ಮಕ್ಕಳ ಪಾಲನಾ ಗೃಹಗಳಲ್ಲಿ ಹೊರಗಿನ ಊಟಕ್ಕೆ ಬ್ರೇಕ್‌: ಮಕ್ಕಳ ಕಲ್ಯಾಣ ಸಮಿತಿ ಸುತ್ತೋಲೆ
ಸುದ್ದಿ ಸಾರ

ಮಕ್ಕಳ ಪಾಲನಾ ಗೃಹಗಳಲ್ಲಿ ಹೊರಗಿನ ಊಟಕ್ಕೆ ಬ್ರೇಕ್‌: ಮಕ್ಕಳ ಕಲ್ಯಾಣ ಸಮಿತಿ ಸುತ್ತೋಲೆ

ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅಗತ್ಯ. ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಹೊರಗಿನಿಂದ ತಂದುಕೊಡುವ ಊಟದಿಂದ ಮಕ್ಕಳ ಆರೋಗ್ಯದ ಮೇಲೆ ತೊಂದರೆಯಾಗದಂತೆ ತಡೆಯಲು ಬೆಂಗಳೂರು ನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದಾಗಿದೆ.

ಹೋಟೆಲ್‌, ಕಲ್ಯಾಣ ಮಂಟಪ ಹಾಗೂ ಇತರೆ ಯಾವುದೇ ಕಡೆಗಳಿಂದ ಉಳಿದ ಅಥವಾ ಮೊದಲೇ ತಯಾರಿಸಿಕೊಂಡು ಬಂದಿರುವ ಊಟವನ್ನು ಮಕ್ಕಳಿಗೆ ಕೊಡುವಂತಿಲ್ಲ. ಆದರೆ, ದಿನಸಿ ಸಾಮಗ್ರಿಗಳನ್ನು ದಾನವಾಗಿ ಪಡೆಯಬಹುದು ಎಂದು ಮಕ್ಕಳ ಕಲ್ಯಾಣ ಸಮಿತಿ ಶುಕ್ರವಾರ ಸುತ್ತೋಲೆ ಹೊರಡಿಸಿದೆ.

ಮಕ್ಕಳಿಗೆ ಕೊಡುವ ಎಲ್ಲಾ ಸಮಯದ ಊಟ, ತಿನಿಸುಗಳು ಆಯಾ ಸಂಸ್ಥೆಗಳ ಮೇಲ್ವಿಚಾರಕರ ಉಸ್ತುವಾರಿಯಲ್ಲೇ ತಯಾರಾಗಬೇಕು. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅಗತ್ಯ. ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಬಾಲ ನ್ಯಾಯ ಕಾಯ್ದೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅನುಮತಿ ಪಡೆದು ನಡೆಸುತ್ತಿರುವ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಸುತ್ತೋಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಅಂಜಲಿ ರಾಮಣ್ಣ ತಿಳಿಸಿದ್ದಾರೆ.