2:1 ಅನುಪಾತದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಸೀಟು ಹಂಚಿಕೆ: 15 ದಿನಗಳಲ್ಲಿ ಫೈನಲ್‌
ಸುದ್ದಿ ಸಾರ

2:1 ಅನುಪಾತದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಸೀಟು ಹಂಚಿಕೆ: 15 ದಿನಗಳಲ್ಲಿ ಫೈನಲ್‌

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 18ರಲ್ಲಿ ಕಾಂಗ್ರೆಸ್‌ ಮತ್ತು 10ರಲ್ಲಿ ಜೆಡಿಎಸ್‌ ಸ್ಪರ್ಧಿಸುವ ಸಾಧ್ಯತೆ ಇದೆ.

ಮುಂಬರುವ ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ಕುರಿತಂತೆ ಕಾಂಗ್ರೆಸ್ ಮತ್ತು ಜೆಡಿಎಸ್‌ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿರುವ ಜೆಡಿಎಸ್‌ ಮುಖಂಡ ಡ್ಯಾನಿಷ್‌ ಅಲಿ, ರಾಜ್ಯದಲ್ಲಿ 2:1ರ ಅನುಪಾತದಲ್ಲಿ ಸೀಟು ಹಂಚಿಕೆಯಾಗಲಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅಲಿ, “ಸೀಟು ಹಂಚಿಕೆ ಕುರಿತಂತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ” ಎಂದಿದ್ದಾರೆ.

“ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಚರ್ಚಿಸಿ ಸೀಟು ಹಂಚಿಕೆ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬರುತ್ತೇವೆ. ಮೈತ್ರಿ ಸರಕಾರದಲ್ಲಿ ಹೆಚ್ಚಿನ ಸ್ಥಾನಗಳಿರುವ ಕಾಂಗ್ರೆಸ್‌ಗೆ ಸಹಜವಾಗಿಯೇ ಹೆಚ್ಚಿನ ಸೀಟುಗಳು ಸಿಗಲಿವೆ” ಎಂದಿದ್ದಾರೆ ಅಲಿ.

Also read: ಹೊಸ ವರ್ಷ- ಹಳೇ ರಾಜಕಾರಣ: ಲೋಕಸಭೆಗೆ ಕರ್ನಾಟಕ ಹೇಗೆ ಸಜ್ಜಾಗುತ್ತಿದೆ? 

28 ಲೋಕಸಭಾ ಸ್ಥಾನಗಳಿರುವ ಕರ್ನಾಟಕದಲ್ಲಿ 18ರಲ್ಲಿ ಕಾಂಗ್ರೆಸ್‌ ಹಾಗೂ 10ರಲ್ಲಿ ಜೆಡಿಎಸ್‌ ಸ್ಪರ್ಧಿಸಲಿವೆ ಎನ್ನಲಾಗಿದೆ. ಸೀಟು ಹಂಚಿಕೆ ಬಗ್ಗೆ ಇರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಎರಡೂ ಪಕ್ಷಗಳ ಮುಖಂಡರು ಕುಳಿತು ಚರ್ಚೆ ನಡೆಸಲು ನಿರ್ಧರಿಸಿದ್ದಾರೆ.

“12 ಸ್ಥಾನಗಳಲ್ಲಿ ಜೆಡಿಎಸ್‌ ಸ್ಪರ್ಧೆ ಮಾಡಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅವರ ಅಭಿಪ್ರಾಯವನ್ನು ಅವರು ಹೇಳಿದ್ದಾರೆ. ಸಂಸತ್‌ನ ಚಳಿಗಾಲದ ಅಧಿವೇಶನ ಮುಗಿದ ಬಳಿಕ ಸೀಟು ಹಂಚಿಕೆಯ ಬಗ್ಗೆ ಎರಡೂ ಪಕ್ಷದ ಮುಖಂಡರು ಚರ್ಚಿಸಿ ಜನವರಿ 15ರೊಳಗೆ ಅಂತಿಮ ತೀರ್ಮಾನಕ್ಕೆ ಬರಲಿದ್ದೇವೆ” ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.