‘ಕುಂಭ ಮೇಳದಿಂದ ದೇಶ ಉದ್ಧಾರವಾಗಲ್ಲ’: ಮಾಜಿ ಬಿಜೆಪಿ ಸಂಸದೆಯಿಂದ ಯೋಗಿಗೆ ತರಾಟೆ!
ಸುದ್ದಿ ಸಾರ

‘ಕುಂಭ ಮೇಳದಿಂದ ದೇಶ ಉದ್ಧಾರವಾಗಲ್ಲ’: ಮಾಜಿ ಬಿಜೆಪಿ ಸಂಸದೆಯಿಂದ ಯೋಗಿಗೆ ತರಾಟೆ!

“ಎಸ್‌ಟಿ/ಎಸ್‌ಟಿ ಜನರು ತಮ್ಮ ಹಕ್ಕುಗಳಿಗಾಗಿ ಮತ್ತು ಉದ್ಯೋಗಕ್ಕಾಗಿ ಹೋರಾಡುತ್ತಿದ್ದರೆ, ಉತ್ತರ ಪ್ರದೇಶ ಸರಕಾರ ಕುಂಭ ಮೇಳ ಮತ್ತು ದೇವಸ್ಥಾನದ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ,” - ಸಾವಿತ್ರಿಭಾಯಿ ಫುಲೆ.

ಉತ್ತರ ಪ್ರದೇಶದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭ ಮೇಳಕ್ಕೆ ಯೋಗಿ ಆದಿತ್ಯನಾಥ್‌ ಸರಕಾರ ಸಕಲ ರೀತಿಯಲ್ಲೂ ಸಜ್ಜಾಗಿದೆ. ಇದರ ನಡುವೆಯೇ ಇದಕ್ಕೆ ಮಾಜಿ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ. ಕುಂಭ ಮೇಳ ಅಥವಾ ದೇವಸ್ಥಾನಗಳಿಂದ ದೇಶ ಅಭಿವೃದ್ಧಿಯಾಗುವುದಿಲ್ಲ. ಬದಲಿಗೆ ಸಂವಿಧಾನದ ಜಾರಿಯಿಂದ ಮಾತ್ರ ದೇಶ ಉದ್ಧಾರವಾಗಲು ಸಾಧ್ಯ ಎಂದು ಇತ್ತೀಚೆಗೆ ಬಿಜೆಪಿ ತೊರೆದಿರುವ ಸಂಸದೆ ಸಾವಿತ್ರಿಭಾಯಿ ಫುಲೆ ಹೇಳಿದ್ದಾರೆ. ಈ ಮೂಲಕ ಯೋಗಿ ಆದಿತ್ಯನಾಥ್‌ ಸರಕಾರವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

“ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ತಮ್ಮ ಹಕ್ಕುಗಳಿಗಾಗಿ ಮತ್ತು ಉದ್ಯೋಗಕ್ಕಾಗಿ ಹೋರಾಡುತ್ತಿದ್ದರೆ, ಉತ್ತರ ಪ್ರದೇಶ ಸರಕಾರ ಕುಂಭ ಮೇಳ ಮತ್ತು ದೇವಸ್ಥಾನದ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ,” ಎಂದು ಫುಲೆ ಕಿಡಿಕಾರಿದ್ದಾರೆ.

ಕುಂಭ ಮೇಳ ಪರಿಶಿಷ್ಟ ಜಾತಿ, ಪಂಗಡ ಮತ್ತು ಮುಸ್ಲಿಮರ ಹೊಟ್ಟೆ ತುಂಬಿಸಬಲ್ಲುದೇ ಎಂದು ಪ್ರಶ್ನಿಸಿರುವ ಅವರು, “ಸರಕಾರಕ್ಕೆ ಜನರ ಗಮನವನ್ನು ಬೇರೆಡೆ ಸೆಳೆಯಬೇಕಾಗಿದೆ. ಅದಕ್ಕಾಗಿ ಕುಂಭ ಮೇಳಕ್ಕೆ ದುಡ್ಡು ಖರ್ಚು ಮಾಡುತ್ತಿದೆ. ದೇವಸ್ಥಾನ ಅಥವಾ ದೇವರಿಂದ ದೇಶ ನಡೆಸಲು ಸಾಧ್ಯವಿಲ್ಲ. ಸಂವಿಧಾನದಿಂದ ಮಾತ್ರ ಸಾಧ್ಯ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರಕಾರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಜಾಡಿಸಿರುವ ಫುಲೆ, “ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ರಾಜ್ಯವನ್ನು ಆಳುವ ಸಾಮರ್ಥ್ಯವಿಲ್ಲ, ವಿವಿಧ ವರದಿಗಳ ಮೂಲಕ ಅದು ಖಚಿತಪಟ್ಟಿದೆ,” ಎಂದು ಹೇಳಿದ್ದಾರೆ.

ಡಿಸೆಂಬರ್‌ 6ರಂದು ಫುಲೆ ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಬಿಜೆಪಿಯು ಸಮಾಜವನ್ನು ಒಡೆಯುತ್ತಿದ್ದು ಮೀಸಲಾತಿಗೆ ಸಂಬಂಧಿಸಿದಂತೆ ಸಾಕಷ್ಟು ಕೆಲಸಗಳನ್ನು ಮಾಡಿಲ್ಲ ಎಂದು ಅವರು ಆರೋಪಿಸಿದ್ದರು. 2014ರ ಚುನಾವಣೆಯಲ್ಲಿ ಬಹಾರಿಚ್‌ ಮೀಸಲು ಕ್ಷೇತ್ರದಿಂದ ಅವರು ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು. ಪಕ್ಷದೊಳಗಿದ್ದಾಗಲೇ ಬಿಜೆಪಿಯ ತಪ್ಪುಗಳನ್ನು ಎತ್ತಿತೋರುತ್ತಿದ್ದ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಬಿಜೆಪಿ ವಿರುದ್ಧ ಬಾಯ್ತುಂಬ ಟೀಕೆಗಳನ್ನು ಮಾಡುತ್ತಿದ್ದಾರೆ. ಇದು ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರಕಾರ ಮತ್ತು ರಾಜ್ಯದ ಯೋಗಿ ಆದಿತ್ಯನಾಥ್‌ ಸರಕಾರವನ್ನು ಆಗಾಗ ಇಕ್ಕಟ್ಟಿಗೆ ಸಿಲುಕಿಸುತ್ತಿದೆ.