samachara
www.samachara.com
ರಾಮ ಮಂದಿರ ಆಯ್ತು; ಈಗ ವಿವಾದದ ಕೇಂದ್ರದಲ್ಲಿ ‘ವಂದೇ ಮಾತರಂ’ ಗೀತೆ!
ಸುದ್ದಿ ಸಾರ

ರಾಮ ಮಂದಿರ ಆಯ್ತು; ಈಗ ವಿವಾದದ ಕೇಂದ್ರದಲ್ಲಿ ‘ವಂದೇ ಮಾತರಂ’ ಗೀತೆ!

“ಬಿಜೆಪಿ ರಾಮ ಮಂದಿರದ ವಿಚಾರದಂತೆ , ವಂದೇ ಮಾತರಂ ವಿಚಾರದಲ್ಲೂ ರಾಜಕೀಯ ನಡೆಸುವುದು ತಪ್ಪು ಇದನ್ನು ನಾನು ಖಂಡಿಸುತ್ತೇನೆ ” 

ಮಧ್ಯ ಪ್ರದೇಶ ಸಚಿವಾಲಯದಲ್ಲಿ ವಂದೇ ಮಾತರಂ ಗೀತೆ ಹಾಡುವ ಸಂಪ್ರದಾಯಕ್ಕೆ ಸಿಎಂ ಕಮಲ್‌ನಾಥ್ ತಿಲಾಂಜಲಿ ಇಟ್ಟಿದ್ದಾರೆ. ಇದು ಇತ್ತೀಚೆಗೆ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿ ತಿಂಗಳ ಮೊದಲ ಕಾರ್ಯನಿರ್ವಹಣೆ ದಿನದಂದು ಸಚಿವಾಲಯಗಳಲ್ಲಿ ವಂದೇ ಮಾತರಂ ಹಾಡಿದ ನಂತರ ಕೆಲಸವನ್ನು ಆರಂಭಿಸುವ ರೂಢಿ ಇಲ್ಲಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಳೆದ 13 ವರ್ಷಗಳಿಂದ ಈ ರೂಢಿಯನ್ನು ಪಾಲಿಸಿಕೊಂಡು ಬರಲಾಗುತ್ತಿತ್ತು. ಆದರೆ ಇದೀಗ ಕಮಲ್‌ ನಾಥ್ ಈ ಸಂಪ್ರದಾಯವನ್ನು ಕೈಬಿಡುವ ಮೂಲಕ ಚರ್ಚೆಗೆ ನಾಂದಿ ಹಾಡಿದ್ದಾರೆ. ಜತೆಗೆ ಬಿಜೆಪಿ ಟೀಕೆಗಳು ಹೊರಬಿದ್ದಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕಮಲ್‌ ನಾಥ್, “ವಂದೇ ಮಾತರಂ ಗೀತೆಯನ್ನು ಹಾಡುವ ಸಂಪ್ರದಾಯವನ್ನು ಕೈಬಿಟ್ಟಿಲ್ಲ, ಬದಲಾಗಿ ರಾಷ್ಟ್ರೀಯ ಗೀತೆಗೆ ಹೊಸ ಲುಕ್‌ ನೀಡಲಾಗುವುದು, ಈ ಬಗ್ಗೆ ಆದಷ್ಟು ಶೀಘ್ರದಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು. ಅಲ್ಲದೆ ಬಿಜೆಪಿ ರಾಮ ಮಂದಿರದ ವಿಚಾರದಂತೆ, ವಂದೇ ಮಾತರಂ ವಿಚಾರದಲ್ಲೂ ರಾಜಕೀಯ ನಡೆಸುವುದು ತಪ್ಪು ಇದನ್ನು ನಾನು ಖಂಡಿಸುತ್ತೇನೆ,” ಎಂದು ತಿಳಿಸಿದ್ದಾರೆ.

ಈ ಕುರಿತು ಟ್ವೀಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, “ಜನರಲ್ಲಿ ದೇಶಭಕ್ತಿಯನ್ನು ತುಂಬುವ ಶಕ್ತಿ ವಂದೇ ಮಾತರಂ ಗೀತೆಗೆ ಇದೆ. ಆದರೆ ಈ ಗೀತೆಯನ್ನು ಹಾಡದಂತೆ ನಿರ್ಭಂದಿಸಿರುವ ಕಾಂಗ್ರೆಸ್‌ ನಡೆ ತೀರಾ ಅನಿರೀಕ್ಷಿತ. ಸರ್ಕಾರಗಳು ಅಧಿಕಾರಕ್ಕೆ ಬರುತ್ತವೆ, ಹೋಗುತ್ತವೆ ಆದರೆ ದೇಶ ಹಾಗೂ ದೇಶಭಕ್ತಿ ಮೊದಲು,” ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಸಚಿವಾಲಯದಲ್ಲಿ ಮತ್ತೆ ವಂದೇ ಮಾತರಂ ಗೀತೆಯನ್ನು ಹಾಡಲು ಅನುಮತಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.