samachara
www.samachara.com
ಚೀನಾದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಕಡಿವಾಣ; ಇಸ್ಲಾಮ್‌ ಚೀನೀಕರಣಕ್ಕೆ ಹೊಸ ಕಮ್ಯುನಿಸ್ಟ್‌ ಕಾಯ್ದೆ
ಸುದ್ದಿ ಸಾರ

ಚೀನಾದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಕಡಿವಾಣ; ಇಸ್ಲಾಮ್‌ ಚೀನೀಕರಣಕ್ಕೆ ಹೊಸ ಕಮ್ಯುನಿಸ್ಟ್‌ ಕಾಯ್ದೆ

ಚೀನಾ ಹಲವೆಡೆ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವುದು, ಉಪವಾಸ ಆಚರಿಸುವುದು, ಗಡ್ಡ ಬೆಳೆಸುವುದು, ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿದ್ದು, ಇಂಥ ಆಚರಣೆಗಳಲ್ಲಿ ತೊಡಗಿರುವವರು ಬಂಧನದ ಭೀತಿಯಲ್ಲಿದ್ದಾರೆ.

ಇಸ್ಲಾಂ ಧರ್ಮವನ್ನು ಮುಂದಿನ ಐದು ವರ್ಷದಲ್ಲಿ ಚೀನೀಕರಣಗೊಳಿಸುವ ನಿಟ್ಟಿನಲ್ಲಿ ಚೀನಾ ಸರಕಾರ ಹೊಸ ಕಾನೂನನ್ನು ಜಾರಿಗೆ ತಂದಿದೆ. ಇಸ್ಲಾಂನ ಪ್ರಮುಖ ಧಾರ್ಮಿಕ ಸಂಘಟನೆಗಳ ಜತೆ ಸಭೆ ನಡೆಸಿ ಈ ಹೊಸ ಕಾನೂನು ಜಾರಿಗೊಳಿಸಲಾಗಿದೆ ಎಂದು ‘ಗ್ಲೋಬರ್‌ ಟೈಮ್ಸ್‌’ ವರದಿ ಮಾಡಿದೆ.

ಧರ್ಮವನ್ನೂ ಸಮಾಜವಾದದ ಅಡಿಯಲ್ಲಿ ಪುನರ್‌ರೂಪಿಸುವ ಸಂಬಂಧ ಚೀನಾ ಅಧಿಕಾರಿಗಳು ಶನಿವಾರ ಇಸ್ಲಾಂ ಧರ್ಮದ ಎಂಟು ಪ್ರಮುಖ ಸಂಘಟನೆಗಳೊಂದಿಗೆ ಸಭೆ ನಡೆಸಿ ಇಸ್ಲಾಂ ಧರ್ಮವನ್ನು ಚೀನೀಕರಣಗೊಳಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಕೆಲವು ಮಹತ್ವ ದ ಬದಲಾವಣೆಗಳಿಗೆ ಈ ಸಂಘಟನೆಗಳು ಒಪ್ಪಿಗೆ ಸೂಚಿಸಿವೆ ಎಂದು ವರದಿಯಾಗಿದೆ. ಆದರೆ, ಕಾಯ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಚೀನಾದ ಹಲವು ಭಾಗಗಳಲ್ಲಿ ಈಗಾಗಲೇ ಧಾರ್ಮಿಕ ಶಾಲೆಗಳು ಹಾಗೂ ಅರೇಬಿಕ್ ತರಗತಿಗಳ ಮೇಲೆ ನಿಷೇಧ ಹೇರಲಾಗಿದೆ. ಚೀನಾ ಹಲವೆಡೆ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವುದು, ಉಪವಾಸ ಆಚರಿಸುವುದು, ಗಡ್ಡ ಬೆಳೆಸುವುದು, ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿದ್ದು, ಇಂಥ ಆಚರಣೆಗಳಲ್ಲಿ ತೊಡಗಿರುವವರು ಬಂಧನದ ಭೀತಿಯಲ್ಲಿದ್ದಾರೆ.

“ಚೀನಾದಲ್ಲಿ 10 ಲಕ್ಷಕ್ಕೂ ಹೆಚ್ಚು ವಿಗುರ್‌ ಮುಸ್ಲಿಂ ಸಮುದಾಯದವರನ್ನು ಬಂಧಿಸಿ ಹಿಂಸಿಸಲಾಗುತ್ತಿದ್ದು, ಅವರು ಧರ್ಮವನ್ನು ತೊರೆದು ಕಮ್ಯುನಿಸ್ಟ್‌ ಪಕ್ಷದ ಸರಕಾರಕ್ಕೆ ನಿಷ್ಠರಾಗಿರುವಂತೆ ಒತ್ತಡ ಹಾಕಲಾಗುತ್ತಿದೆ” ಎಂದು ವಿಶ್ವಸಂಸ್ಥೆ ಹೇಳಿದೆ. ಆದರೆ, ಈ ಆರೋಪವನ್ನು ಚೀನಾ ನಿರಾಕರಿಸಿದೆ.

‘ಚೀನಾದ ಜನಾಂಗೀಯ ಶುದ್ಧೀಕರಣವನ್ನು ನಾವು ಸಹಿಸುವುದಿಲ್ಲ’ ಎಂದು ಕಳೆದ ಆಗಸ್ಟ್‌ನಲ್ಲಿ ವಾಷಿಂಗ್ಟನ್ ಪೋಸ್ಟ್‌ ತನ್ನ ಸಂಪಾದಕೀಯದಲ್ಲಿ ಹೇಳಿತ್ತು. ಅಲ್ಲದೆ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ದನಿ ಎತ್ತಿತ್ತು. ಆದರೆ ಇಂತಹ ಟೀಕೆಗಳಿಗೆ ಸ್ಪಷ್ಟನೆ ನೀಡಿದ್ದ ಚೀನಾ ಅಲ್ಪಸಂಖ್ಯಾತರ ಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆಗೆ ಸರಕಾರ ಬದ್ಧವಾಗಿದೆ ಎಂದಿತ್ತು.