samachara
www.samachara.com
ದಾಖಲೆ ಇಲ್ಲದ 25.76 ಲಕ್ಷ ರೂ. ಪ್ರಕರಣ ಎಸಿಬಿಗೆ; ಹಣ ವಿಧಾನಸೌಧದ ಒಳಗೆ ಹೋಗಿದ್ದು ಹೇಗೆ?
ಸುದ್ದಿ ಸಾರ

ದಾಖಲೆ ಇಲ್ಲದ 25.76 ಲಕ್ಷ ರೂ. ಪ್ರಕರಣ ಎಸಿಬಿಗೆ; ಹಣ ವಿಧಾನಸೌಧದ ಒಳಗೆ ಹೋಗಿದ್ದು ಹೇಗೆ?

ದಾಖಲೆ ಇಲ್ಲದ ಹಣ ವಿಧಾನಸೌಧದ ಒಳಗೆ ಹೋಗಿದ್ದು ಹೇಗೆ ಎಂಬ ಪ್ರಶ್ನೆಯೂ ಈಗ ದೊಡ್ಡದಾಗಿದೆ. ದಾಖಲೆ ಇಲ್ಲದ ಹಣ ವಿಧಾನಸೌಧದ ಒಳಗೆ ಹೋಗಿರುವುದು ಭದ್ರತಾ ವೈಫಲ್ಯ.

ವಿಧಾನಸೌಧದಿಂದ ದಾಖಲೆ ಇಲ್ಲದೆ 25.76 ಲಕ್ಷ ರೂಪಾಯಿಯನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಎಸಿಬಿಗೆ ವರ್ಗಾಯಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರ ಕಚೇರಿಯ ಟೈಪಿಸ್ಟ್ ಮೋಹನ್ 25.76 ಲಕ್ಷ ರೂಪಾಯಿಯನ್ನು ಶುಕ್ರವಾರ ಸಂಜೆ ವಿಧಾನಸೌಧದಿಂದ ಹೊರಗೆ ತೆಗೆದುಕೊಂಡು ಹೋಗುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

“ಆರೋಪಿ ಸರಕಾರಿ ನೌಕರರಾಗಿರುವುದರಿಂದ ಈ ಪ್ರಕರಣವನ್ನು ಎಸಿಬಿಗೆ ವರ್ಗಾಯಿಸಲಾಗಿದೆ. ಎಸಿಬಿ ಅಧಿಕಾರಿಗಳು ಈ ಪ್ರಕರಣದ ಮುಂದಿನ ತನಿಖೆ ನಡೆಸಲಿದ್ದಾರೆ” ಎಂದು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್‌ ಹೇಳಿದ್ದಾರೆ.

ಶುಕ್ರವಾರ ಮಧ್ಯಾಹ್ನ ವಿಧಾನಸೌಧಕ್ಕೆ ಬಂದಿದ್ದ ಎನ್ನಲಾದ ಗುತ್ತಿಗೆದಾರನೊಬ್ಬ, ಹಣವಿದ್ದ ಬ್ಯಾಗ್‌ ಅನ್ನು ಮೋಹನ್‌ ಅವರಿಗೆ ಕೊಟ್ಟು ವಾಪಸ್ ಹೋಗಿದ್ದ. ಬ್ಯಾಗ್‌ನಲ್ಲಿ ಹಣವಿರುವುದನ್ನು ಗಮನಿಸಿದ್ದ ವ್ಯಕ್ತಿಯೊಬ್ಬರು ವಿಧಾನಸೌಧ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಹಣ ಯಾರು ಕೊಟ್ಟರು ಎಂಬ ಬಗ್ಗೆ ಮೋಹನ್‌ ವಿಚಾರಣೆ ವೇಳೆಯೂ ಬಾಯಿ ಬಿಟ್ಟಿಲ್ಲ. ಶನಿವಾರ ವಿಧಾನಸೌಧದ ಪುಟ್ಟರಂಗಶೆಟ್ಟಿ ಅವರ ಕಚೇರಿಯ ಮಹಜರ್‌ ನಡೆಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜತೆಗೆ ವಿಧಾನಸೌಧದ ಎಲ್ಲಾ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.

‘ನನಗೇನೂ ಗೊತ್ತಿಲ್ಲ’:

ಸಿಕ್ಕಿಬಿದ್ದಿರುವ ಆರೋಪಿ ಮೋಹನ್‌ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಸಚಿವರೂ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಪುಟ್ಟರಂಗ ಶೆಟ್ಟಿ ರಾಜೀನಾಮೆಗೆ ಆಗ್ರಹಿಸಿದ್ದಾರೆ.

“ಮೋದಿ ಈ ಹಿಂದಿನ ಸಿದ್ದರಾಮಯ್ಯ ಸರಕಾರವನ್ನು 10 ಪರ್ಸೆಂಟ್‌ ಕಮಿಷನ್‌ ಸರಕಾರ ಎಂದಿದ್ದರು. ಈ ಮೈತ್ರಿ ಸರಕಾರ 20 ಪರ್ಸೆಂಟ್‌ ಕಮಿಷನ್‌ ಸರಕಾರ ಎಂಬುದಕ್ಕೆ ಸಾಕ್ಷಿಗಳು ಸಿಗುತ್ತಿದೆ. ಸಚಿವ ಪುಟ್ಟರಂಗಶೆಟ್ಟಿ ಕೂಡಲೇ ರಾಜೀನಾಮೆ ನೀಡಬೇಕು” ಎಂದು ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಪುಟ್ಟರಂಗಶೆಟ್ಟಿ, “ಮೋಹನ್‌ನನ್ನು ಹಲವು ದಿನಗಳ ಹಿಂದೆಯೇ ಕಚೇರಿಯಿಂದ ಹೊರಗೆ ಹಾಕಿದ್ದೇನೆ. ಆತನಿಗೂ ನನಗೂ ಯಾವುದೇ ಸಂಬಂಧವಿಲ್ಲ. ಹಣದ ವಿಷಯವಾಗಿ ನನಗೇನೂ ಗೊತ್ತಿಲ್ಲ” ಎಂದಿದ್ದಾರೆ.

ದಾಖಲೆ ಇಲ್ಲದ ಹಣ ಒಳಗೆ ಹೋಗಿದ್ದು ಹೇಗೆ?

ಮೋಹನ್‌ ವಿಧಾಸಸೌಧದಿಂದ ಹೊರಗೆ ಹೋಗುವ ವೇಳೆ ಪೊಲೀಸರು ದಾಖಲೆ ಇಲ್ಲದ ಹಣವನ್ನು ಪತ್ತೆ ಹಚ್ಚಿದ್ದಾರೆ. ಆದರೆ, ದಾಖಲೆ ಇಲ್ಲದ ಹಣ ವಿಧಾನಸೌಧದ ಒಳಗೆ ಹೋಗಿದ್ದು ಹೇಗೆ ಎಂಬ ಪ್ರಶ್ನೆ ಈಗ ದೊಡ್ಡದಾಗಿದೆ. ದಾಖಲೆ ಇಲ್ಲದ ಹಣ ವಿಧಾನಸೌಧದ ಒಳಗೆ ಹೋಗಿರುವುದು ಭದ್ರತಾ ವೈಫಲ್ಯ. ದಾಖಲೆ ಇಲ್ಲದ ಹಣವನ್ನು ವಿಧಾನಸೌಧದ ಒಳಗೆ ಬಿಟ್ಟ ಭದ್ರತಾ ವೈಫಲ್ಯದ ಬಗ್ಗೆಯೂ ಸೂಕ್ತ ತನಿಖೆ ನಡೆಯಬೇಕಿದೆ.

ಚಿತ್ರಕೃಪೆ: ಉದಯವಾಣಿ