samachara
www.samachara.com
‘ಅನಿರೀಕ್ಷಿತ ಅತಿಥಿ’ಗಳನ್ನು ಎದುರಿಸಲು ಸಿದ್ಧ: ಸಿಬಿಐ ದಾಳಿಯ ಮುನ್ಸೂಚನೆ ನೀಡಿದ ಅಖಿಲೇಶ್
ಸುದ್ದಿ ಸಾರ

‘ಅನಿರೀಕ್ಷಿತ ಅತಿಥಿ’ಗಳನ್ನು ಎದುರಿಸಲು ಸಿದ್ಧ: ಸಿಬಿಐ ದಾಳಿಯ ಮುನ್ಸೂಚನೆ ನೀಡಿದ ಅಖಿಲೇಶ್

“ರಾಜಕೀಯ ವಿರೋಧಿಗಳನ್ನು ಹಣಿಯಲು ಸಿಬಿಐ ಅಧಿಕಾರಿಗಳನ್ನು ಛೂ ಬಿಡುವ ಸಂಪ್ರದಾಯವನ್ನು ಕಾಂಗ್ರೆಸ್ ಈ ಮುಂಚೆ ಪಾಲಿಸಿಕೊಂಡು ಬರುತ್ತಿತ್ತು. ಅದನ್ನೀಗ ಬಿಜೆಪಿ ಪಾಲಿಸುತ್ತಿದೆ” ಎಂದಿದ್ದಾರೆ ಅಖಿಲೇಶ್ ಯಾದವ್.

ಉತ್ತರ ಪ್ರದೇಶದ ರಾಜಕೀಯ ಬೆಳವಣಿಗೆಗಳನ್ನು ನಿಯಂತ್ರಿಸಲು ಬಿಜೆಪಿ ಸಿಬಿಐ ಅನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ನೀಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಸಿಬಿಐ ಅಧಿಕಾರಿಗಳ ಯಾವುದೇ ವಿಚಾರಣೆಗೆ ತಾವು ಸಿದ್ಧ ಎಂದಿದ್ದಾರೆ.

ಉತ್ತರಪ್ರದೇಶದ ರಾಜಕಾರಣದಲ್ಲಿ ಹಾವು ಮುಂಗುಸಿಯಂತಿದ್ದ ಸಮಾಜವಾದ ಪಾರ್ಟಿ ಹಾಗೂ ಬಹುಜನ ಸಮಾಜವಾದ ಪಾರ್ಟಿ ಲೋಕಸಭಾ ಚುನಾವಣೆಗೆ ಮುನ್ನವೇ ಬಿಜೆಪಿ ವಿರುದ್ಧ ಚುನಾವಣಾ ಮೈತ್ರಿ ಮಾಡಿಕೊಂಡಿವೆ. ಇದರಿಂದ ಕೆಂಗಣ್ಣಾಗಿರುವ ಬಿಜೆಪಿ ತಮ್ಮ ವಿರುದ್ಧ ‘ಅನಿರೀಕ್ಷಿತ ಅತಿಥಿ’ಗಳನ್ನು ಕಳಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

2012 ರಿಂದ 2016ರವರೆಗೆ ನಡೆದಿದೆ ಎನ್ನಲಾದ ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ, ಆಗ ಮುಖ್ಯಮಂತ್ರಿಯಾಗಿದ್ದ ಹಾಗೂ ಒಂದು ವರ್ಷದ ಅವಧಿಗೆ ಗಣಿಗಾರಿಕೆ ಇಲಾಖೆಯ ಉಸ್ತುವಾರಿ ಹೊತ್ತಿದ್ದ ಅಖಿಲೇಶ್ ಯಾದವ್ ಅವರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲೇಶ್, “ಬಿಜೆಪಿಯು ಸಿಬಿಐ ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಅಧಿಕಾರಿಗಳನ್ನು ಮುಂದೆ ಬಿಟ್ಟು ಹಿಂದೆ ಆಟವಾಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದೆ. ಆದರೆ ನಾವು ಯಾವುದೇ ತನಿಖೆಗೆ ಸಿದ್ಧ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದೇವೆ” ಎಂದು ಹೇಳಿದ್ದಾರೆ.

“ರಾಜಕೀಯ ವಿರೋಧಿಗಳನ್ನು ಹಣಿಯಲು ಸಿಬಿಐ ಅಧಿಕಾರಿಗಳನ್ನು ಛೂ ಬಿಡುವ ಸಂಪ್ರದಾಯವನ್ನು ಕಾಂಗ್ರೆಸ್ ಈ ಮುಂಚೆ ಪಾಲಿಸಿಕೊಂಡು ಬರುತ್ತಿತ್ತು. ಅದನ್ನೀಗ ಬಿಜೆಪಿ ಪಾಲಿಸುತ್ತಿದೆ. ಚುನಾವಣೆಗೆ ಮುಂಚಿತವಾಗಿಯೇ ಬಿಜೆಪಿಯ ಬಣ್ಣ ಬಯಲಾಗಿರುವುದು ಒಳ್ಳೆಯ ವಿಚಾರ” ಎಂದಿದ್ದಾರೆ.

Also read: ಉತ್ತರಪ್ರದೇಶದಲ್ಲಿ ಒಂದಾದ ‘ಸಮಾಜ’ ಪಕ್ಷಗಳು; ಕಾಂಗ್ರೆಸ್‌ಗೆ ಮೈತ್ರಿ ಗೊಂದಲ

ಚುನಾವಣೆಗೆ ಮುಂಚಿತವಾಗಿ ಅಕ್ರಮ ಗಣಿಗಾರಿಕೆಯಲ್ಲಿ ಅಖಿಲೇಶ್ ಪಾತ್ರವಿರುವುದು ಸಾಬೀತಾದರೆ, ಎಸ್‌ಪಿ-ಬಿಎಸ್‌ಪಿ ಮಹಾ ಘಟಬಂಧನ್‌ ಮೈತ್ರಿಯನ್ನು ಹಣಿಯಲು ಬಿಜೆಪಿಗೆ ಹೊಸ ಅಸ್ತ್ರ ದೊರೆಯಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಕಪಿಲ್ ಸಿಬಲ್, “ಎಸ್‌ಪಿ ಹಾಗೂ ಬಿಎಸ್‌ಪಿ ಮಹಾಮೈತ್ರಿಯ ನಂತರ ಅಖಿಲೇಶ್ ಯಾದವ್ ಮೇಲೆ ಸಿಬಿಐ ದಾಳಿ ನಿರೀಕ್ಷಿತ. ಬಿಜೆಪಿಯವರು ಸರಕಾರವನ್ನು ನಡೆಸುವ ಪರಿಯೇ ಹಾಗೆ” ಎಂದು ಕಾಲೆಳೆದಿದ್ದಾರೆ.

ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಬಿಜೆಪಿ, ತನಿಖೆ ನಡೆಸುವುದು ಸಿಬಿಐ ಸಂಸ್ಥೆಯ ಕೆಲಸ. ಬಿಜೆಪಿಗೂ ಅದಕ್ಕೂ ಸಂಬಂಧವಿಲ್ಲ ಎಂದಿದೆ.