samachara
www.samachara.com
‘ರಫೇಲ್‌ ಒಪ್ಪಂದ ಬೋಫೋರ್ಸ್‌ನಂತಲ್ಲ’ : ನಿರ್ಮಲಾ ತಿರುಗೇಟು
ಸುದ್ದಿ ಸಾರ

‘ರಫೇಲ್‌ ಒಪ್ಪಂದ ಬೋಫೋರ್ಸ್‌ನಂತಲ್ಲ’ : ನಿರ್ಮಲಾ ತಿರುಗೇಟು

“ಬೋಫೋರ್ಸ್‌ ಒಪ್ಪಂದ ಒಂದು ದೊಡ್ಡ ಹಗರಣ. ಆದರೆ, ರಫೇಲ್ ಒಪ್ಪಂದ ಬೋಫೋರ್ಸ್‌ನಂತಲ್ಲ. ಬದಲಾಗಿ ಇದು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾದ ಒಪ್ಪಂದ” ಎಂದಿದ್ದಾರೆ ನಿರ್ಮಲಾ ಸೀತಾರಾಮನ್.

ರಫೇಲ್ ಡೀಲ್ ಕುರಿತ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, “ತಾವು ದೇಶದ ರಕ್ಷಣೆಗಾಗಿ ಒಪ್ಪಂದ ಮಾಡಿಕೊಂಡಿದ್ದೇವೆಯೇ ಹೊರತು, ಡೀಲ್ ಮಾಡಲು ಬಂದಿಲ್ಲ” ಎಂದಿದ್ದಾರೆ.

ನಿನ್ನೆ ರಫೇಲ್ ಡೀಲ್ ಓಪನ್ ಪರೀಕ್ಷೆಗೆ ಸಂಸತ್‍ಗೆ ಬಾರದ ಮೋದಿ, ಪಂಜಾಬ್‍ನಲ್ಲಿ ಮಕ್ಕಳಿಗೆ ಪಾಠ ಮಾಡಲು ಹೋಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದರು, ಅಲ್ಲದೆ ಶುಕ್ರವಾರವೂ ರಫೇಲ್ ಚರ್ಚೆ ಮುಂದುವರೆಸುವ ಸೂಚನೆ ನೀಡಿದ್ದರು. ಅದರಂತೆ ಇಂದಿನ ಅಧಿವೇಶನದಲ್ಲೂ ರಫೇಲ್ ಡೀಲ್‍ನದ್ದೇ ಗದ್ದಲ್ಲ ಕೇಳಿಬಂದಿತ್ತು. ವಿರೋಧ ಪಕ್ಷಗಳು ಆಡಳಿತ ಪಕ್ಷದ ಮೇಲೆ ಪ್ರಶ್ನೆಗಳ ಬಾಣಗಳನ್ನೇ ಹರಿಸಿದ್ದವು.

ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, “ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 1980ರಲ್ಲಿ ಭೊಫೋರ್ಸ್ ಹಗರಣ ದೊಡ್ಡ ಮಟ್ಟದಲ್ಲಿ ಸ್ಫೋಟಗೊಂಡಿತ್ತು. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಅಂದು ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ಬೋಫೋರ್ಸ್‌ ಒಪ್ಪಂದ ಒಂದು ದೊಡ್ಡ ಹಗರಣ. ಆದರೆ, ರಫೇಲ್ ಒಪ್ಪಂದ ಬೋಫೋರ್ಸ್‌ನಂತಲ್ಲ. ಬದಲಾಗಿ ಇದು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾದ ಒಪ್ಪಂದ” ಎಂದಿದ್ದಾರೆ.

ಅಧಿವೇಶನದಲ್ಲಿ ರಫೇಲ್ ಯುದ್ಧ ವಿಮಾನದ ಕುರಿತು ಮಾಹಿತಿ ನೀಡಿದ ಅವರು, “ರಾಫೇಲ್ ಒಪ್ಪಂದದ ಮಾತುಕತೆ ಮುಗಿದಿದೆ. ಈಗಾಗಲೇ 18 ಯುದ್ಧ ವಿಮಾನಗಳು ಪೂರೈಕೆಯಾಗಿದ್ದು, 2022ರ ವೇಳೆಗೆ ವಾಯುಸೇನೆಗೆ ಉಳಿದ ಫೈಟರ್ ಜೆಟ್‍ಗಳ ಪೂರೈಕೆಯಾಗಲಿದೆ. ಉತ್ತರ ಹಾಗೂ ಪಶ್ಚಿಮ ಗಡಿಯಲ್ಲಿ ದೇಶದ ಭದ್ರತೆಗೆ ಸಕಾಲಕ್ಕೆ ರಕ್ಷಣಾ ಸಾಮಾಗ್ರಿಗಳನ್ನು ಪೂರೈಸುವ ತುರ್ತು ಇದೆ. ಆದರೆ ಭಾರತ ವಾಯುಸೇನೆಗೆ ಯುದ್ಧ ವಿಮಾನಗಳ ಅಗತ್ಯವಿದ್ದಾಗ, ಆ ಒಪ್ಪಂದವನ್ನು ಅರ್ಧಕ್ಕೆ ಬಿಟ್ಟು ಇಂದು ಎಚ್‍ಎಎಲ್ (ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್) ಪರವಾಗಿ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ” ಎಂದು ಅವರು ಆರೋಪಿಸಿದರು.

ರಫೇಲ್ ಯುದ್ಧ ವಿಮಾನದ ಬೆಲೆಯ ಬಗ್ಗೆ ಉಲ್ಲೇಖಿಸಿದ ಅವರು, “ಕಾಂಗ್ರೆಸ್ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಯುಪಿಎ ಅವಧಿಯಲ್ಲಿ ಯುದ್ಧ ವಿಮಾನದ ಬೆಲೆಯನ್ನು 737 ಕೋಟಿ ರೂಪಾಯಿಗೆ ನಿಗದಿ ಮಾಡಲಾಗಿತ್ತು. ಆದರೆ ಎನ್‍ಡಿಎ ಅವಧಿಯಲ್ಲಿ 670 ಕೋಟಿ ರೂಪಾಯಿಗೆ ಇಳಿಸಲಾಗಿದೆ. ಇದು ಯುಪಿಎ ಅವಧಿಯ ಬೆಲೆಗಿಂತ ಶೇ. 9ರಷ್ಟು ಅಗ್ಗವಾಗಿದೆ” ಎಂದು ತಿಳಿಸಿದ್ದಾರೆ.