ಶಬರಿಮಲೆ ಪ್ರತಿಭಟನೆ: ದಿಟ್ಟತನ ಮೆರೆದ ವಿಡಿಯೋ ಜರ್ನಲಿಸ್ಟ್‌ ಫೊಟೋ ವೈರಲ್
ಸುದ್ದಿ ಸಾರ

ಶಬರಿಮಲೆ ಪ್ರತಿಭಟನೆ: ದಿಟ್ಟತನ ಮೆರೆದ ವಿಡಿಯೋ ಜರ್ನಲಿಸ್ಟ್‌ ಫೊಟೋ ವೈರಲ್

ಪ್ರತಿಭಟನೆಯನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದ ಸ್ಥಳೀಯ ವಾಹಿನಿಯ ವಿಡಿಯೋ ಜರ್ನಲಿಸ್ಟ್‌ ಹಲ್ಲೆಗೊಳಗಾದ ನಂತರವೂ ಅಳುತ್ತಲೇ ತನ್ನ ಕರ್ತವ್ಯ ನಿರ್ವಹಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಸಂಪ್ರದಾಯವಾದಿಗಳ ವಿರೋಧವನ್ನೂ ಮೀರಿ ಇಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದ ನಂತರ ಕೇರಳದಲ್ಲಿ ಆರಂಭವಾಗಿರುವ ಪ್ರತಿಭಟನೆಯ ಕಾವು ಸದ್ಯಕ್ಕೆ ತಣಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈ ಪ್ರತಿಭಟನೆಯನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದ ಸ್ಥಳೀಯ ವಾಹಿನಿಯ ವಿಡಿಯೋ ಜರ್ನಲಿಸ್ಟ್‌ ಹಲ್ಲೆಗೊಳಗಾದ ನಂತರವೂ ಅಳುತ್ತಲೇ ತನ್ನ ಕರ್ತವ್ಯ ನಿರ್ವಹಿಸಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿಲ್ಲದ ಮೆಚ್ಚುಗೆ ಗಳಿಸುತ್ತಿದೆ.

ಸ್ಥಳೀಯ ‘ಕೈರಾಲಿ ನ್ಯೂಸ್‌’ನ ವಿಡಿಯೋ ಜರ್ನಲಿಸ್ಟ್‌ ಶಾಜೀಲಾ ಅಬ್ದುಲ್ ರೆಹಮಾನ್ ಹಲ್ಲೆಗೊಳಗಾದ ಛಾಯಾಗ್ರಾಹಕಿ. ಈಕೆ ತನ್ನ ಕೆಲಸದಲ್ಲಿ ನಿರತರಾಗಿದ್ದಾಗ, ಪ್ರತಿಭಟನಾ ಗುಂಪಿನ ನಾಲ್ಕೈದು ಜನ ಗಲಾಟೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಹಿಂದಿನಿಂದ ಬಂದು ಕ್ಯಾಮರಾವನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಕೆ ಕ್ಯಾಮರಾದೊಂದಿಗೆ ನೆಲಕ್ಕೆ ಬಿದ್ದಿದ್ದಾರೆ. ಆದರೂ ಆಕೆ ಮತ್ತೆ ಮೇಲೆದ್ದು ಎಲ್ಲಾ ಅಡಚಣೆಯಲ್ಲೂ ತನ್ನ ಕರ್ತವ್ಯ ನಿರ್ವಹಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜತೆಗೆ ಅಳುತ್ತಲೆ ಕರ್ತವ್ಯ ನಿರ್ವಹಿಸುತ್ತಿರುವ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತ ವೈರಲ್ ಆಗುತ್ತಿದೆ.

ಘಟನೆಯ ನಂತರ ಪತ್ರಕರ್ತೆ ಶಾಜೀಲಾ ಅಬ್ದುಲ್ ರೆಹಮಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, “ನಾನು ಹೆದರಿಕೆಯಿಂದ ಅಳಲಿಲ್ಲ, ಅಸಹಾಯಕತೆಯಿಂದ ಅಳುತ್ತಿದ್ದೆ. ಸಾರ್ವಜನಿಕ ಸ್ಥಳದಲ್ಲಿ ಕೆಲಸ ಮಾಡುವಾಗ ಹಿಂದಿನಿಂದ ನಾಲ್ಕೈದು ಜನ ಬಂದು ನನ್ನನ್ನು ನೆಲಕ್ಕೆ ತಳ್ಳಿ ನನ್ನ ಕ್ಯಾಮೆರಾವನ್ನು ಕಸಿದುಕೊಳ್ಳಲು ಮುಂದಾದರೆ ನಾನು ಏನು ಮಾಡಲು ಸಾಧ್ಯ?”

“ಅವರಿಂದ ಮತ್ತೆ ನನ್ನ ಕ್ಯಾಮೆರಾವನ್ನು ಪಡೆದು ಬ್ಯಾಟರಿ ಹಾಕಿ ನೋಡಿದಾಗ ನಾನು ಆ ವರೆಗೆ ತೆಗೆದಿದ್ದ ಎಲ್ಲಾ ಅಮೂಲ್ಯವಾದ ದೃಶ್ಯಗಳು ಡಿಲೀಟ್ ಆಗಿತ್ತು. ಹೀಗಾಗಿ ನಾನು ಅಳುವುದು ಜನರಿಗೆ ಕಾಣದಿರಲಿ ಎಂಬ ಕಾರಣಕ್ಕೆ ಕ್ಯಾಮೆರಾ ಹಿಂದೆ ನನ್ನ ಮುಖವನ್ನು ಮುಚ್ಚಿಕೊಂಡಿದ್ದೆ” ಎಂದು ಹೇಳಿದ್ದಾರೆ.

ಶಬರಿಮಲೆ ವಿಚಾರದಲ್ಲಿ ಕೇರಳ ಹಿಂಸಾತ್ಮಕ ಪ್ರತಿಭಟನೆಗೆ ಸಾಕ್ಷಿಯಾಗುತ್ತಿದೆ. ಹಿಂದುತ್ವ ಸಂಘಟನೆಗಳಿಂದ ಪತ್ರಕರ್ತರು ಮತ್ತು ಪೊಲೀಸರ ಮೇಲೆ ನಡೆಯುತ್ತಿರುವ ದಾಳಿ ಪ್ರಕರಣಗಳು ಸದ್ದು ಮಾಡುತ್ತಿವೆ.

ಕೃಪೆ: ದಿ ಟೆಲಿಗ್ರಾಫ್‌
ಕೃಪೆ: ದಿ ಟೆಲಿಗ್ರಾಫ್‌