samachara
www.samachara.com
‘ಚಂದನವನ’ದ ತುಂಬಾ ಅಕ್ರಮ ವಹಿವಾಟು; ಐಟಿ ದಾಳಿಯಿಂದ ಬೆತ್ತಲಾದ ಕನ್ನಡ ಚಿತ್ರೋದ್ಯಮ
ಸುದ್ದಿ ಸಾರ

‘ಚಂದನವನ’ದ ತುಂಬಾ ಅಕ್ರಮ ವಹಿವಾಟು; ಐಟಿ ದಾಳಿಯಿಂದ ಬೆತ್ತಲಾದ ಕನ್ನಡ ಚಿತ್ರೋದ್ಯಮ

ಚಿತ್ರ ನಿರ್ಮಾಣದಲ್ಲಿ ದಾಖಲೆ ಇಲ್ಲದ ಹಣ ಹರಿದಾಡುತ್ತಿರುವುದಕ್ಕೆ ಐಟಿ ದಾಳಿ ಕಾರ್ಯಾಚರಣೆಯಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳು ಸಿಕ್ಕಿವೆ.

“ಕನ್ನಡ ಚಿತ್ರೋದ್ಯಮ ಹಣಕಾಸಿನ ವಹಿವಾಟಿನಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ಹಣಕಾಸಿನ ಮೂಲ ಹಾಗೂ ಹಣದ ಖರ್ಚಿನ ಬಗ್ಗೆ ದಾಖಲೆಗಳನ್ನು ಇಡಬೇಕು. ಸರಿಯಾಗಿ ತೆರಿಗೆ ಕಟ್ಟಬೇಕು…”

ಇದು ಆದಾಯ ತೆರಿಗೆ ಇಲಾಖೆ ಕನ್ನಡ ಚಿತ್ರೋದ್ಯಮಕ್ಕೆ ನೀಡಿರುವ ಸಲಹೆಯ ಬುದ್ಧಿಮಾತು. ಕಳೆದ ಮೂರು ದಿನಗಳಿಂದ ಹಗಲೂ ರಾತ್ರಿ ಸುದ್ದಿಯಾಗಿದ್ದ ಕನ್ನಡ ಸಿನಿಮಾ ನಟರ ಮನೆಗಳ ಮೇಲಿನ ಐಟಿ ದಾಳಿ ಕೊನೆಗೂ ಮುಗಿದಿದ್ದು, ಒಟ್ಟು 11 ಕೋಟಿ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನ ವಶಪಡಿಸಿಕೊಂಡಿರುವುದಾಗಿ ಇಲಾಖೆ ಹೇಳಿದೆ.

ದಾಳಿಗೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಐಟಿ ಇಲಾಖೆಯ ತನಿಖಾ ವಿಭಾಗ, ಕನ್ನಡ ಚಿತ್ರೋದ್ಯಮದ ಹಣಕಾಸಿನ ವಹಿವಾಟಿನ ಅಶಿಸ್ತನ್ನು ಬಯಲು ಮಾಡಿದೆ. “ದಾಳಿಯ ವೇಳೆ 2.85 ಕೋಟಿ ನಗದು ಮತ್ತು 25.3 ಕೆ.ಜಿ. ಚಿನ್ನ ವಶಪಡಿಸಿಕೊಳ್ಳಲಾಗಿದೆ. 109 ಕೋಟಿ ರೂಪಾಯಿ ಅಕ್ರಮ ಹಣಕಾಸಿನ ಸಾಕ್ಷ್ಯಾಧಾರ ಸಿಕ್ಕಿದೆ. ಈ ಮೊತ್ತ ಇನ್ನೂ ಹೆಚ್ಚಾಗಬಹುದು” ಎಂದು ಐಟಿ ಇಲಾಖೆ ಹೇಳಿದೆ.

Also read: ಸ್ಯಾಂಡಲ್‌ವುಡ್ & ಬ್ಲಾಕ್‌ ಮನಿ: ಬೆಳ್ಳಿತೆರೆಯ ಪರದೆ ಹಿಂದಿನ (ಅ)ವ್ಯವಹಾರದ ಕತೆ!

“21 ಸ್ಥಳಗಳಲ್ಲಿ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ. 5 ಕಡೆ ದೀರ್ಘವಾದ ಪರಿಶೀಲನೆ ನಡೆದಿದೆ. ಇಲಾಖೆಯ ಕರ್ನಾಟಕ- ಗೋವಾ ವಲಯದ 180 ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಮೂರು ತಿಂಗಳ ಮೊದಲೇ ಈ ಕಾರ್ಯಾಚರಣೆ ಸಿದ್ಧತೆ ನಡೆಸಲಾಗಿತ್ತು” ಎಂದು ಇಲಾಖೆ ತಿಳಿಸಿದೆ.

“ಚಿತ್ರ ನಿರ್ಮಾಣ ಸಂಸ್ಥೆಗಳು, ನಿರ್ಮಾಪಕರು, ಹೂಡಿಕೆದಾರರು, ನಟರ ಮನೆಗಳಲ್ಲಿ ತಪಾಸಣೆ ನಡೆಸಲಾಗಿದೆ. ಚಿತ್ರ ನಿರ್ಮಾಣದಲ್ಲಿ ದಾಖಲೆ ಇಲ್ಲದ ಹಣ ಹರಿದಾಡುತ್ತಿರುವುದಕ್ಕೆ ಈ ಕಾರ್ಯಾಚರಣೆಯಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳು ಸಿಕ್ಕಿವೆ. ಚಿತ್ರಮಂದಿರಗಳಲ್ಲಿ ಸಂಗ್ರಹವಾದ ಹಣಕ್ಕೆ ಸರಿಯಾದ ಲೆಕ್ಕವಿಲ್ಲದೆ ಇರುವುದು ಹಾಗೂ ಅಪಾರ ಪ್ರಮಾಣದ ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ” ಎಂದಿದೆ.

“ಕಲಾವಿದರ ಬಳಿ ದಾಖಲೆ ಇಲ್ಲದ ಹಣ, ಆಭರಣಗಳು ಪತ್ತೆಯಾಗಿವೆ. ಅಲ್ಲದೆ ಆಡಿಯೊ, ಡಿಜಿಟಲ್‌ ಹಾಗೂ ಸ್ಯಾಟಲೈಟ್‌ ವಿತರಣೆ ಹಕ್ಕು ಮಾರಾಟದಲ್ಲೂ ದಾಖಲೆ ಇಲ್ಲದ ಹಣದ ವರ್ಗಾವಣೆ ನಡೆದಿರುವುದು ಪತ್ತೆಯಾಗಿದೆ. ವಿತರಕರ ಬಳಿ ಅನಧಿಕೃತ ನಗದು ರಸೀದಿಗಳು ಪತ್ತೆಯಾಗಿವೆ” ಎಂದು ಹೇಳಲಾಗಿದೆ.

ಆದರೆ, ಯಾವ ಯಾವ ನಟರು, ನಿರ್ಮಾಪಕರ ಮನೆಗಳಲ್ಲಿ ಎಷ್ಟೆಷ್ಟು ಅಕ್ರಮ ಹಣ ಪತ್ತೆಯಾಗಿದೆ, ಎಲ್ಲೆಲ್ಲಿ ಎಷ್ಟೆಷ್ಟು ಹಣ, ಚಿನ್ನ ವಶಪಡಿಸಿಕೊಳ್ಳಲಾಗಿದೆ, ಯಾವ ನಟ- ನಿರ್ಮಾಪಕರ ಮನೆಯಲ್ಲಿ ಹೆಚ್ಚು ಅಕ್ರಮ ಹಣ- ದಾಖಲೆ ಪತ್ರಗಳು ಪತ್ತೆಯಾಗಿವೆ ಎಂಬುದನ್ನು ಐಟಿ ಇಲಾಖೆ ಬಹಿರಂಗಪಡಿಸಿಲ್ಲ.