samachara
www.samachara.com
ತೈವಾನ್‌ ಬಿಕ್ಕಟ್ಟು: ಯುದ್ಧಕ್ಕೆ ಸಜ್ಜಾಗುವಂತೆ ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸೂಚನೆ
ಸುದ್ದಿ ಸಾರ

ತೈವಾನ್‌ ಬಿಕ್ಕಟ್ಟು: ಯುದ್ಧಕ್ಕೆ ಸಜ್ಜಾಗುವಂತೆ ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸೂಚನೆ

ಯಾವುದೇ ಸಂದರ್ಭದಲ್ಲಿ ಯುದ್ಧ ಜರುಗುವ ಸಾಧ್ಯತೆ ಇದ್ದು, ದೇಶದ ರಕ್ಷಣೆಗಾಗಿ ಸೈನ್ಯ ಸಿದ್ಧವಾಗಿರಬೇಕು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸೂಚಿಸಿದ್ದಾರೆ ಎನ್ನಲಾಗಿದೆ.

ಚೀನಾದ ಸೈನ್ಯ ಮತ್ತಷ್ಟು ಬಲಿಷ್ಠವಾಗಬೇಕಾದ ಅಗತ್ಯವಿದ್ದು, ಸೇನೆ ಯಾವುದೇ ಸಂದರ್ಭದಲ್ಲಿ ಯುದ್ಧಕ್ಕೆ ಸಿದ್ಧವಾಗುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೇಳಿದ್ದಾರೆ.

ಚೀನಾ ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ಸಭೆಯಲ್ಲಿ, ಹೊಸ ಯುಗದ ಯುದ್ಧತಂತ್ರಗಳಿಗೆ ಸಿದ್ಧವಾಗುವಂತೆ ಕ್ಸಿ ಸೇನಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ಜತೆಗಿನ ವಿವಾದ ಅಪಾಯದ ಹಂತ ಮೀರಿದೆ. ಚೀನಾದ ವ್ಯಾಪಾರದಿಂದ ಹಿಡಿದು ತೈವಾನ್ ಸ್ಥಿತಿಯವರೆಗೆ ಸಮಸ್ಯೆಗಳು ಉಲ್ಬಣಿಸುತ್ತಿವ. ಹೀಗಾಗಿ ಯಾವುದೇ ಸಂದರ್ಭದಲ್ಲಿ ಯುದ್ಧ ಜರುಗುವ ಸಾಧ್ಯತೆ ಇದ್ದು, ದೇಶದ ರಕ್ಷಣೆಗಾಗಿ ಸೈನ್ಯ ಸಿದ್ಧವಾಗಿರಬೇಕು ಎಂದು ಕ್ಸಿ ಸೂಚಿಸಿದ್ದಾರೆ ಎನ್ನಲಾಗಿದೆ.

“ಕಳೆದ ಒಂದು ಶತಮಾನದಲ್ಲಿ ಕಾಣಲಾರದಷ್ಟು ಪ್ರಮುಖ ಬದಲಾವಣೆಗಳನ್ನು ಜಗತ್ತು ಈಗ ಕಾಣುತ್ತಿದೆ. ಈ ಹೊತ್ತಿನ ಅಭಿವೃದ್ಧಿಗಾಗಿ ಚೀನಾ ಪ್ರಮುಖ ಕಾರ್ಯತಂತ್ರಗಳನ್ನು ರೂಪಿಸಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಶಸ್ತ್ರ ಪಡೆಗಳು ದೇಶದ ಭದ್ರತೆಯ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು” ಎಂದಿದ್ದಾರೆ.

ತೈವಾನ್‌ ದ್ವೀಪದ ಸ್ವಾಯತ್ತತೆ ಕುರಿತು ಬುಧವಾರ ಮಾತನಾಡಿದ್ದ ಕ್ಸಿ, ತೈವಾನ್‌ ಚೀನಾದ ಅವಿಭಾಜ್ಯ ಅಂಗ ಎಂದು ಒತ್ತಿ ಹೇಳಿದ್ದರು. ಅದರ ಹಿಂದೆಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ‘ಏಷ್ಯಾ ರಿಅಶ್ಯೂರೆನ್ಸ್ ಕಾಯ್ದೆ’ಗೆ ಸಹಿ ಹಾಕಿದ್ದರು. ಆ ಮೂಲಕ ತೈವಾನ್ ದ್ವೀಪದ ಸ್ವಾತಂತ್ರ್ಯ ರಕ್ಷಿಸುವ ಬದ್ಧತೆಯನ್ನು ಅಮೆರಿಕ ತೋರಿತ್ತು. ಇದೇ ಕಾರಣಕ್ಕೆ ಚೀನಾ ಅಮೆರಿಕದ ಮೇಲೆ ಸಿಟ್ಟಾಗಿದ್ದು, ಯುದ್ಧದ ತಯಾರಿಗೆ ಸೇನೆಯನ್ನು ಎಚ್ಚರಿಸಿದೆ ಎನ್ನಲಾಗಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಸಾರ್ವಭೌಮತೆ ಸಾಧಿಸುವ ಹಾಗೂ ತೈವಾನ್ ದ್ವೀಪದ ಸಲುವಾಗಿ ಹಲವು ವರ್ಷಗಳಿಂದ ಚೀನಾ ಹಾಗೂ ಅಮೆರಿಕದ ನಡುವೆ ನಿರಂತರ ಜಟಾಪಟಿ ನಡೆಯುತ್ತಲೇ ಇದೆ. ಇದೀಗ ಚೀನಾ ಅಧ್ಯಕ್ಷರ ಯುದ್ಧಕ್ಕೆ ಸೇನಾ ಸಭೆ ಯುದ್ಧದ ಮುನ್ಸೂಚನೆ ನೀಡಿರುವಂತಿದೆ.