2017-18: ಬ್ಯಾಂಕ್‌ ವಂಚನೆಯ ಪರ್ವಕಾಲದಲ್ಲಿ ನಡೆದಿದ್ದು 42,168 ಕೋಟಿ  ಲೂಟಿ!
ಸುದ್ದಿ ಸಾರ

2017-18: ಬ್ಯಾಂಕ್‌ ವಂಚನೆಯ ಪರ್ವಕಾಲದಲ್ಲಿ ನಡೆದಿದ್ದು 42,168 ಕೋಟಿ ಲೂಟಿ!

2016-17ರಲ್ಲಿ 5,026 ವಂಚನೆ ಪ್ರಕರಣಗಳು ದಾಖಲಾಗಿದ್ದರೆ ಈ ಪ್ರಮಾಣ 2017-18ಕ್ಕೆ ಆಗುವಾಗ 5,917ಕ್ಕೆ ಏರಿಕೆಯಾಗಿದೆ. ಒಂದೇ ವರ್ಷದಲ್ಲಿ 841 ಪ್ರಕರಣಗಳು ಹೆಚ್ಚಾಗಿದ್ದು, ವಂಚನೆ ಪ್ರಕರಣಗಳ ಪ್ರಮಾಣ ಶೇಕಡಾ 16.5ರಷ್ಟು ವೃದ್ಧಿಯಾಗಿದೆ.

2018ಕ್ಕೆ ಶುಭ ವಿದಾಯ ಹೇಳುವ ಸಮಯ ಬಂದಿದೆ. ಈ ಸಮಯದಲ್ಲಿ ನೆನಪಿಸಿಕೊಳ್ಳಬೇಕಾದ ಘಟನೆಗಳು ಹಲವಾರಿವೆ. ಅದರಲ್ಲಿ ಒಂದು, ಕಳೆದೊಂದು ವರ್ಷದಲ್ಲಿ ದೇಶದಲ್ಲಿ ನಡೆದ ಬ್ಯಾಂಕಿಂಗ್‌ ಹಗರಣಗಳು. ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತದ ಬ್ಯಾಂಕ್‌ ವಂಚನೆಗಳಿಗೆ ಸಾಕ್ಷಿಯಾದ ವರ್ಷ 2017-18. ಈ ಅವಧಿಯಲ್ಲಿ ದೇಶದಲ್ಲಿ ನಡೆದ ಒಟ್ಟು ಬ್ಯಾಂಕ್‌ ಹಗರಣಗಳ ಮೊತ್ತ ಬರೋಬ್ಬರಿ 41,168 ಕೋಟಿ ರೂಪಾಯಿ.

ಶುಕ್ರವಾರ ‘ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ)‘ ಬಿಡುಗಡೆಗೊಳಿಸಿರುವ ವರದಿಯಲ್ಲಿ ಈ ಮಾಹಿತಿಗಳಿವೆ. ಈ ಹಿಂದಿನ ವರ್ಷ ಭಾರತದಲ್ಲಿ 23,934 ಕೋಟಿ ರೂಪಾಯಿ ಮೊತ್ತದ ಬ್ಯಾಂಕ್‌ ವಂಚನೆ ನಡೆದಿತ್ತು. ಆ ಮೊತ್ತ ಈ ವರ್ಷಕ್ಕಾಗುವಾಗ ಶೇಕಡಾ 72ರಷ್ಟು ಏರಿಕೆಯಾಗಿದೆ. ಇದರಲ್ಲಿ 14,000 ಕೋಟಿ ರೂಪಾಯಿ ಮೊತ್ತದ ವಂಚನೆಯೊಂದಿಗೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣ ಮೊದಲ ಸ್ಥಾನದಲ್ಲಿದೆ. ಜತೆಗೆ ಅತೀ ದೊಡ್ಡ ಮಾಲನ್ನು ಪಡೆದುಕೊಂಡಿದೆ.

2016-17ರಲ್ಲಿ 5,026 ವಂಚನೆ ಪ್ರಕರಣಗಳು ದಾಖಲಾಗಿದ್ದರೆ ಈ ಪ್ರಮಾಣ 2017-18ಕ್ಕೆ ಆಗುವಾಗ 5,917ಕ್ಕೆ ಏರಿಕೆಯಾಗಿದೆ. ಒಂದೇ ವರ್ಷದಲ್ಲಿ 841 ಪ್ರಕರಣಗಳು ಹೆಚ್ಚಾಗಿದ್ದು, ವಂಚನೆ ಪ್ರಕರಣಗಳ ಪ್ರಮಾಣ ಶೇಕಡಾ 16.5ರಷ್ಟು ವೃದ್ಧಿಯಾಗಿದೆ. ಹಾಗೆ ನೋಡಿದರೆ ಕಳೆದ 10 ವರ್ಷಗಳಲ್ಲಿ ಸರಾಸರಿ 4,500 ಬ್ಯಾಂಕ್‌ ವಂಚನೆ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಮೊದಲ ಬಾರಿಗೆ 2017-18ರಲ್ಲಿ 5,917 ಬ್ಯಾಂಕ್‌ ಹಗರಣಗಳು ನಡೆದಿವೆ.

2017-18ರಲ್ಲಿ ನಡೆದ ಬ್ಯಾಂಕ್‌ ವಂಚನೆಗಳ ಒಟ್ಟು ಮೊತ್ತದಲ್ಲಿ ಶೇಕಡಾ 80ರಷ್ಟು ಪಾಲನ್ನು 50 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಬ್ಯಾಂಕ್‌ ವಂಚನೆಗಳೇ ಆವರಿಸಿಕೊಂಡಿವೆ ಎಂದು ಆರ್‌ಬಿಐ ತನ್ನ ವರದಿಯಲ್ಲಿ ಹೇಳಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಹಗರಣಗಳು ಆಭರಣ ಮತ್ತು ವಜ್ರೋದ್ಯಮ ಕ್ಷೇತ್ರದಲ್ಲಿ ನಡೆದಿದೆ ಎಂದು ಅದು ವಿವರಿಸಿದೆ. ನೀರವ್‌ ಮೋದಿ-ಪಿಎನ್‌ಬಿ ಹಗರಣದ ಕುರಿತಂತೆ ವರದಿಯಲ್ಲಿ ಈ ಸಾಲುಗಳನ್ನು ಉಲ್ಲೇಖಿಸಲಾಗಿದೆ.

ಹೆಚ್ಚಿನ ಬ್ಯಾಂಕ್‌ ಹಗರಣಗಳು ಸಾರ್ವಜನಿಕ ರಂಗದ ಬ್ಯಾಂಕ್‌ (ಪಿಎಸ್‌ಬಿ) ಗಳಲ್ಲೇ ನಡೆದಿರುವುದು ದೇಶದ ಜನರ ಆತಂಕವನ್ನು ಹೆಚ್ಚಿಸಿದೆ. 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಬ್ಯಾಂಕ್‌ ಹಗರಣಗಳಲ್ಲಿ ಶೇಕಡಾ 92.9ರಷ್ಟು ಪಾಲನ್ನು ಪಿಎಸ್‌ಬಿಗಳೇ ಹಂಚಿಕೊಂಡಿರುವುದು ಬ್ಯಾಂಕ್‌ ವ್ಯವಸ್ಥೆಯ ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯುತ್ತಿವೆ. ಇದು ಭಾರತೀಯರ ಪಾಲಿಗೆ ಒಳ್ಳೆಯ ಬೆಳವಣಿಗೆಯಂತೂ ಅಲ್ಲ.

ಚಿತ್ರ ಕೃಪೆ: ಫೈನಾನ್ಶಿಯಲ್‌ ಎಕ್ಸ್‌ಪ್ರೆಸ್‌