samachara
www.samachara.com
ಶಬರಿಮಲೆ ಗಲಭೆಯಲ್ಲಿ ಕಚ್ಚಾ ಬಾಂಬ್‍ ಮೊರೆತ; ಎಡ-ಬಲ ಮುಖಂಡರ ಮನೆ ಮೇಲೆ ದಾಳಿ
ಸುದ್ದಿ ಸಾರ

ಶಬರಿಮಲೆ ಗಲಭೆಯಲ್ಲಿ ಕಚ್ಚಾ ಬಾಂಬ್‍ ಮೊರೆತ; ಎಡ-ಬಲ ಮುಖಂಡರ ಮನೆ ಮೇಲೆ ದಾಳಿ

ಶಬರಿಮಲೆ ವಿಚಾರವಾಗಿ ಕೇರಳದಲ್ಲಿ ಎಡ ಹಾಗೂ ಬಲಪಂಥೀಯರ ಕಾದಾಟಕ್ಕೆ ಈಗ ಬಾಂಬ್‌ಗಳು ಬಳಕೆಯಾಗುತ್ತಿವೆ.

ಶಬರಿಮಲೆ ವಿಚಾರವಾಗಿ ಕೇರಳದಲ್ಲಿ ನಡೆಯುತ್ತಿರುವ ಗಲಭೆಯಲ್ಲಿ ಕಚ್ಚಾ ಬಾಂಬ್‍ಗಳ ಮೊರೆತ ಜೋರಾಗಿದೆ. ಶುಕ್ರವಾರ ರಾತ್ರಿ ಬಿಜೆಪಿ ಹಾಗೂ ಕಮ್ಯೂನಿಸ್ಟ್ ಪಕ್ಷದ ಇಬ್ಬರು ನಾಯಕರ ಮನೆಯಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡಿವೆ.

ಕಣ್ಣೂರಿನ ತಲಚೇರಿಯಲ್ಲಿ ಬಿಜೆಪಿ ಸಂಸದ ವಿ.ಮುರಳೀಧರನ್ ಮನೆಯ ಅಂಗಳದಲ್ಲೇ ದುಷ್ಕರ್ಮಿಗಳು ಕಚ್ಚಾಬಾಂಬ್ ಸ್ಪೋಟಿಸಿ ಪಲಾಯನ ಮಾಡಿದ್ದಾರೆ. ಬಾಂಬ್ ಸ್ಫೋಟದಿಂದಾಗಿ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಬಾಂಬ್ ಸ್ಫೋಟದ ನಂತರ ಪ್ರತಿಕ್ರಿಯೆ ನೀಡಿದ ಸಂದಸ ವಿ.ಮುರಳೀಧರನ್, “ಬಾಂಬ್ ಸ್ಫೋಟಗೊಂಡ ಸಂದರ್ಭದಲ್ಲಿ ನನ್ನ ಜೊತೆ ಮಗಳು ಹಾಗೂ ಅಳಿಯ ಇದ್ದರು. ಈ ಸ್ಫೋಟದ ಹಿಂದೆ ಕಮ್ಯೂನಿಸ್ಟ್ ಪಕ್ಷದ ಕೈವಾಡವಿದೆ” ಎಂದು ಆರೋಪಿಸಿದ್ದಾರೆ.

ಈ ಸ್ಫೋಟ ಸಂಭವಿಸಿ ಕೇವಲ ಒಂದು ಗಂಟೆಯ ಒಳಗೆ ಅದೇ ಪ್ರದೇಶದಲ್ಲಿರುವ ಕಮ್ಯೂನಿಸ್ಟ್ ಪಕ್ಷದ ಶಾಸಕ ಎ.ಎನ್. ಷಂಶೀರ್ ಮನೆಯ ಮುಂದೆಯೂ ಕಚ್ಚಾ ಬಾಂಬ್ ಸ್ಫೋಟಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಷಂಶೀರ್, ಘಟನೆಯ ಕುರಿತಾಗಿ ಆರ್‌ಎಸ್‌ಎಸ್‌ ಸಂಘಟನೆಯನ್ನು ದೂರಿದ್ದಾರೆ. “ಈ ಬಾಂಬ್ ಸ್ಫೋಟಡಕ್ಕೆ ಆರ್‌ಎಸ್‍ಎಸ್ ಸಂಘಟನೆಯೇ ಹೊಣೆ. ಆರ್‌ಎಸ್‌ಎಸ್‌ ಸಂಘಟನೆ ರಾಜ್ಯದ ಶಾಂತಿಯನ್ನು ಹಾಳುಗೆಡವುತ್ತಿದೆ” ಎಂದು ಟೀಕಿಸಿದ್ದಾರೆ.

Also read: ಶಬರಿಮಲೆ ಪ್ರತಿಭಟನೆ ಹಿಂದಿದೆ ‘ನಿಯೊ-ಬ್ರಾಹ್ಮಣಿಸಂ’: ಏನದು?

ಸ್ಫೋಟದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಈ ಘಟನೆಯ ಹಿಂದೆ ಸುಮಾರು 20 ಜನರ ಕೈವಾಡವಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದ ನಂತರ ಇಡೀ ಕೇರಳದಲ್ಲಿ ಶಾಂತಿ ಕದಡಿದೆ. ಕೇರಳದಲ್ಲಿ ಶಾಂತಿ ಕದಡಲು ಸಿಪಿಎಂ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರಣ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ದೂರುತ್ತಿವೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಾರದು ಎಂದು ಶತಮಾನಗಳಿಂದ ಸಂಪ್ರದಾಯವಾದಿಗಳು ಹಾಕಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ತೆಗೆದು ಹಾಕಿದೆ. ಸುಪ್ರೀಂಕೋರ್ಟ್‌ನ ಆದೇಶವನ್ನು ಪಾಲಿಸಲು ಕೇರಳ ಸರ್ಕಾರ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ” ಎಂದಿದ್ದಾರೆ.

ಒಟ್ಟಿನಲ್ಲಿ ಕೇರಳದಲ್ಲಿ ಶಬರಿಮಲೆ ವಿವಾದ ತಾರಕಕ್ಕೇರಿದೆ. ಇಡೀ ರಾಜ್ಯ ರಣಾಂಗಣವಾಗಿದೆ. ಸದ್ಯಕ್ಕಂತೂ ಶಾಂತಿ ನೆಲೆಸುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಬುಧವಾರದಿಂದ ಹತ್ತಾರು ಹಿಂದೂಪರ ಸಂಘಟನೆಗಳು ಕೇರಳದಲ್ಲಿ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಪ್ರತಿಭಟಿಸುತ್ತಿವೆ. ಗಲಭೆ ಸಂಬಂಧ ಈವರೆಗೆ ಪೊಲೀಸರು 801 ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ.

Also read: ಶಬರಿಮಲೆ ಎಂಬ ಸ್ಥಾಪಿತ ನಂಬಿಕೆ ಮತ್ತು 250 ಕೋಟಿ ರೂ. ವಾರ್ಷಿಕ ಆದಾಯದ ಹಿಂದಿನ ಅಸಲಿ ಕತೆ!