ಬ್ರಾಹ್ಮಣ ನಿರುದ್ಯೋಗಿಗಳಿಗೆ ಆಂಧ್ರದಲ್ಲಿ ‘ಕಾರ್ ಭಾಗ್ಯ’; ಚುನಾವಣಾ ಓಲೈಕೆ ಶುರು!
ಸುದ್ದಿ ಸಾರ

ಬ್ರಾಹ್ಮಣ ನಿರುದ್ಯೋಗಿಗಳಿಗೆ ಆಂಧ್ರದಲ್ಲಿ ‘ಕಾರ್ ಭಾಗ್ಯ’; ಚುನಾವಣಾ ಓಲೈಕೆ ಶುರು!

ಕಾರ್‌ ಕೊಳ್ಳಲು ಬ್ರಾಹ್ಮಣ ಕ್ಷೇಮಾಭಿವೃದ್ಧಿ ನಿಗಮದಿಂದ 2 ಲಕ್ಷ ಸಬ್ಸಿಡಿ ನೀಡಲಾಗಿದೆ. ವಾಹನದ ಒಟ್ಟು ಬೆಲೆಯ ಶೇಕಡ 10ರಷ್ಟು ಫಲಾನುಭವಿಗಳು ಆರಂಭದಲ್ಲಿ ಪಾವತಿಸಬೇಕಿದೆ.

ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಆಂಧ್ರಪ್ರದೇಶ ಸರಕಾರ ಮೇಲ್ಜಾತಿಗಳ ಬಡ ಜನರನ್ನು ಗುರುತಿಸಲು ಮುಂದಾಗಿದ್ದು, ಬ್ರಾಹ್ಮಣ ನಿರುದ್ಯೋಗಿಗಳಿಗೆ ಸಬ್ಸಿಡಿಯಲ್ಲಿ ಕಾರ್‌ ನೀಡುವ ಯೋಜನೆ ಆರಂಭಿಸಿದೆ.

ಬ್ರಾಹ್ಮಣ ಕ್ಷೇಮಾಭಿವೃದ್ಧಿ ನಿಗಮದ ಮೂಲಕ ಶುಕ್ರವಾರ ಈ ಯೋಜನೆಯ ಮೊದಲ ಹಂತದ 30 ಕಾರ್‌ಗಳನ್ನು ಬಡ ಬ್ರಾಹ್ಮಣ ನಿರುದ್ಯೋಗಿ ಯುವಕರಿಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿತರಿಸಿದ್ದಾರೆ.

ಬ್ರಾಹ್ಮಣ ಸಮುದಾಯದಲ್ಲಿನ ನಿರುದ್ಯೋಗ, ಬಡತನ ನಿರ್ಮೂಲನೆಗಾಗಿ ಬ್ರಾಹ್ಮಣ ಕ್ಷೇಮಾಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳನ್ನು ಆಂಧ್ರದಲ್ಲಿ ಆರಂಭಿಸಲಾಗಿದೆ. ಅದರ ಭಾಗವಾಗಿ ಅರ್ಹ ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ಕಾರ್‌ ಕೊಳ್ಳಲು ನೆರವು ನೀಡಲಾಗುತ್ತಿದೆ.

ಕಾರ್‌ ಕೊಳ್ಳಲು ಬ್ರಾಹ್ಮಣ ಕ್ಷೇಮಾಭಿವೃದ್ಧಿ ನಿಗಮದಿಂದ 2 ಲಕ್ಷ ಸಬ್ಸಿಡಿ ನೀಡಲಾಗಿದೆ. ವಾಹನದ ಒಟ್ಟು ಬೆಲೆಯ ಶೇಕಡ 10ರಷ್ಟು ಫಲಾನುಭವಿಗಳು ಆರಂಭದಲ್ಲಿ ಪಾವತಿಸಬೇಕಿದೆ. ಉಳಿದ ಮೊತ್ತವನ್ನು ಕಂತುಗಳಲ್ಲಿ ಕಟ್ಟಬೇಕು.

ಆಂಧ್ರದಲ್ಲಿ 2014ರಲ್ಲಿ ಬ್ರಾಹ್ಮಣ ಕ್ಷೇಮಾಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಆಂಧ್ರ ಸರಕಾರ ನಿಗಮಕ್ಕೆ 285 ಕೋಟಿ ರೂಪಾಯಿ ಅನುದಾನ ನೀಡಿದೆ. ಬ್ರಾಹ್ಮಣ ಸಮುದಾಯದ ಶಿಕ್ಷಣ, ಸ್ವಯಂ ಉದ್ಯೋಗ ಪ್ರೋತ್ಸಾಹಕ್ಕೆ ಈ ಹಣ ಖರ್ಚು ಮಾಡಲಾಗುತ್ತಿದೆ. ಈ ಯೋಜನೆಗಳ ಮುಂದುವರಿದ ಭಾಗವಾಗಿ ನಿರುದ್ಯೋಗಿ ಬ್ರಾಹ್ಮಣರಿಗೆ ಕಾರ್‌ಗಳನ್ನು ವಿತರಿಸಲಾಗಿದೆ.