾಯಿ ಮೊತ್ತದ ಉತ್ಪಾದನಾ ಒಪ್ಪಂದ ನೀಡಿದ್ದರ ಬಗ್ಗೆ ದಾಖಲೆಗಳಿದ್ದರೆ ತೋರಿಸಿ, ಇಲ್ಲವೇ ಈಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ” ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಸವಾಲೆಸದಿದ್ದಾರೆ.

ಭಾನುವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಒಂದು ಸುಳ್ಳನ್ನು ಮರೆಮಾಚಲು ಮತ್ತೊಂದು ಸುಳ್ಳು ಹೇಳುತ್ತಾ, ಸುಳ್ಳಿನ ಕಂತೆಯನ್ನೇ ಕಟ್ಟುತ್ತಿದೆ. ರಫೇಲ್ ಡೀಲ್ ಕುರಿತಾಗಿ ಪ್ರಧಾನಿ ಹೇಳಿದ ಸುಳ್ಳನ್ನು ಮುಚ್ಚಲು ರಕ್ಷಣಾ ಸಚಿವೆ ಸದನಕ್ಕೆ ಮತ್ತೊಂದು ಸುಳ್ಳನ್ನು ಹೇಳಿದ್ದಾರೆ. ನಾಳಿನ ಅಧಿವೇಶನದಲ್ಲಿ ಅವರು ಎಚ್‌ಎಎಲ್‌ ಗೆ 1 ಲಕ್ಷ ಕೋಟಿ ರೂಪಾಯಿಯ ಉತ್ಪಾದನಾ ಒಪ್ಪಂದ ನೀಡಿದ ದಾಖಲೆಗಳೊಂದಿಗೆ ಆಗಮಿಸಲಿ, ಇಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಚಾಟಿ ಬೀಸಿದ್ದಾರೆ.

ಶನಿವಾರ ಸದನದಲ್ಲಿ ರಫೇಲ್ ಡೀಲ್ ಹಾಗೂ ಎಚ್‌ಎಎಲ್ ಕುರಿತ ಚರ್ಚೆಯ ವೇಳೆ ಮಾತನಾಡಿದ್ದ ರಾಹುಲ್ ಗಾಂಧಿ, “ಸಾಲದ ಸುಳಿಯಲ್ಲಿ ಸಿಲುಕಿರುವ ಅನಿಲ್ ಅಂಬಾನಿಯನ್ನು ಪಾರು ಮಾಡುವುದಕ್ಕಾಗಿ ಬಿಜೆಪಿ ಸರಕಾರ, ಯುದ್ಧ ವಿಮಾನಗಳನ್ನು ತಯಾರಿಸುವ ಒಪ್ಪಂದವನ್ನು ಎಚ್‌ಎಎಲ್ ಬದಲಿಗೆ ಅಂಬಾನಿ ಕಂಪನಿಗೆ ನೀಡಿದೆ. ಇದರಿಂದ ಎಚ್‌ಎಎಲ್‌ಗೆ ಭಾರೀ ಪ್ರಮಾಣದ ನಷ್ಟವಾಗಿದ್ದು, ಉದ್ಯೋಗಿಗಳಿಗೆ ಸಂಬಳ ನೀಡುವುದಕ್ಕೂ ಸಂಸ್ಥೆಯ ಬಳಿ ಹಣವಿಲ್ಲದಂತಾಗಿದೆ” ಎಂದು ಆರೋಪಿಸಿದ್ದರು.

Also read: ಬರಿದಾದ ‘ಎಚ್‌ಎಎಲ್‌’ ಖಜಾನೆ, ಸಿಬ್ಬಂದಿ ಸಂಬಳಕ್ಕಾಗಿ 1,000 ಕೋಟಿ ರೂ. ಸಾಲ!

ಇದಕ್ಕೆ ಉತ್ತರಿಸಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, “ಕಾಂಗ್ರೆಸ್‌ ಎಚ್‌ಎಎಲ್ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದೆ. ಎಚ್‌ಎಎಲ್ ಸಂಸ್ಥೆಯನ್ನು ಸಧೃಡಗೊಳಿಸುವ ನಿಟ್ಟಿನಲ್ಲಿ ರಕ್ಷಣಾ ಇಲಾಖೆ ಎಚ್‌ಎಎಲ್ ಜತೆಗೆ ಸುಮಾರು 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಉತ್ಪಾದನಾ ಒಪ್ಪಂದ ಮಾಡಿಕೊಂಡಿದೆ” ಎಂದಿದ್ದರು.

ರಾಹುಲ್‌ ಆರೋಪಕ್ಕೆ ಭಾನುವಾರ ಟ್ವಿಟರ್‌ ಮೂಲಕ ಪ್ರತಿಕ್ರಿಯಿಸಿರುವ ನಿರ್ಮಲಾ ಸೀತಾರಾಮನ್‌, “ದೇಶದ ಜನತೆ ತಪ್ಪು ಹಾಗೂ ಸುಳ್ಳು ಮಾಹಿತಿ ನೀಡುತ್ತಿರುವ ಕಾಂಗ್ರೆಸ್‌ ಅಧ್ಯಕ್ಷರಿಗೆ ನಾಚಿಕೆಯಾಗಬೇಕು. 2014ರಿಂದ 2018ರ ಅವಧಿಯಲ್ಲಿ ಎಚ್‌ಎಎಲ್‌ ಜತೆಗೆ 26,570.8 ಕೋಟಿ ರೂಪಾಯಿಯ ಒಪ್ಪಂದವಾಗಿದೆ. 73,000 ಕೋಟಿಯ ಒಪ್ಪಂದ ಪ್ರಕ್ರಿಯೆ ನಡೆಯುತ್ತಿದೆ. ದೇಶದ ಜನತೆಗೆ ಸುಳ್ಳು ಹೇಳಿದ ರಾಹುಲ್‌ ಗಾಂಧಿ ಸದನದಲ್ಲಿ ಕ್ಷಮೆ ಕೇಳಿ ರಾಜೀನಾಮೆ ನೀಡುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ. ಜತೆಗೆ ಎರಡು ಪುಟಗಳ ದಾಖಲೆಗಳನ್ನೂ ನಿರ್ಮಲಾ ಟ್ವೀಟ್‌ ಮಾಡಿದ್ದಾರೆ.