‘ಕೊಂದು ಬನ್ನಿ, ನಾವಿದ್ದೇವೆ’: ಉತ್ತರ ಪ್ರದೇಶದ ಪೂರ್ವಾಂಚಲ ವಿ.ವಿ. ಕುಲಪತಿ ಪ್ರಚೋದನೆ
ಸುದ್ದಿ ಸಾರ

‘ಕೊಂದು ಬನ್ನಿ, ನಾವಿದ್ದೇವೆ’: ಉತ್ತರ ಪ್ರದೇಶದ ಪೂರ್ವಾಂಚಲ ವಿ.ವಿ. ಕುಲಪತಿ ಪ್ರಚೋದನೆ

“ನೀವು ಒಂದು ವೇಳೆ ಜಗಳಕ್ಕಿಳಿದರೆ ಎದುರಾಳಿಗಳನ್ನು ಹೊಡೆದು ಬನ್ನಿ, ಇಲ್ಲವೇ ಕೊಂದು ಬನ್ನಿ. ಉಳಿದಿದ್ದನ್ನು ನಾವು ನೋಡಿಕೊಳ್ಳುತ್ತೇವೆ” ಎಂದಿದ್ದಾರೆ ಪ್ರೊ. ಯಾದವ್‌.

ಉತ್ತರ ಪ್ರದೇಶದ ಬಿಜೆಪಿ ಮುಖಂಡರಷ್ಟೇ ಅಲ್ಲ ಅಲ್ಲಿನ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರೂ ಪ್ರಚೋದನಾಕಾರಿ ಭಾಷಣ ಮಾಡಬಲ್ಲರು ಎಂಬುದನ್ನು ಪ್ರೊ. ರಾಜಾರಾಮ್‌ ಯಾದವ್‌ ಸಾಬೀತುಪಡಿಸಿದ್ದಾರೆ!

ಪ್ರೊ. ರಾಜಾರಾಮ್‌ ಯಾದವ್‌ ಉತ್ತರ ಪ್ರದೇಶದ ಪೂರ್ವಾಂಚಲ ವಿಶ್ವವಿದ್ಯಾಲಯದ ಕುಲಪತಿ. ಗಾಝಿಪುರದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿರುವ ಪ್ರೊ. ಯಾದವ್‌ ವಿದ್ಯಾರ್ಥಿಗಳನ್ನು ಪ್ರಚೋದಿಸುವಂತಹ ಭಾಷಣ ಮಾಡಿದ್ದಾರೆ.

“ನೀವು ನಿಜಕ್ಕೂ ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆಗಿದ್ದರೆ ಕಣ್ಣೀರು ಹಾಕುತ್ತಾ ನನ್ನ ಬಳಿ ಬರಬೇಡಿ. ನೀವು ಒಂದು ವೇಳೆ ಜಗಳಕ್ಕಿಳಿದರೆ ಎದುರಾಳಿಗಳನ್ನು ಹೊಡೆದು ಬನ್ನಿ, ಇಲ್ಲವೇ ಕೊಂದು ಬನ್ನಿ. ಉಳಿದಿದ್ದನ್ನು ನಾವು ನೋಡಿಕೊಳ್ಳುತ್ತೇವೆ” ಎಂದಿದ್ದಾರೆ ಪ್ರೊ. ಯಾದವ್‌.

ಅಲಹಾಬಾದ್‌ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಪ್ರೊ. ಯಾದವ್‌ ಅವರನ್ನು 2017ರ ಏಪ್ರಿಲ್‌ನಲ್ಲಿ ಪೂರ್ವಾಂಚಲ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ. ಇದೇ ಪ್ರೊ. ಯಾದವ್‌ ಈ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ವಿಶ್ವವಿದ್ಯಾಲಯದೊಳಗೆ ರಾಮ ಕಥಾ ಕಾರ್ಯಕ್ರಮ ಏರ್ಪಡಿಸಿದ್ದರು. ರಾಮ ಕಥಾ ಕಾರ್ಯಕ್ರಮದ ಮೂಲಕ ವಿಶ್ವವಿದ್ಯಾಲಯದ ವಾತಾವರಣವನ್ನು ಕೇಸರೀಕರಣಗೊಳಿಸುತ್ತಿರುವ ಆರೋಪವೂ ಪ್ರೊ. ಯಾದವ್‌ ವಿರುದ್ಧ ಕೇಳಿಬಂದಿತ್ತು.

ಈಗ, “ಜಗಳಕ್ಕೆ ಬಂದವರನ್ನು ಕೊಂದು ಬನ್ನಿ, ಉಳಿದಿದ್ದನ್ನು ನಾವು ನೋಡಿಕೊಳ್ಳುತ್ತೇವೆ” ಎಂದು ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ದ್ವೇಷದ ಪ್ರಚೋದನೆ ಬಿತ್ತುವ ಮಾತುಗಳನ್ನು ಪ್ರೊ. ಯಾದವ್‌ ಆಡಿದ್ದಾರೆ. ಈ ಪ್ರಚೋದನಾಕಾರಿ ಭಾಷಣದ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪ್ರೊ. ಯಾದವ್‌ ವಿರುದ್ಧ ಟೀಕೆಗಳು ಶುರುವಾಗಿವೆ. ಈಗಾಗಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ರಾಜ್ಯಕ್ಕೆ ಅಕ್ಷರಶಃ ಕೇಸರಿ ಬಳಿಯುವ ಕೆಲಸದಲ್ಲಿದ್ದಾರೆ. ಅದರ ಜೊತೆಗೆ ಪ್ರೊ. ಯಾದವ್‌ ಅವರಂಥ ‘ಶಿಕ್ಷಣ ತಜ್ಞ’ರೂ ರಾಜ್ಯದಲ್ಲಿ ಕೇಸರಿಯ ಜತೆಗೆ ಹಾಗೂ ದ್ವೇಷ ಭಾಷಣ ಬಿತ್ತುತ್ತಿದ್ದಾರೆ.