ಭಾರತದ ಮೊದಲ ‘ಪರಾರಿಯಾಗಿರುವ ಆರ್ಥಿಕ ಅಪರಾಧಿ’ ವಿಜಯಮಲ್ಯ
ಸುದ್ದಿ ಸಾರ

ಭಾರತದ ಮೊದಲ ‘ಪರಾರಿಯಾಗಿರುವ ಆರ್ಥಿಕ ಅಪರಾಧಿ’ ವಿಜಯಮಲ್ಯ

ವಿಜಯ್‌ ಮಲ್ಯ ‘ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆ-2018’ರ ಅಡಿಯ ಮೊದಲ ಅಪರಾಧಿಯಾಗಿದ್ದಾರೆ.

ಬ್ಯಾಂಕ್‌ಗಳಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್‌ ಮಲ್ಯ ಅವರನ್ನು ಮುಂಬೈನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ‘ ಪರಾರಿಯಾಗಿರುವ ಆರ್ಥಿಕ ಅಪರಾಧಿ’ ಎಂದು ಘೋಷಿಸಿದೆ. ಈ ಮೂಲಕ ವಿಜಯ್‌ ಮಲ್ಯ ‘ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆ-2018’ರ ಅಡಿಯ ಮೊದಲ ಅಪರಾಧಿಯಾಗಿದ್ದಾರೆ.

ಹೊಸದಾಗಿ ಜಾರಿಗೆ ತಂದಿರುವ ‘ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆ’ಯ ಸೆಕ್ಷನ್‌ 12ರ ಅಡಿಯಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಎಸ್‌. ಅಝ್ಮಿ, ಮಲ್ಯ ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಶನಿವಾರ ಘೋಷಿಸಿದ್ದಾರೆ.

ಮಲ್ಯ, ನೀರವ್‌ ಮೋದಿ, ಮೇಹುಲ್‌ ಚೋಕ್ಸಿ ಸೇರಿದಂತೆ ಹಲವು ಉದ್ಯಮಿಗಳು ಬ್ಯಾಂಕ್‌ಗಳಿಂದ ನೂರಾರು ಕೋಟಿ ಸಾಲ ಪಡೆದು, ಆರ್ಥಿಕ ವಂಚನೆ ಎಸಗಿ ಭಾರತದಿಂದ ಪರಾರಿಯಾಗಿದ್ದಾರೆ. ಇಂತಹ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳನ್ನು ಕಾನೂನಿನ ಚೌಕಟ್ಟಿಗೆ ತರಲು ಈ ಹೊಸ ಕಾಯ್ದೆ ಸಹಕಾರಿಯಾಗಿದೆ.

ಈ ಕಾಯ್ದೆಯ ಅಡಿಯಲ್ಲಿ, ಯಾವುದೇ ವ್ಯಕ್ತಿ ಕನಿಷ್ಠ 100 ಕೋಟಿ ರೂಪಾಯಿ ವಂಚನೆ ಅಪರಾಧದಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧ ಬಂಧನದ ವಾರಂಟ್‌ ಇದ್ದು, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಆತ ಭಾರತದಿಂದ ಪರಾರಿಯಾಗಿದ್ದರೆ ಅಂತವರನ್ನು ‘ ಪರಾರಿಯಾಗಿರುವ ಆರ್ಥಿಕ ಅಪರಾಧಿ’ ಎಂದು ಘೋಷಿಸಬಹುದು.

ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳನ್ನು ದೇಶಕ್ಕೆ ಕರೆತಂದು ದಂಡಿಸಲು ಈ ಹೊಸ ಕಾಯ್ದೆ ನೆರವಾಗಲಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಈ ಹೊಸ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದಿದೆ.

ಕಿಂಗ್‌ ಫಿಷರ್‌ ಏರ್‌ಲೈನ್ಸ್‌ ಹೆಸರಿನಲ್ಲಿ ಭಾರತದ ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 9000 ಕೋಟಿ ರೂಪಾಯಿ ಸಾಲ ಪಡೆದಿದ್ದ ವಿಜಯ್‌ ಮಲ್ಯ ಕಿಂಗ್‌ ಫಿಷರ್‌ ನಷ್ಟದ ಬಳಿಕ ಲಂಡನ್‌ಗೆ ಪರಾರಿಯಾಗಿದ್ದರು. ಕಳೆದ ಎರಡು ವರ್ಷದಿಂದ ಜಾರಿ ನಿರ್ದೇಶನಾಲಯ ಇವರನ್ನು ದೇಶಕ್ಕೆ ಕರೆತರಲು ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಆದರೆ, ಲಂಡನ್‌ ಕೋರ್ಟ್‌ ಅದಕ್ಕೆ ಅವಕಾಶ ನೀಡಿರಲಿಲ್ಲ.

ಮಲ್ಯ ಹಸ್ತಾಂತರಿಸಲು ಭಾರತದ ಜೈಲುಗಳ ಸ್ಥಿತಿಯ ಬಗ್ಗೆ ವಿಡಿಯೋ ಲಂಡನ್‌ ಕೋರ್ಟ್‌ ಸಾಕ್ಷ್ಯಾಧಾರಗಳನ್ನು ಕೇಳಿತ್ತು. ಭಾರತದ ಅಧಿಕಾರಿಗಳು ಭಾರತದ ಜೈಲಿನ ವಿಡಿಯೋವನ್ನು ಲಂಡನ್‌ ಕೋರ್ಟ್‌ಗೆ ಸಲ್ಲಿಸಿದ್ದರು. ಭಾರತದ ಜೈಲುಗಳ ಸ್ಥಿತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದ ಲಂಡನ್‌ ಕೋರ್ಟ್‌ ಕಳೆದ ಡಿಸೆಂಬರ್‌ನಲ್ಲಿ ಮಲ್ಯ ಗಡಿಪಾರಿಗೆ ಆದೇಶಿಸಿತ್ತು.

ಲಂಡನ್‌ ಕೋರ್ಟ್‌ ಮಲ್ಯ ಗಡಿಪಾರಿಗೆ ಆದೇಶಿಸಿದ್ದು ಮೋದಿ ಸರಕಾರದ ಸಾಧನೆ ಎಂದೇ ದೇಶದ ಭಕ್ತಗಣ ಸಂಭ್ರಮಿಸಿತ್ತು. ಆ ಗಡಿಪಾರು ಆದೇಶದ ನೈಜತೆ ಏನು ಎಂದು ತಿಳಿಯಲು ಈ ಮುಂದಿನ ಸ್ಟೋರಿ ಓದಿ:

Also read: ನ್ಯಾಯಾಂಗಣದಿಂದ ರಾಜಕೀಯದಂಗಳಕ್ಕೆ ಪುಟಿದ ಮಲ್ಯ ಗಡಿಪಾರು ಪ್ರಕರಣದ ಚೆಂಡು