‘ಪ್ರಬುದ್ಧ ಪತ್ರಕರ್ತರನ್ನು ಎದುರಿಸುವ ಧೈರ್ಯ ನಿಮಗಿಲ್ಲ’: ಮೋದಿ ಕಾಲೆಳೆದ ಸ್ವಪಕ್ಷೀಯ ‘ಶತ್ರು’ಘ್ನ!
ಸುದ್ದಿ ಸಾರ

‘ಪ್ರಬುದ್ಧ ಪತ್ರಕರ್ತರನ್ನು ಎದುರಿಸುವ ಧೈರ್ಯ ನಿಮಗಿಲ್ಲ’: ಮೋದಿ ಕಾಲೆಳೆದ ಸ್ವಪಕ್ಷೀಯ ‘ಶತ್ರು’ಘ್ನ!

“ನಾನೊಬ್ಬ ನಿಮ್ಮ ಒಳ್ಳೆಯ ಗೆಳೆಯ ಹಾಗೂ ಸಹೋದ್ಯೋಗಿಯಾಗಿ ಈ ಮಾತುಗಳನ್ನು ಹೇಳುತ್ತಿದ್ದೇನೆ. ಇದನ್ನು ಒಪ್ಪಿದರೆ ನಿಮಗೆ ಮತ್ತು ದೇಶಕ್ಕೆ ಒಳ್ಳೆಯದಾಗುತ್ತದೆ. ಈ ಸಲಹೆಯನ್ನು ನೀವು ಒಪ್ಪಿಕೊಳ್ಳದೇ ಹೋದರೆ ದೇವರೇ ನಮ್ಮನ್ನು ಕಾಪಾಡಬೇಕು...

ಹೊಸ ವರ್ಷದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ್ದ ಸಂದರ್ಶನವನ್ನು ವಿಶ್ಲೇಷಿಸಿ, ಮೋದಿ ಕಾಲೆಳೆದಿರುವ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹ, “ಪ್ರಧಾನಿಗಳು ಯಾವಾಗಲೂ ತಮ್ಮ ಜೊತೆಗಿರುವ ‘ರಾಗ್‌ ದರ್ಬಾರಿ’ ಗುಂಪಿನ ಪತ್ರಕರ್ತರಿಗೆ ಮಾತ್ರವಲ್ಲ, ಸರಕಾರಿ ಮನಸ್ಥಿತಿಯಿಂದ ಹೊರಗಿರುವ ಪ್ರಬುದ್ಧ ಪತ್ರಕರ್ತ ಪ್ರಶ್ನೆಗಳಿಗೂ ಉತ್ತರಿಸಬೇಕು” ಎಂದಿದ್ದಾರೆ.

ಮೋದಿ ಸಂದರ್ಶನದ ಬಗ್ಗೆ ಮೋದಿ ಹೆಸರು ಉಲ್ಲೇಖಿಸದೆ ಸರಣಿ ಟ್ವೀಟ್‌ ಮಾಡಿರುವ ಸಿನ್ಹ, “ಪೂರ್ವ ನಿರ್ಧರಿತ ಪ್ರಶ್ನೆಗಳ (ವೆಲ್‌ ಸ್ಕ್ರಿಪ್ಟೆಡ್‌) ನಿಮ್ಮ ಟಿವಿ ಸಂದರ್ಶನ ನೋಡಿದೆ. ನೀವು ಸಂದರ್ಶನದುದ್ದಕ್ಕೂ ತರ್ಣಣಗೆ ಉತ್ತರಿಸುತ್ತಾ ಹೋದಿರಿ. ಆದರೆ, ನಿಮ್ಮ ಮಾತುಗಳು ಈ ಹಿಂದಿನಂತೆ ದೇಶದ ಜನತೆ ಮೆಚ್ಚುವಂತೆ ಇರಲಿಲ್ಲ” ಎಂದಿದ್ದಾರೆ.

ಸಂದರ್ಶನ ನಡೆಸಿದ ಎಎನ್‌ಐನ ಸ್ಮಿತಾ ಪ್ರಕಾಶ್‌ ಅವರನ್ನು ಟ್ವೀಟ್‌ನಲ್ಲಿ ಟ್ಯಾಗ್‌ ಮಾಡಿರುವ ಸಿನ್ಹ, “ಪ್ರಬುದ್ಧ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸುವ ಮೂಲಕ ನಿಮ್ಮನ್ನು ಸಮರ್ಥ ನಾಯಕ ಎಂದು ಬಿಂಬಿಸಿಕೊಳ್ಳಲು ಇದು ಸೂಕ್ತ ಸಮಯವಲ್ಲವೇ?” ಎಂದು ಮೋದಿಯನ್ನು ಪ್ರಶ್ನಿಸಿದ್ದಾರೆ.

“ಯಶವಂಥ ಸಿನ್ಹ ಅವರಂಥ ನಾಯಕರು ಹಾಗೂ ಅರುಣ್‌ ಶೌರಿ ಅವರಂಥ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ನಿಮಗಿಲ್ಲ ಎಂಬುದು ನಮಗೆ ಗೊತ್ತು. ಈ ಹಿಂದೆ ಗೌರವಾನ್ವಿತ ಪ್ರಧಾನಮಂತ್ರಿಗಳು ಪತ್ರಿಕಾಗೋಷ್ಠಿಗಳನ್ನು ಕರೆದು ಮಾತನಾಡುತ್ತಿದ್ದರು. ಆದರೆ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ನೀವು ಒಮ್ಮೆಯೂ ಪತ್ರಿಕಾಗೋಷ್ಠಿ ಕರೆದಿಲ್ಲ. ಯಾಕೆ ಸರ್‌? ‘ಸರಕಾರಿ’ ಮನಸ್ಥಿತಿಯ ಪತ್ರಕರ್ತರು ಹಾಗೂ ನಿಮ್ಮೊಂದಿಗಿರುವ ‘ರಾಗ್‌ ದರ್ಬಾರಿ’ಯ ಗುಂಪನ್ನು ಬಿಟ್ಟು ಪ್ರಬುದ್ಧ ಪತ್ರಕರ್ತರ ಪ್ರಶ್ನೆಗಳಿಗೂ ಉತ್ತರಿಸಿ” ಎಂದಿದ್ದಾರೆ.

“ರವೀಶ್‌ ಕುಮಾರ್‌, ವಿನೋದ್‌ ದುವಾ ಅವರಂಥ ಪತ್ರಕರ್ತರನ್ನು ಎದುರಿಸಲು ನಿಮಗೆ ಸಾಧ್ಯವೇ? ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’, ‘ರಾಮ ಜನ್ಮ ಭೂಮಿ’ ಮೂಲಕ ನಾವು ಇತರೆ ಜನ ಸಮುದಾಯದಿಂದ ದೂರ ಉಳಿಯುವುದೇಕೆ? ಈ ಹೊಸ ವರ್ಷದಲ್ಲಾದರೂ ಶುದ್ಧವಾಗಿ ಹೊರಗೆ ಬನ್ನಿ. ನಾಟಕೀಯತೆಯನ್ನು ಬಿಟ್ಟು ಪ್ರಾಮಾಣಿಕತೆ, ಪಾರದರ್ಶಕತೆ ರೂಪಿಸಿಕೊಳ್ಳಿ. ನಾನೊಬ್ಬ ನಿಮ್ಮ ಒಳ್ಳೆಯ ಗೆಳೆಯ ಹಾಗೂ ಸಹೋದ್ಯೋಗಿಯಾಗಿ ಈ ಮಾತುಗಳನ್ನು ಹೇಳುತ್ತಿದ್ದೇನೆ. ಇದನ್ನು ಒಪ್ಪಿದರೆ ನಿಮಗೆ ಮತ್ತು ದೇಶಕ್ಕೆ ಒಳ್ಳೆಯದಾಗುತ್ತದೆ. ಈ ಸಲಹೆಯನ್ನು ನೀವು ಒಪ್ಪಿಕೊಳ್ಳದೇ ಹೋದರೆ ದೇವರೇ ನಮ್ಮನ್ನು ಕಾಪಾಡಬೇಕು. ಚುನಾವಣೆಗಳು ಹತ್ತಿರದಲ್ಲಿವೆ ಸರ್‌. ಪ್ರಜಾಪ್ರಭುತ್ವ ದೀರ್ಘಕಾಲ ಉಳಿಯಲಿ. ಜೈ ಹಿಂದ್‌!” ಎಂದು ಕುಟುಕಿದ್ದಾರೆ ಸಿನ್ಹ.