samachara
www.samachara.com
ಯೋಗಿ ರಾಜ್ಯದಲ್ಲಿ ‘ಎಣ್ಣೆ ಪಾರ್ಟಿ’ಗಳಿಗೆ ಬೀಡಾಡಿ ದನಗಳ ಕಾಟ!
ಸುದ್ದಿ ಸಾರ

ಯೋಗಿ ರಾಜ್ಯದಲ್ಲಿ ‘ಎಣ್ಣೆ ಪಾರ್ಟಿ’ಗಳಿಗೆ ಬೀಡಾಡಿ ದನಗಳ ಕಾಟ!

ಗೋಶಾಲೆಗಳ ನಿರ್ಮಾಣಕ್ಕೆ ಬೇಕಾದ ಹಣವನ್ನು ಹೆಚ್ಚುವರಿ ತೆರಿಗೆ ರೂಪದಲ್ಲಿ ಜನರಿಂದ ಸಂಗ್ರಹಿಸಲು ಯೋಗಿ ಆದಿತ್ಯನಾಥ್‌ ಸಂಪುಟ ನಿರ್ಧರಿಸಿದ್ದು ‘ಗೋ ಕಲ್ಯಾಣ ಸೆಸ್‌’ಗೆ ಮಂಗಳವಾರ ಒಪ್ಪಿಗೆ ನೀಡಿದೆ.

ದೇಶದ ಹೆಚ್ಚು ಕಡಿಮೆ ಎಲ್ಲಾ ಸೆಸ್‌ಗಳ ಭಾರವನ್ನು ಹೊತ್ತುಕೊಂಡಿರುವ ಮದ್ಯಪಾನ ಮತ್ತು ಧೂಮಪಾನ ಪ್ರಿಯರು, ಈಗ ಉತ್ತರ ಪ್ರದೇಶದಲ್ಲಿ ಗೋ ಮಾತೆಗಳ ತೂಕವನ್ನೂ ಹೊರಬೇಕಾಗಿದೆ ಬಂದಿದೆ! ಬೀಡಾಡಿ ದನಗಳ ರಕ್ಷಣೆಗಾಗಿ ಎಣ್ಣೆ ಪಾರ್ಟಿಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರಕಾರ ನಿರ್ಧರಿಸಿದೆ.

ಉತ್ತರ ಪ್ರದೇಶದ ಬೀದಿ ದನಗಳ ರಕ್ಷಣೆಗಾಗಿ ನಗರ ಮತ್ತು ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳು ತಾತ್ಕಾಲಿಕ ‘ಗೋವಂಶ್‌ ಆಶ್ರಯ್‌ ಆಸ್ಥಲ್ಸ್‌’ ಎಂಬ ಕೇಂದ್ರಗಳನ್ನು ನಿರ್ಮಿಸಲಿವೆ. ಇದರ ನಿರ್ಮಾಣಕ್ಕೆ ಬೇಕಾದ ಹಣವನ್ನು ಹೆಚ್ಚುವರಿ ತೆರಿಗೆ ರೂಪದಲ್ಲಿ ಜನರಿಂದ ಸಂಗ್ರಹಿಸಲು ಯೋಗಿ ಆದಿತ್ಯನಾಥ್‌ ಸಂಪುಟ ನಿರ್ಧರಿಸಿದ್ದು ‘ಗೋ ಕಲ್ಯಾಣ ಸೆಸ್‌’ಗೆ ಮಂಗಳವಾರ ಒಪ್ಪಿಗೆ ನೀಡಿದೆ.

ಯೋಜನೆಯಂತೆ ತಕ್ಷಣಕ್ಕೆ ಎಲ್ಲಾ ಗ್ರಾಮ ಪಂಚಾಯತ್‌, ಪಟ್ಟಣ ಪಂಚಾಯತ್‌, ನಗರ ಪಂಚಾಯತ್‌, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೋ ಶಾಲೆಗಳನ್ನು ತೆರೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 1,000 ದನಗಳ ಸಾಮರ್ಥ್ಯದ ಶಾಶ್ವತ ಗೋ ಶಾಲೆಗಳು ನಿರ್ಮಾಣವಾಗಲಿವೆ. ಇದಕ್ಕೆ ಬೇಕಾದ ಹಣ ಹೊಂದಿಸಲು ಮದ್ಯ ಸರಬರಾಜಿನ ಮೇಲೆ ವಿಧಿಸಲಾಗುವ ಅಬಕಾರಿ ತೆರಿಗೆಯನ್ನು ಶೇಕಡಾ 2ರಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ ರೈತರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಮಂಡಿ ಪರಿಷತ್‌ಗಳು ಮತ್ತು ಲಾಭದಲ್ಲಿರುವ ನಿಗಮಗಳ ಮೇಲೆ ಶೇಕಡಾ 2ರಷ್ಟು ಹೆಚ್ಚುವರಿ ತೆರಿಗೆ ಹಾಕಲೂ ತೀರ್ಮಾನಿಸಲಾಗಿದೆ. ಇದರಿಂದ ಮದ್ಯದ ಬೆಲೆ ಏರಿಕೆಯಾಗಲಿದೆ. ಜತೆಗೆ ತರಕಾರಿ ಮತ್ತು ಆಹಾರ ವಸ್ತುಗಳ ಬೆಲೆಯೂ ಏರಿಕೆಯಾಗಲಿದೆ. ಇದರಿಂದ ಸಾಮಾನ್ಯ ಜನರು ಆಹಾರ ವಸ್ತುಗಳ ಮೇಲೆ ಹೆಚ್ಚಿನ ಹಣವನ್ನು ವ್ಯಯ ಮಾಡಬೇಕಾಗಿದೆ.

ಈ ಸೆಸ್‌ ಹಣವಲ್ಲದೆ ನರೇಗಾ ಯೋಜನೆ ಹಣವನ್ನೂ ತಾತ್ಕಾಲಿಕ ಗೋಶಾಲೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇಷ್ಟಲ್ಲದೆ ಪಶು ಸಂಗೋಪನೆ ಇಲಾಖೆಯೂ ಈ ಬೀಡಾಡಿ ದನಗಳ ರಕ್ಷಣಾ ಯೋಜನೆಗೆ ಧನ ಸಹಾಯ ಮಾಡಲಿದೆ ಎಂದು ಸಂಪುಟ ಸಭೆಯ ನಂತರ ಸರಕಾರದ ವಕ್ತಾರರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಗೋಶಾಲೆಗಳು ಸ್ವಾವಲಂಬಿಯಾಗಿ ಬೆಳೆಯಲಿವೆ ಎಂದು ಅವರು ವಿವರಿಸಿದ್ದಾರೆ. ಬೀಡಾಡಿ ದನಗಳನ್ನು ಕಟ್ಟಿಕೊಂಡು ಈ ಗೋ ಶಾಲೆಗಳು ಹೇಗೆ ಸ್ವಾವಲಂಬನೆ ಪಡೆದುಕೊಳ್ಳುತ್ತವೆ ಎಂಬುದನ್ನು ಮಾತ್ರ ಅವರು ವಿವರಿಸಿಲ್ಲ.

ಕಳೆದ ವಾರವಷ್ಟೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಬೀದಿ ದನಗಳ ಆರೈಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ನಿರ್ದೇಶನ ನೀಡಿದ್ದರು. ಅವರು ಇದೇ ವೇಳೆ ಗೋಮಾಳ ಜಮೀನು ಒತ್ತುವರಿ ತೆರವಿಗೂ ಆದೇಶ ನೀಡಿದ್ದರು. ಇದಲ್ಲದೆ ಬೀಡಾಡಿ ದನಗಳಿಗೆ ಅತ್ಯುತ್ತಮ ಆಶ್ರಯ ತಾಣಗಳನ್ನು ನಿರ್ಮಿಸುವ ಸಂಬಂಧ ಸಮಿತಿ ರಚಿಸಿ, ಅವರಿಂದ ವರದಿ ತರಿಸಿಕೊಂಡು ವಾರದೊಳಗೆ ಶಿಫಾರಸ್ಸುಗಳೊಂದಿಗೆ ಸಿದ್ಧವಾಗಿರುವಂತೆ ಮುಖ್ಯ ಕಾರ್ಯದರ್ಶಿ ಅನುಪ್‌ ಚಂದ್ರ ಪಾಂಡೆಗೆ ತಿಳಿಸಿದ್ದರು. ಅದರಂತೆ ‘ದನಗಳ ಸೇವೆಯೇ ಜನಾರ್ಧನ ಸೇವೆ’ ಎಂದುಕೊಂಡಿರುವ ಯೋಗಿ ಆದಿತ್ಯನಾಥ್‌ ಸರಕಾರ ಮಂಗಳವಾರದ ಸಂಪುಟ ಸಭೆಯಲ್ಲಿ ಈ ಸೆಸ್‌ ತೀರ್ಮಾನವನ್ನು ತೆಗೆದುಕೊಂಡಿದೆ.