samachara
www.samachara.com
ಸಂಸತ್‌ನಲ್ಲಿ ಉತ್ತರಿಸಲಾಗದ ಮೋದಿ ಪಂಜಾಬ್‌ನಲ್ಲಿ ಪಾಠ ಮಾಡಲು ಹೋಗಿದ್ದಾರೆ: ರಾಹುಲ್‌ ಟೀಕೆ
ಸುದ್ದಿ ಸಾರ

ಸಂಸತ್‌ನಲ್ಲಿ ಉತ್ತರಿಸಲಾಗದ ಮೋದಿ ಪಂಜಾಬ್‌ನಲ್ಲಿ ಪಾಠ ಮಾಡಲು ಹೋಗಿದ್ದಾರೆ: ರಾಹುಲ್‌ ಟೀಕೆ

“58 ಸಾವಿರ ಕೋಟಿಯ ರಫೇಲ್ ಡೀಲ್ ಪ್ರಕರಣದ ಕುರಿತು ಚರ್ಚೆ ಮಾಡಲು ನಾವು ಸಂಸತ್ ನಲ್ಲಿ ಕಾಯುತ್ತಿದ್ದರೆ, ಪ್ರಧಾನಿಗಳು ಪಲಾಯನ ಮಾಡಿ ಪಂಜಾಬ್‌ ಗೆ ಹೋಗಿ ಅಲ್ಲಿನ ಲವ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ”

ಸಂಸತ್ ನಲ್ಲಿ ರಫೇಲ್ ಡೀಲ್ ಪ್ರಕರಣದ ಓಪನ್ ಬುಕ್ ಪರೀಕ್ಷೆ ಎದುರಿಸುವುದನ್ನು ಬಿಟ್ಟು ಪ್ರಧಾನಿ ಮೋಧಿ ಪಂಜಾಬ್‌ನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ತೆರಳಿದ್ದಾರೆ ಎಂದು ಗುರುವಾರ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಟ್ವೀಟ್ ಮೂಲಕ ಮೋದಿ ಕಾಲೆಳೆದಿರುವ ರಾಹುಲ್ ಗಾಂಧಿ, “58 ಸಾವಿರ ಕೋಟಿಯ ರಫೇಲ್ ಡೀಲ್ ಪ್ರಕರಣದ ಕುರಿತು ಚರ್ಚೆ ಮಾಡಲು ನಾವು ಸಂಸತ್ ನಲ್ಲಿ ಕಾಯುತ್ತಿದ್ದರೆ, ಪ್ರಧಾನಿಗಳು ಪಲಾಯನ ಮಾಡಿ ಪಂಜಾಬ್ ಗೆ ಹೋಗಿ ಅಲ್ಲಿನ ಲವ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ” ಎಂದು ಕಟಕಿಯಾಡಿದ್ದಾರೆ.

“ನಾಳೆ ಸಂಸತ್‌ನಲ್ಲಿ ಖಂಡಿತ ರಫೇಲ್ ಓಪನ್ ಬುಕ್ ಪರೀಕ್ಷೆ ಇದ್ದು ಅವರು ನನ್ನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲೇಬೇಕು ಎಂದು ಪ್ರಶ್ನೆಗಳನ್ನು ಪಟ್ಟಿ ಮಾಡಿದ್ದಾರೆ. ಭಾರತೀಯ ವಾಯುಪಡೆಗೆ 126 ವಿಮಾನಗಳ ಅಗತ್ಯವಿದೆ. ಈ ಸಂಖ್ಯೆಯನ್ನು 36ಕ್ಕೆ ಇಳಿಸಲು ಕಾರಣವೇನು? ಪ್ರತಿ ವಿಮಾನಕ್ಕೆ 560 ಕೋಟಿಯ ಬದಲು 1,600 ಕೋಟಿಯನ್ನು ಏಕೆ ನೀಡಬೇಕು? ಒಪ್ಪಂದದಿಂದ ಎಚ್ಎಎಲ್‌ ಕೈ ಬಿಡಲು ಕಾರಣವೇನು?” ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ ಪಂಜಾಬ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿರುವ ರಾಹುಲ್ ಗಾಂಧಿ “ದಯವಿಟ್ಟು ಮೋದಿಯವರನ್ನು ಈ ಪ್ರಶ್ನೆಗಳಿಗೆ ಉತ್ತರಿಸಲು ಹೇಳಿ” ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯ ಕಾಲೆಳೆದಿದ್ದಾರೆ.