ಅಗಸ್ಟಾ ವೆಸ್ಟ್‌ಲ್ಯಾಂಡ್‌ ಡೀಲ್: ‘ಇಟಲಿ ಮಹಿಳೆಯ ಮಗ’ನ ಹೆಸರು ಹೇಳಿದ ಕ್ರಿಶ್ಚಿಯನ್‌ ಮಿಷಲ್?
ಸುದ್ದಿ ಸಾರ

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಡೀಲ್: ‘ಇಟಲಿ ಮಹಿಳೆಯ ಮಗ’ನ ಹೆಸರು ಹೇಳಿದ ಕ್ರಿಶ್ಚಿಯನ್‌ ಮಿಷಲ್?

“ಮಿಷಲ್‌ ವಿಚಾರಣೆ ವೇಳೆ ಮುಂದೆ ದೇಶದ ಪ್ರಧಾನಿಯಾಗಲಿರುವ ಇಟಲಿ ಮಹಿಳೆಯ ಮಗನ ಬಗ್ಗೆ ಹೇಳಿಕೆ ನೀಡಿದ್ದಾನೆ” ಎಂದು ಜಾರಿ ನಿರ್ದೇಶನಾಲಯದ ವಕೀಲರು ನ್ಯಾಯಾಲಯಕ್ಕೆ ಹೇಳಿದ್ದಾರೆ.

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿಯ ಮಧ್ಯವರ್ತಿ ಎಂಬ ಆರೋಪ ಎದುರಿಸುತ್ತಿರುವ ಕ್ರಿಶ್ಚಿಯನ್‌ ಮಿಷೆಲ್‌ ವಿಚಾರಣೆ ವೇಳೆ ‘ಮುಂದೆ ದೇಶದ ಪ್ರಧಾನಿಯಾಗಲಿರುವ ಇಟಲಿ ಮಹಿಳೆಯ ಮಗ’ನ ಹೆಸರು ಹೇಳಿದ್ದಾನೆ ಜಾರಿ ನಿರ್ದೇಶನಾಲಯದ ವಕೀಲರು ದೆಹಲಿಯ ಪಟಿಯಾಲ ಹೌಸ್‌ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

“ವಿಚಾರಣೆ ಸಂದರ್ಭದಲ್ಲಿ ಮಿಷಲ್‌ ಸೋನಿಯಾ ಗಾಂಧಿ ಹೆಸರು ಹೇಳಿದ್ದಾನೆ. ಮುಂದೆ ದೇಶದ ಪ್ರಧಾನಿಯಾಗಲಿರುವ ಇಟಲಿ ಮಹಿಳೆಯ ಮಗನ ಬಗ್ಗೆ ಮಿಷಲ್‌ ಹೇಳಿಕೆ ನೀಡಿದ್ದಾನೆ” ಎಂದು ಜಾರಿ ನಿರ್ದೇಶನಾಲಯದ ವಕೀಲರು ನ್ಯಾಯಾಲಯಕ್ಕೆ ಹೇಳಿದ್ದಾರೆ. ಆದರೆ, ಹೆಲಿಕಾಪ್ಟರ್‌ ಖರೀದಿಯಲ್ಲಿ ಸೋನಿಯಾ ಗಾಂಧಿ ಹಾಗೂ ಅವರ ಮಗ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪಾತ್ರದ ಬಗ್ಗೆ ಮಿಷಲ್‌ ಏನು ಹೇಳಿದ್ದಾನೆ ಎಂಬುದನ್ನು ವಕೀಲರು ಸ್ಪಷ್ಟವಾಗಿ ಹೇಳಿಲ್ಲ.

“ಮಿಷಲ್‌ ಮತ್ತು ಇತರರ ನಡುವಿನ ಸಂಭಾಷಣೆಯಲ್ಲಿ ‘ಆರ್‌’ ಎಂದು ಉಲ್ಲೇಖವಾಗಿರುವ ಹಗರಣದ ಮಾಸ್ಟರ್‌ ಮೈಂಡ್‌ ಯಾರು ಎಂಬುದು ಇನ್ನೂ ತನಿಖೆಯಿಂದ ತಿಳಿಯಬೇಕಿದೆ. ಇದಕ್ಕಾಗಿ ಮಿಷಲ್‌ನನ್ನು ಹೆಚ್ಚಿನ ವಿಚಾರಣೆ ನಡೆಸುವುದು ಅಗತ್ಯವಿದೆ” ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Also read: ರಫೇಲ್‌ ರನ್‌ವೇಯಲ್ಲಿ ಅಗಸ್ಟಾ ಲ್ಯಾಂಡಿಂಗ್‌: ಭಾರತಕ್ಕೆ ಬಂದಿಳಿದ ಮಧ್ಯವರ್ತಿ ಮಿಷಲ್!

ಹೆಲಿಕಾಪ್ಟರ್‌ ಖರೀದಿಯ ಮಧ್ಯವರ್ತಿಯಾಗಿದ್ದ ಮಿಷಲ್ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಯಿಂದ 30 ಮಿಲಿಯನ್‌ ಯೂರೋ (ಸುಮಾರು 225 ಕೋಟಿ ರೂಪಾಯಿ) ಕಮಿಷನ್ ಪಡೆದಿದ್ದಾನೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಇದೇ ಆರೋಪದ ಮೇಲೆ ಭಾರತಕ್ಕೆ ಹಸ್ತಾಂತರವಾಗಿರುವ ಮಿಷಲ್‌ ವಿಚಾರಣೆ ಸದ್ಯ ಜಾರಿ ನಿರ್ದೇಶನಾಲಯದಿಂದ ನಡೆಯುತ್ತಿದೆ.

ಜಾರಿ ನಿರ್ದೇಶನಾಲಯದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮುಖಂಡರು, ಮೋದಿ ಸರಕಾರ ಸರಕಾರಿ ಸಂಸ್ಥೆಗಳಿಂದ ಗಾಂಧಿ ಕುಟುಂಬದ ಮೇಲೆ ಆರೋಪಗಳನ್ನು ಹೊರಿಸುವ ಪ್ರಯತ್ನ ನಡೆಸಿದೆ ಎಂದಿದ್ದಾರೆ. “(ಹಗರಣದಲ್ಲಿ) ಗಾಂಧಿ ಕುಟುಂಬದ ಹೆಸರು ತರಲು ‘ಚೌಕೀದಾರ್‌’ ಸರಕಾರಿ ಸಂಸ್ಥೆಗಳ ಮೇಲೆ ಒತ್ತಡ ತರುತ್ತಿರುವುದೇಕೆ? ಬಿಜೆಪಿ ಸ್ಕ್ರಿಪ್ಟ್‌ ವ್ರೈಟರ್‌ಗಳು ಹಗಲೂ ರಾತ್ರಿ ಕೆಲಸ ಮಾಡುತ್ತಿದ್ದಾರೆ” ಎಂದು ಕಾಂಗ್ರೆಸ್‌ ವಕ್ತಾರ ಆರ್‌ಪಿಎನ್‌ ಸಿಂಗ್‌ ಹೇಳಿದ್ದಾರೆ.