samachara
www.samachara.com
ದಿವಾಳಿ ಕಂಪೆನಿಗಳ  ಪ್ರಕರಣ ಇತ್ಯರ್ಥದಿಂದ 70 ಸಾವಿರ ಕೋಟಿ ವಸೂಲಿ ನಿರೀಕ್ಷೆ: ಅರುಣ್‌ ಜೇಟ್ಲಿ
ಸುದ್ದಿ ಸಾರ

ದಿವಾಳಿ ಕಂಪೆನಿಗಳ ಪ್ರಕರಣ ಇತ್ಯರ್ಥದಿಂದ 70 ಸಾವಿರ ಕೋಟಿ ವಸೂಲಿ ನಿರೀಕ್ಷೆ: ಅರುಣ್‌ ಜೇಟ್ಲಿ

ಸಾಲ ವಸೂಲಾತಿ ಪ್ರಕ್ರಿಯೆ ಚುರುಕುಗೊಂಡಿರುವುದು ಎನ್‌ಡಿಎ ಸರಕಾರದ ಸಾಧನೆ ಎಂದಿರುವ ಜೇಟ್ಲಿ, ಈ ಹಿಂದೆ ಕಾಂಗ್ರೆಸ್ ಜಾರಿಗೆ ತಂದಿದ್ದ SECA ಕಾಯ್ದೆಯನ್ನು ಟೀಕಿಸಿದ್ದಾರೆ.

ದಿವಾಳಿ ಹಾಗೂ ನಷ್ಟದ ಕಾರಣಕ್ಕೆ ಬ್ಯಾಂಕ್‌ಗಳಿಂದ ಪಡೆದ ಸಾಲ ಮರುಪಾವತಿಸಿಲ್ಲದ ಸುಮಾರು 12 ದೊಡ್ಡ ಪ್ರಕರಣಗಳಲ್ಲಿ 70 ಸಾವಿರ ಕೋಟಿ ರೂಪಾಯಿ ವಸೂಲಿಯಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಾಲ ವಸೂಲಾತಿ ಪ್ರಕ್ರಿಯೆಗೆ ಚುರುಕು ಮುಟ್ಟಿಸಿರುವುದಾಗಿ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿರುವ ಜೇಟ್ಲಿ ಈ ವರ್ಷ ಭೂಷಣ್‌ ಪವರ್‌ ಅಂಡ್‌ ಸ್ಟೀಲ್‌ ಲಿಮಿಟೆಡ್, ಎಸ್ಸಾರ್‌ ಸ್ಟೀಲ್‌ ಇಂಡಿಯಾ ಲಿಮಿಟೆಡ್‌ನಂಥ ಕಂಪೆನಿಗಳ ಒಟ್ಟು 12 ದೊಡ್ಡ ಪ್ರಕರಣಗಳಲ್ಲಿ 70 ಕೋಟಿ ರೂಪಾಯಿ ಸಾಲ ಮರುಪಾವತಿ ನಿರೀಕ್ಷೆ ಇದೆ ಎಂದಿದ್ದಾರೆ.

ದಿವಾಳಿ ಮತ್ತು ವ್ಯವಹಾರ ನಷ್ಟ ಸಂಹಿತೆ (IBC) – 2016 ಜಾರಿಗೆ ತಂದ ಬಳಿಕ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣದಲ್ಲಿ (ಎನ್‌ಸಿಎಲ್‌ಟಿ) ದಿವಾಳಿ ಹಾಗೂ ಸಾಲ ಮರುಪಾವತಿ ಪ್ರಕರಣಗಳ ಇತ್ಯರ್ಥ ಸುಲಭವಾಗುತ್ತಿದೆ. ಐಬಿಸಿ ಅಡಿಯಲ್ಲಿ ಎನ್‌ಸಿಎಲ್‌ಟಿಯಲ್ಲಿ 1,322 ಪ್ರಕರಣಗಳು ದಾಖಲಾಗಿವೆ. 4,452 ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗುವ ಮುನ್ನವೇ ಇತ್ಯರ್ಥಗೊಂಡಿವೆ ಎಂದು ಜೇಟ್ಲಿ ಹೇಳಿದ್ದಾರೆ.

ಕಾಯ್ದೆ ಜಾರಿಗೆ ಬಂದ ಎರಡೇ ವರ್ಷಗಳಲ್ಲಿ ಅದರ ಪರಿಣಾಮ ಕಾಣುತ್ತಿದೆ. 260 ಪ್ರಕರಣಗಳಲ್ಲಿ ಕಂಪೆನಿ ಮುಚ್ಚಲು ಆದೇಶಿಸಲಾಗಿದೆ. ದಾಖಲಾಗಿರುವ ಪ್ರಕರಣಗಳ ಪೈಕಿ ಇತ್ಯರ್ಥವಾಗಿರುವ 66 ಪ್ರಕರಣಗಳಿಂದ 80 ಸಾವಿರ ಕೋಟಿ ಬ್ಯಾಂಕ್‌ಗಳಿಗೆ ಮರಳಿದೆ. 4,452 ದಾಖಲಾತಿ ಪೂರ್ವ ಇತ್ಯರ್ಥದ ಪ್ರಕರಣಗಳಿಂದ ಬ್ಯಾಂಕ್‌ಗಳಿಗೆ 2.02 ಲಕ್ಷ ಕೋಟಿ ಸಾಲ ಮರುಪಾವತಿಯಾಗಿದೆ ಎಂದಿದ್ದಾರೆ ಜೇಟ್ಲಿ.

ಎನ್‌ಸಿಎಲ್‌ಟಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಸರಕಾರ ಅಥವಾ ಸರಕಾರದ ಯಾವುದೇ ಸಂಸ್ಥೆಗಳು ಎನ್‌ಸಿಎಲ್‌ಟಿ ಕೆಲಸಗಳಲ್ಲಿ ಮಧ್ಯಪ್ರವೇಶ ಮಾಡುತ್ತಿಲ್ಲ. ಐಬಿಸಿ ಕಾಯ್ದೆ ಹಾಗೂ ಎನ್‌ಸಿಎಲ್‌ಟಿ ಕಾರ್ಯ ವೈಖರಿಯಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಬ್ಯಾಂಕ್‌ಗಳಿಗೆ ಮರುಪಾವತಿಯಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.

ಸಾಲ ವಸೂಲಾತಿ ಪ್ರಕ್ರಿಯೆ ಚುರುಕುಗೊಂಡಿರುವುದು ಎನ್‌ಡಿಎ ಸರಕಾರದ ಸಾಧನೆ ಎಂದಿರುವ ಜೇಟ್ಲಿ ಈ ಹಿಂದೆ ಕಾಂಗ್ರೆಸ್ ಜಾರಿಗೆ ತಂದಿದ್ದ ಕಾಯ್ದೆಯನ್ನು ಟೀಕಿಸಿದ್ದಾರೆ. 1980ರ ದಶಕದಲ್ಲಿ ಕಾಂಗ್ರೆಸ್‌ ಸರಕಾರ ‘ನಷ್ಟದಲ್ಲಿರುವ ಕೈಗಾರಿಕೆಗಳ ಕಂಪನಿ ಕಾಯ್ದೆ’ಯನ್ನು (ಎಸ್‌ಐಸಿಎ) ಜಾರಿಗೆ ತಂದಿತ್ತು. ಕಾಂಗ್ರೆಸ್ ಜಾರಿಗೆ ತಂದಿದ್ದ ಈ ಕಾಯ್ದೆ ಸಂಪೂರ್ಣ ವಿಫಲವಾಗಿತ್ತು ಎಂದು ಜೇಟ್ಲಿ ಹೇಳಿದ್ದಾರೆ.