samachara
www.samachara.com
ಕೊಡಗಿನ ದಿಡ್ಡಳ್ಳಿ ಆದಿವಾಸಿಗಳೊಂದಿಗೆ ಹೊಸ ವರ್ಷ ಆಚರಿಸಿದ ನಟ ಚೇತನ್
ಸುದ್ದಿ ಸಾರ

ಕೊಡಗಿನ ದಿಡ್ಡಳ್ಳಿ ಆದಿವಾಸಿಗಳೊಂದಿಗೆ ಹೊಸ ವರ್ಷ ಆಚರಿಸಿದ ನಟ ಚೇತನ್

ದಿಡ್ಡಳ್ಳಿ ಆದಿವಾಸಿಗಳೊಂದಿಗೆ ಹೊಸ ವರ್ಷ ಆಚರಿಸುವ ಮೂಲಕ ಇಲ್ಲಿನ ಸಂತ್ರಸ್ತರ ಬದುಕಿನಲ್ಲಿ ಭರವಸೆ ಮೂಡಿಸುವ ಸಣ್ಣದೊಂದು ಪ್ರಯತ್ನವನ್ನು ನಟ ಚೇತನ್‌ ಮಾಡಿದ್ದಾರೆ.

ನಟ ಚೇತನ್‌ ಕೊಡಗಿನ ದಿಡ್ಡಳ್ಳಿ ಆದಿವಾಸಿಗಳೊಂದಿಗೆ ಹೊಸ ವರ್ಷ ಆಚರಿಸಿದ್ದಾರೆ. ಸೋಮವಾರ ರಾತ್ರಿ ಹಾಗೂ ಮಂಗಳವಾರ ಚೇತನ್‌ ಸಂತ್ರಸ್ತರೊಂದಿಗೆ ಕಳೆದಿದ್ದಾರೆ. ಈ ಮೂಲಕ ಸಂತ್ರಸ್ತರ ಬದುಕಿನಲ್ಲಿ ಭರವಸೆ ಮೂಡಿಸುವ ಸಣ್ಣದೊಂದು ಪ್ರಯತ್ನವನ್ನು ಚೇತನ್‌ ಹೊಸ ವರ್ಷದ ಸಂದರ್ಭದಲ್ಲಿ ಮಾಡಿದ್ದಾರೆ.

ಎರಡು ವರ್ಷಗಳ ಹಿಂದೆ ಕೊಡಗಿನ ದಿಡ್ಡಳ್ಳಿಯಲ್ಲಿ ನಡೆದ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಒಟ್ಟು 528 ಮನೆಗಳನ್ನು ಕಟ್ಟಿಕೊಡಲು ಮುಂದಾಗಿದ್ದು ಸೋಮವಾರಪೇಟೆ ತಾಲ್ಲೂಕಿನ ಬಸವನಳ್ಳಿ ಮತ್ತು ಬ್ಯಾಡಗೊಟ್ಟದಲ್ಲಿ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಲೇ ಇದೆ. ಇದರ ಪಕ್ಕದಲ್ಲೇ ಬೆಂಕಿ ಪೆಟ್ಟಿಗೆಯಂಥ ಗೂಡುಗಳಲ್ಲಿ ಆದಿವಾಸಿಗಳು ವಾಸ ಮಾಡುತಿದ್ದು, ಮನೆ ಯಾವಾಗ ಸಿಗುತ್ತದೋ ಎಂದು ದಿನವೂ ಆಸೆ ಕಂಗಳಿಂದ ನೋಡುತಿದ್ದಾರೆ.

ಆದರೆ ಸರ್ಕಾರದ್ದು ಮಾತ್ರ ಎಂದಿನ ನಿರ್ಲಕ್ಷ್ಯ. ಆರು ತಿಂಗಳಿನಲ್ಲೇ ಮನೆ ನಿರ್ಮಾಣ ಕಾರ್ಯ ಮುಗಿಸಿ ಸಂತ್ರಸ್ತರಿಗೆ ಹಂಚಿಕೆ ಮಾಡುವುದಾಗಿ ಹೇಳಿ ಹೋಗಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಗ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಇನ್ನೂ ಇತ್ತ ಕಡೆ ತಲೆ ಹಾಕಿಲ್ಲ. ದಿಡ್ಡಳ್ಳಿ ಸಂತ್ರಸ್ತರ ಸದ್ಯದ ಪರಿಸ್ಥಿತಿಯ ಬಗ್ಗೆ ‘ಸಮಾಚಾರ’ ಕಳೆದ ಬುಧವಾರ (ಡಿ.28) ವಿಶೇಷ ವರದಿ ಪ್ರಕಟಿಸಿತ್ತು.

Also read: 2019ರಲ್ಲಾದರೂ ಸೂರು ಕೊಡಿ: ಆದಿವಾಸಿಗಳ ನಾಡಿನೂರಿನಲ್ಲಿ 20 ತಿಂಗಳಿಗೆ 24 ಸಾವು! 

ಸಂತ್ರಸ್ತರಿಗಾಗಿ ಕಟ್ಟುತ್ತಿರುವ ಮನೆಗಳ ನಿರ್ಮಾಣ ವೆಚ್ಚದಲ್ಲಿ ಏರಿಕೆಯಾಗಿದ್ದು ಕೇಂದ್ರ ಸರ್ಕಾರ ಜಾರಿಗೆ ತಂದ ಜಿಎಸ್‍ಟಿ ವ್ಯವಸ್ಥೆಯಿಂದಾಗಿ ಗುತ್ತಿಗೆದಾರರಿಗೆ ಮನೆಗಳನ್ನು ಪೂರ್ಣಗೊಳಿಸಲು ಇನ್ನೂ ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಸರ್ಕಾರ ಮನೆಯೊಂದಕ್ಕೆ ನಿಗದಿಪಡಿಸಿರುವ 3.90 ಲಕ್ಷ ರೂಪಾಯಿ ಮೊತ್ತದಲ್ಲಿ ಮನೆಗಳಿಗೆ ಶೇಕಡ 12ರಷ್ಟು ಜಿಎಸ್‍ಟಿ ತೆರಿಗೆ ಕಟ್ಟಿದರೆ ಸುಮಾರು 48 ಸಾವಿರ ರೂಪಾಯಿ ಕೊರತೆ ಎದುರಾಗುತ್ತಿತ್ತು.

ಈ ಬಗ್ಗೆ ‘ಸಮಾಚಾರ’ದೊಂದಿಗೆ ಮಾತನಾಡಿದ ಕೊಡಗು ನಿರ್ಮಿತಿ ಕೇಂದ್ರದ ನಿರ್ದೇಶಕ ಸಚಿನ್, “ಮನೆಗಳ ನಿರ್ಮಾಣ ಕಾರ್ಯಕ್ಕೆ ಜಿಎಸ್‍ಟಿಯಿಂದ ಹೆಚ್ಚೇನೂ ತೊಂದರೆ ಆಗಿಲ್ಲ. ಈ ಹಿಂದೆಯೇ ನಿರ್ಮಾಣ ವೆಚ್ಚ ಏರಿಕೆಗಾಗಿ ಪ್ರಸ್ತಾವನೆ ಕಳಿಸಿದ್ದೆವು. ರಾಜ್ಯ ಸರ್ಕಾರ ಕಳೆದ ತಿಂಗಳು ಅನುಮೋದನೆ ಕೊಟ್ಟಿದ್ದು, ಈಗ ಮನೆಯೊಂದಕ್ಕೆ ಸರ್ಕಾರ 4.70 ಲಕ್ಷ ರೂಪಾಯಿಗಳನ್ನು ನೀಡಲಿದೆ” ಎಂದರು.

“ಒಟ್ಟು 528 ಮನೆಗಳ ನಿರ್ಮಾಣಕ್ಕಾಗಿ 24 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕಿದ್ದು ಈತನಕ ಬಿಡುಗಡೆ ಮಾಡಿರುವುದು 14 ಕೋಟಿ ರೂಪಾಯಿಗಳು ಮಾತ್ರ. ಈ ಹಣ ಬಿಡುಗಡೆ ಆದ ಕೂಡಲೇ ಮನೆಗಳ ನಿರ್ಮಾಣ ಒಂದೇ ತಿಂಗಳಿನಲ್ಲಿ ಮುಗಿಯಲಿದೆ” ಎಂದು ಮತ್ತೆ ಸರ್ಕಾರದತ್ತಲೇ ಬೊಟ್ಟು ಮಾಡಿದರು ಸಚಿನ್‌.

ಆರಂಭದಲ್ಲಿ ದಿಡ್ಡಳ್ಳಿ ಹೋರಾಟದಲ್ಲಿ ಭಾಗವಹಿಸಿದ್ದ ನಟ ಚೇತನ್ ಆದಿವಾಸಿಗಳೊಂದಿಗೆ ಹೊಸ ವರ್ಷ ಆಚರಿಸಿದ್ದು, ಸೋತು ಸೊರಗಿರುವ ಆದಿವಾಸಿಗಳ ಮೊಗದಲ್ಲಿ ಮಂದಹಾಸ ಮೂಡಿಸಿತು. ಈ ಬಗ್ಗೆ ‘ಸಮಾಚಾರ’ದೊಂದಿಗೆ ಮಾತನಾಡಿದ ಅನಿತಾ, “ಎರಡು ವರ್ಷದ ಹಿಂದೆ ಲಾರಿಯಲ್ಲಿ ಕರೆತಂದು ನಮ್ಮನ್ನು ಇಲ್ಲಿ ಹಾಕಿ ಹೋದರು. ಅಂದಿನಿಂದ ಇಂದಿನವರೆಗೂ ಹೋರಾಟದಲ್ಲಿ ಭಾಗವಹಿಸಿದ್ದ ರಾಜ್ಯ ಮಟ್ಟದ ನಾಯಕರು ಇಲ್ಲಿಗೆ ಭೇಟಿ ಕೊಟ್ಟಿಲ್ಲ. ನಟ ಚೇತನ್ ಅವರು ನಮ್ಮೊಂದಿಗೆ ಹೊಸ ವರ್ಷಾಚರಣೆ ಮಾಡಿದ್ದಾರೆ. ಇದು ನಮ್ಮಲ್ಲಿ ಸಂಭ್ರಮ ತಂದಿದೆ” ಎಂದರು.

ಹಾಡಿ ಮುಖಂಡ ಸ್ವಾಮಿ ಮಾತನಾಡಿ, “ನಮ್ಮ ಕಾಲೋನಿಯಲ್ಲಿ ಸುಮಾರು 24 ಸಾವುಗಳು ಸಂಭವಿಸಿವೆ. ಇದಕ್ಕೆ ಕಾರಣವೇನು ಎಂಬ ಬಗ್ಗೆ ಸರ್ಕಾರ ಹೆಚ್ಚಿನ ತನಿಖೆ ನಡೆಸಬೇಕು. ಚೇತನ್ ಅವರ ಭೇಟಿಯಿಂದ ನಮಗೆ ಹೋರಾಟದ ಕಿಚ್ಚು, ಆತ್ಮವಿಶ್ವಾಸ ಹೆಚ್ಚಾಗಿದೆ. ಇವರು 10ಕ್ಕೂ ಹೆಚ್ಚು ಬಾರಿ ಇಲ್ಲಿಗೆ ಭೇಟಿ ನೀಡಿದ್ದು ಇವರೂ ನಮ್ಮಲ್ಲಿ ಒಬ್ಬರು ಎಂಬ ಭಾವನೆ ಮೂಡಿದೆ” ಎಂದರು.

ನಟ ಚೇತನ್ ಮಾತನಾಡಿ, “ನಾವೆಲ್ಲರೂ ಒಂದು ಆದರ್ಶವಾದ ಸಮಾಜವನ್ನು ಕಟ್ಟಲೆಂದೇ ಈ ಸಂತ್ರಸ್ಥರ ನೋವು ನಲಿವಿನೊಂದಿಗೆ ಭಾಗಿಯಾಗಿದ್ದೇನೆ. ಆದಿವಾಸಿಗಳ ಬದುಕಿನ ಸಂಕಷ್ಟಗಳ ಅರಿವು ನನಗಿದೆ. 2019ನೇ ಇಸವಿಯಲ್ಲಾದರೂ ಇವರ ಸಂಕಷ್ಟಗಳು ದೂರವಾಗಲಿ ಎಂಬ ಗುರಿಯೊಂದಿಗೆ ತಂಡವನ್ನು ಕಟ್ಟಿಕೊಂಡು ಇವರ ನೆರವಿಗೆ ನಿಂತಿದ್ದೇನೆ” ಎಂದರು.

“ಆದಿವಾಸಿಗಳಿಗೆ ಮನೆ ಕಟ್ಟಿ ಕೊಟ್ಟಾಕ್ಷಣ ಇವರ ಬದುಕಿನ ಕಷ್ಟಗಳು ದೂರವಾಗುವುದಿಲ್ಲ. ನೂರಾರು ವರ್ಷಗಳ ಅನ್ಯಾಯವನ್ನು ಸರ್ಕಾರದ ನೀತಿಯೊಂದು ಬದಲಾಯಿಸುತ್ತದೆ ಎಂದು ನಾನು ನಂಬುವುದಿಲ್ಲ. ಸಮಾನತೆಯ ಬದುಕನ್ನು ಕಟ್ಟಲು ಬಹು ಮುಖ್ಯವಾಗಿ ಸಂಪತ್ತಿನ ಸಮಾನ ಹಂಚಿಕೆ ಆಗಬೇಕು. ಮುಂದಿನ ದಶಕಗಳಲ್ಲಾದರೂ ಈ ಉದ್ದೇಶ ಈಡೇರಿದರೆ ಸಮಾಜದ ಶೋಷಿತ ವರ್ಗದ ಜನರ ಬದುಕು ಹಸನಾಗಲಿದೆ” ಎಂದು ಹೇಳಿದರು.

“ಕೊಡಗಿನಲ್ಲಿ ಶ್ರೀಮಂತ ಜಮೀನ್ದಾರರು ನೂರಾರು ಎಕರೆ ಒತ್ತುವರಿ ಮಾಡಿಕೊಂಡಿದ್ದರೂ ಯಾರೂ ಅವರನ್ನು ಒಕ್ಕಲೆಬ್ಬಿಸಿಲ್ಲ. ಆದರೆ, ಬದುಕಿನ ಆನಿವಾರ್ಯತೆಗಾಗಿ ಮನೆ ಕಟ್ಟಿಕೊಂಡಿರುವ ದುರ್ಬಲ ವರ್ಗದವರನ್ನು ಮಾತ್ರ ಒಕ್ಕಲೆಬ್ಬಿಸಲಾಗುತ್ತಿದೆ. ನಾನು ಮೊದಲು ಆದಿವಾಸಿಗಳ ಹೋರಾಟಕ್ಕೆ ಕೈ ಜೋಡಿಸಿದಾಗ ನನ್ನ ಮೇಲೂ ಮೊಕದ್ದಮೆ ದಾಖಲಿಸಿದ್ದು, ನನಗೆ ನಕ್ಸಲ್ ಪ್ರೇರಿತ ಎಂಬ ಹಣೆಪಟ್ಟಿಯನ್ನೂ ಕಟ್ಟಲಾಗಿತ್ತು” ಎಂದರು.

“ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಮಾತನಾಡಿ ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಕೊಡುವಂತೆ ಒತ್ತಾಯಿಸುತ್ತೇನೆ. ಆದಿವಾಸಿಗಳ ಸಂಸ್ಖ್ರತಿ, ಪರಂಪರೆಗಳು ನಮ್ಮೆಲ್ಲರ ಸಂಸ್ಕೃತಿಯೂ ಆಗಿದೆ. ಆದಿವಾಸಿಗಳಿಗೆ ಕಾಡಿನೊಳಗೆ ಬದುಕಲೂ ಹಕ್ಕನ್ನು ನೀಡಬೇಕು. ನಾವು ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು, ಸಾವಿತ್ರಿಭಾಯಿ ಫುಲೆ ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕು” ಎಂದು ಹೇಳಿದರು.