samachara
www.samachara.com
‘ಪ್ರಭುತ್ವವೇ ಭಿನ್ನದನಿಗಳ ಕೊರಳು ಹಿಂಡುತ್ತಿದೆ’: ನಾಸಿರುದ್ದೀನ್‌ ಶಾ ವಿಷಾದ
ಸುದ್ದಿ ಸಾರ

‘ಪ್ರಭುತ್ವವೇ ಭಿನ್ನದನಿಗಳ ಕೊರಳು ಹಿಂಡುತ್ತಿದೆ’: ನಾಸಿರುದ್ದೀನ್‌ ಶಾ ವಿಷಾದ

“ಸತ್ಯ ಹೇಳುತ್ತಾರೆ ಎಂಬ ಒಂದೇ ಕಾರಣಕ್ಕೆ ಅಂಥವರ ಕೊರಳು ಹಿಂಡಲಾಗುತ್ತಿದೆ. ಇದು ನಮ್ಮ ಸಂವಿಧಾನದ ಮೌಲ್ಯವೇ?...

ಗೋರಕ್ಷಣೆಯ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಗುಂಪುದಾಳಿಗಳ ಬಗ್ಗೆ ಮಾತನಾಡಿ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್‌ ನಟ ನಾಸಿರುದ್ದೀನ್‌ ಶಾ ಮತ್ತೆ ಕೇಂದ್ರ ಸರಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

“ಸರಕಾರವೇ ಭಿನ್ನದನಿಗಳನ್ನು ಅಡಗಿಸಲು ಮುಂದಾಗಿದೆ. ಕಲಾವಿದರು, ಸಾಹಿತಿಗಳು, ಪತ್ರಕರ್ತರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಆಗದಂಥ ವಾತಾವರಣ ನಿರ್ಮಾಣವಾಗುತ್ತಿದೆ. ಸರಕಾರವೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ” ಎಂದಿದ್ದಾರೆ ಶಾ.

ಅಮ್ನೆಸ್ಟಿ ಸಂಸ್ಥೆಯ ಕಿರು ವಿಡಿಯೊದಲ್ಲಿ ಮಾತನಾಡಿರುವ ಶಾ, ಕೇಂದ್ರ ಸರಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ನೇರಾನೇರ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್‌ ಆಗಿದೆ.

“ಭಾರತ ನವೆಂಬರ್‌ 26, 1949ರಂದು ಸಾಂವಿಧಾನವನ್ನು ಅಂಗೀಕರಿಸಿತು. ಸಮಾಜದ ಪ್ರತಿಯೊಬ್ಬರ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ವಾತಂತ್ರ್ಯವನ್ನು ಕಾಯುವ ಮೌಲ್ಯಗಳನ್ನು ಸಂವಿಧಾನ ನೀಡುತ್ತಾ ಬಂದಿದೆ. ತಮ್ಮಿಷ್ಟದ ನಂಬಿಕೆಗಳನ್ನು ಆಚರಿಸುವ ಹಾಗೂ ಅಭಿಪ್ರಾಯ ಮಂಡಿಸುವ ವಾಕ್‌ ಸ್ವಾತಂತ್ರ್ಯಎಲ್ಲರಿಗೂ ಇದೆ. ದೇಶದಲ್ಲಿ ಎಲ್ಲರನ್ನೂ ಸಮನಾಗಿ ಕಾಣಬೇಕು. ಪ್ರತಿಯೊಬ್ಬರಿಗೂ ಘನತೆಯಿಂದ ಜೀವಿಸುವ ಹಕ್ಕಿದೆ. ಆದರೆ, ಈಗ ದೇಶದಲ್ಲಿ ಯಾರು ಬಡವರ, ದನಿ ಕಳೆದುಕೊಂಡವರ ಪರವಾಗಿ, ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೋ ಅವರ ದನಿ ಅಡಗಿಸಲಾಗುತ್ತಿದೆ” ಎಂದು ಶಾ ಆತಂಕ ವ್ಯಕ್ತಪಡಿಸಿದ್ದಾರೆ.

“ಹೀಗೆ ಮಾತನಾಡುತ್ತಿರುವವರು ನಿಜವಾಗಿಯೂ ದೇಶದ ಸಂವಿಧಾನದ ರಕ್ಷಕರು. ಆದರೆ, ಅಂಥವರನ್ನು ಬಂಧಿಸಿಡಲಾಗುತ್ತಿದೆ. ಕಲಾವಿದರು, ನಟರು, ಸಂಶೋಧಕರು, ಕವಿಗಳ ಅಭಿವ್ಯಕ್ತಿಯನ್ನೇ ನಿಯಂತ್ರಿಸಲಾಗುತ್ತಿದೆ. ಪತ್ರಕರ್ತರ ಬಾಯಿಯನ್ನೂ ಮುಚ್ಚಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ಎತ್ತರೆತ್ತರದ ದ್ವೇಷದ ಗೋಡೆಗಳನ್ನು ಕಟ್ಟಲಾಗುತ್ತಿದೆ. ಅಮಾಯಕರನ್ನು ಕೊಲ್ಲಲಾಗುತ್ತಿದೆ. ದೇಶದಲ್ಲಿ ಅಮಾನವೀಯತೆ, ಕ್ರೌರ್ಯ ಹೆಚ್ಚುತ್ತಿದೆ” ಎಂದಿದ್ದಾರೆ ಶಾ.

Also read: ‘ಬದುಕಿ, ಬದುಕಲು ಬಿಡಿ’: ನಟ ನಾಸಿರುದ್ದೀನ್‌ ಶಾ ಹೊರಹಾಕಿದ ಸಿಟ್ಟಿನ ಅಂತರಾಳ ಇಷ್ಟೆ...

“ದಮನಿತರ ಪರ ದ್ವನಿ ಎತ್ತಿದವರ ಕಚೇರಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಅವರ ಲೈಸೆನ್ಸ್‌ಗಳನ್ನು ರದ್ದುಗೊಳಿಸುವ ಹಾಗೂ ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಮೂಲಕ ಅವರನ್ನು ಸುಮ್ಮನಿರಿಸಲಾಗುತ್ತಿದೆ. ಸತ್ಯ ಹೇಳುತ್ತಾರೆ ಎಂಬ ಒಂದೇ ಕಾರಣಕ್ಕೆ ಅವರನ್ನು ಕೊರಳು ಹಿಂಡಲಾಗುತ್ತಿದೆ. ಇದು ನಮ್ಮ ಸಂವಿಧಾನದ ಮೌಲ್ಯವೇ?” ಶಾ ಪ್ರಶ್ನಿಸಿದ್ದಾರೆ.

“ಇಂದು ದೇಶದಲ್ಲಿ ಭಿನ್ನಾಭಿಪ್ರಾಯಕ್ಕೆ ಜಾಗವೇ ಇಲ್ಲದಂತಾಗಿದೆ. ಶ್ರೀಮಂತರು, ಶಕ್ತಿಯುತರು ಮಾತ್ರ ತಮ್ಮಿಷ್ಟದಂತೆ ಬದುಕುತ್ತಿದ್ದಾರೆ. ಆದರೆ ಬಡವರು ತುಳಿತಕ್ಕೊಳಗಾಗುತ್ತಿದ್ದಾರೆ. ನ್ಯಾಯವನ್ನು ಕತ್ತಲೆಯಲ್ಲಿಡಲಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

“2018ರಲ್ಲಿ ಭಾರತ ದೊಡ್ಡ ಪ್ರಮಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಗೆ ಸಾಕ್ಷಿಯಾಗಿತ್ತು. ದೇಶದಲ್ಲಿ ಅಭಿಪ್ರಾಯಭೇದಕ್ಕೆ ಜಾಗವೇ ಇಲ್ಲದಂತಾಗಿತ್ತು. 2019ರ ಹೊಸ ವರ್ಷದಲ್ಲಾದರೂ ಸಂವಿಧಾನದ ಮೌಲ್ಯವನ್ನು ಎತ್ತಿಹಿಡಿಯಲು ಮುಂದಾಗೋಣ. ಈ ಮೂಲಕ ಕೇಂದ್ರ ಸರಕಾರ ತನ್ನ ತಪ್ಪುಗಳನ್ನು ಕೊನೆಗೊಳಿಸುವಂತೆ ಒತ್ತಡ ತರೋಣ” ಎಂದಿದ್ದಾರೆ.