samachara
www.samachara.com
‘ರೈತರು ಕಾಂಗ್ರೆಸ್‌ ಪಾಲಿಗೆ ಕೇವಲ ಓಟ್‌ ಬ್ಯಾಂಕ್’: ಪ್ರಧಾನಿ ಮೋದಿ ಮೂದಲಿಕೆ
ಸುದ್ದಿ ಸಾರ

‘ರೈತರು ಕಾಂಗ್ರೆಸ್‌ ಪಾಲಿಗೆ ಕೇವಲ ಓಟ್‌ ಬ್ಯಾಂಕ್’: ಪ್ರಧಾನಿ ಮೋದಿ ಮೂದಲಿಕೆ

ಈ ಹಿಂದೆ ಕಾಂಗ್ರೆಸ್‌ ಗರೀಬಿ ಹಠಾವೋ ಹೆಸರಿನಲ್ಲಿ ದೇಶಕ್ಕೆ ಮೋಸ ಮಾಡುತ್ತಿತ್ತು. ಆದರೆ, ಈಗ ಸಾಲಮನ್ನಾ ಹೆಸರಿನಲ್ಲಿ ರೈತರಿಗೆ ಮೋಸ ಮಾಡುತ್ತಿದೆ ಎಂದಿದ್ದಾರೆ ನರೇಂದ್ರ ಮೋದಿ.

ರೈತರು ನಮ್ಮ ಪಾಲಿಗೆ ಅನ್ನದಾತರು. ಆದರೆ, ಕಾಂಗ್ರೆಸ್‌ ಪಾಲಿಗೆ ರೈತರೆಂದರೆ ಓಟ್‌ ಬ್ಯಾಂಕ್” ಎಂದು ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷ ಕಾಂಗ್ರೆಸ್‌ ಮೇಲೆ ಆರೋಪ ಹೊರಿಸಿದ್ದಾರೆ.

ಶನಿವಾರ ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ 16,604 ಹೆಕ್ಟೇರ್ ಭೂಮಿಗೆ ನೀರುಣಿಸುವ 2391.36 ಕೋಟಿ ರೂಪಾಯಿ ಮೊತ್ತದ ವಿವಿಧ ನೀರಾವರಿ ಯೋಜನೆ ಚಾಲನೆ ನೀಡಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

“ಜಾರ್ಖಂಡ್‌ನ ಮಂಡಲ್‌ ಅಣೆಕಟ್ಟಿನ ಕಾಮಗಾರಿಗೆ ಶಂಕುಸ್ಥಾಪನೆಯಾಗಿದ್ದು 1972ರಲ್ಲಿ. ಆದರೆ ಕೆಲಸ ಆರಂಭವಾದದ್ದು 1993ರಲ್ಲಿ. ಈ ಅಣೆಕಟ್ಟೆಯ ಕಾಮಗಾರಿ ನಿಧಾನಗತಿಯಿಂದ ಸಾಗಲು ಈ ಹಿಂದಿನ ಕಾಂಗ್ರೆಸ್‌ ಸರ್ಕಾರವೇ ಕಾರಣ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ” ಎಂದು ಆರೋಪಿಸಿದರು.

“ರೈತರು ನಮಗೆ ಅನ್ನದಾತರು. ಆದರೆ ಕಾಂಗ್ರೆಸ್‌ ಪಾಲಿಗೆ ರೈತರು ಓಟ್‌ ಬ್ಯಾಂಕ್. ನಮಗೂ ಅವರಿಗೂ ಇರುವ ದೊಡ್ಡ ವ್ಯತ್ಯಾಸವಿದು. ಈ ಹಿಂದೆ ಕಾಂಗ್ರೆಸ್‌ ಗರೀಬಿ ಹಠಾವೋ ಹೆಸರಿನಲ್ಲಿ ದೇಶಕ್ಕೆ ಮೋಸ ಮಾಡುತ್ತಿತ್ತು. ಆದರೆ, ಈಗ ಸಾಲಮನ್ನಾ ಹೆಸರಿನಲ್ಲಿ ರೈತರಿಗೆ ಮೋಸ ಮಾಡುತ್ತಿದೆ. ಸಾಲಮನ್ನಾ ಮಾಡುವುದಾಗಿ ಹೇಳಿ ಕಾಂಗ್ರೆಸ್‌ ರೈತರ ದಾರಿ ತಪ್ಪಿಸುತ್ತಿದೆ” ಎಂದಿದ್ದಾರೆ.

“ಕರ್ನಾಕದಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಸಮ್ಮಿಶ್ರ ಸರ್ಕಾರ ಈವರೆಗೆ ಸಾಲಮನ್ನಾ ಮಾಡಿಲ್ಲ. ಪರಿಣಾಮ ಪೊಲೀಸರು ರೈತರ ಮನೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇನ್ನೂ ಪಂಜಾಬ್‌ನಲ್ಲೂ ಕಾಂಗ್ರೆಸ್‌ ಸರ್ಕಾರ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿತ್ತು. ಆದರೆ ಇದು ಅಸಾಧ್ಯವಾದ ಮಾತು” ಎಂದು ಕುಹಕವಾಡಿದ್ದಾರೆ.

ಐದು ಮಂದಿ ಫಲಾನುಭವಿಗಳಿಗೆ ‘ಪ್ರಧಾನಮಂತ್ರಿ ಆವಾಸ್ ಯೋಜನೆ’ ಅಡಿಯಲ್ಲಿ ನಿರ್ಮಿಸಲಾದ ಮನೆಗಳನ್ನು ವಿತರಿಸಿದ ಅವರು, “ಎನ್‌ಡಿಎ ಸರ್ಕಾರದ ಕಾಲದಲ್ಲಿ ಅಪಾರ ಸಂಖ್ಯೆಯ ಮನೆಗಳನ್ನು ನಿರ್ಮಿಸಿ ಅದನ್ನು ಬಡವರಿಗೆ ಹಂಚಲಾಗಿದೆ. ಈ ಸಾಧನೆಯನ್ನು ಸರಿಗಟ್ಟಲು ಯುಪಿಎ ಸರ್ಕಾಕ್ಕೆ ಇನ್ನೂ 25 ವರ್ಷಗಳು ಬೇಕಾಗಬಹುದೇನೋ?” ಎಂದು ಮೂದಲಿಸಿದ್ದಾರೆ.