samachara
www.samachara.com
‘ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ’; ಚುನಾವಣೆ ಗೆಲ್ಲಲು ಸಿದ್ಧವಾಗಿದೆ ಸೂತ್ರ!
ಸುದ್ದಿ ಸಾರ

‘ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ’; ಚುನಾವಣೆ ಗೆಲ್ಲಲು ಸಿದ್ಧವಾಗಿದೆ ಸೂತ್ರ!

ರೈತರ ಸಾಲಮನ್ನಾ ಈಗ ಚುನಾವಣೆಯ ಗೆಲುವಿನ ಸೂತ್ರ ಎಂದು ರಾಜಕಾರಣಿಗಳು ಅರ್ಥೈಸಿಕೊಂಡಂತಿದೆ.

ಅಧಿಕಾರಕ್ಕೆ ಬಂದ ಕೂಡಲೇ ರೈತರ ಸಾಲಮನ್ನಾ ಮಾಡುವ ಪರಿಪಾಠ ದೇಶದಲ್ಲಿ ಹೆಚ್ಚುತ್ತಿದೆ. ಸಾಲಮನ್ನಾ ವಿಚಾರಕ್ಕೂ, ಓಟ್‌ ಬ್ಯಾಂಕ್‌ಗೂ ನೇರ ಸಂಬಂಧವಿರುವುದನ್ನು ಅರಿತಿರುವ ರಾಜಕಾರಣಿಗಳು ಈಗ ಬಾಯಿ ಬಿಟ್ಟರೆ ಸಾಲಮನ್ನಾ ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‌ಗಡದ ನಂತರ ಈಗ ಸಾಲಮನ್ನಾ ಹರಿಯಾಣದಲ್ಲಿ ಸದ್ದು ಮಾಡುತ್ತಿದೆ.

ಮುಂದಿನ ವರ್ಷ ಹರಿಯಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಈಗಲೇ ಸಿದ್ಧತೆ ನಡೆಸಿರುವ ರಾಜ್ಯದ ರಾಜಕಾರಣಿಗಳು ಹೊಸ ಹೊಸ ಭರವಸೆಗಳ ಪಟ್ಟಿ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ಹರಿಯಾಣದ ಕಾಂಗ್ರೆಸ್‌ ಮುಖಂಡ ಭೂಪೇಂದರ್‌ ಸಿಂಗ್‌ ಹೂಡಾ, “ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ರೈತರ ಸಾಲಮನ್ನಾ ಮಾಡುತ್ತೇವೆ” ಎಂದು ಘೋಷಿಸಿದ್ದಾರೆ.

ಈ ಹಿಂದೆ ಎರಡು ಬಾರಿ ಹರಿಯಾಣದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ಹೂಡಾ, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಆರು ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುವುದಾಗಿ ‘ಜನಪ್ರಿಯ’ ಭರವಸೆ ನೀಡಿದ್ದಾರೆ.

ಸಾಲಮನ್ನಾ ಭರವಸೆಯ ಜತೆಗೆ ವಿದ್ಯುತ್‌ ದರ ಇಳಿಕೆ ಹಾಗೂ ವೃದ್ಧಾಪ್ಯ ವೇತನ ಏರಿಕೆಯ ಆಶ್ವಾಸನೆಯನ್ನೂ ಹೂಡಾ ನೀಡಿದ್ದಾರೆ. ವಿದ್ಯುತ್ ದರವನ್ನು ಶೇಕಡ 50ರಷ್ಟು ಇಳಿಸಲಾಗುವುದು ಹಾಗೂ ವೃದ್ಧಾಪ್ಯ ವೇತನವನ್ನು ತಿಂಗಳಿಗೆ 2 ಸಾವಿರ ರೂಪಾಯಿಯಿಂದ 3 ಸಾವಿರ ರೂಪಾಯಿಗೆ ಏರಿಸಲಾಗುವುದು ಎಂದು ಹೂಡಾ ಭರವಸೆ ಕೊಟ್ಟಿದ್ದಾರೆ.

ಕಾಂಗ್ರೆಸ್‌ ನೀಡಿದ್ದ ರೈತರ ಸಾಲಮನ್ನಾ ಭರವಸೆ ಬಿಜೆಪಿ ಅಧಿಕಾರದಲ್ಲಿದ್ದ ನೆರೆಯ ರಾಜ್ಯಗಳಲ್ಲಿ ಪರಿಣಾಮ ಬೀರಿರುವುದರಿಂದ ಹರಿಯಾಣದಲ್ಲೂ ಅದೇ ಸಾಲಮನ್ನಾ ಅಸ್ತ್ರ ಪ್ರಯೋಗಿಸಲು ಹೂಡಾ ಮುಂದಾಗಿದ್ದಾರೆ.

ಕರ್ನಾಟಕದಲ್ಲಿ ಮೈತ್ರಿ ಸರಕಾರ ರೈತರ ಸಾಲಮನ್ನಾ ಮಾಡಿದ ಬಳಿಕ ದೇಶದಲ್ಲಿ ಸಾಲಮನ್ನಾ ಪರ್ವ ಆರಂಭವಾಗಿದೆ. “ಮೋದಿ ಸರಕಾರ ರೈತರ ಸಾಲಮನ್ನಾ ಮಾಡುವವರೆಗೂ ನಾವು ಮೋದಿ ನೆಮ್ಮದಿಯಿಂದ ನಿದ್ರಿಸಲು ಬಿಡುವುದಿಲ್ಲ” ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇತ್ತೀಚೆಗೆ ಹೇಳಿದ್ದರು.

ರೈತರ ಸಾಲಮನ್ನಾ, ವೃದ್ಧಾಪ್ಯ ವೇತನ ಏರಿಕೆ, ವಿದ್ಯುತ್ ದರ ಕಡಿತದಂತಹ ಜನಪ್ರಿಯ ಭರವಸೆಗಳ ಮೂಲಕ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಮುಂದಾಗುತ್ತಿದ್ದಾರೆ. ಬಿಜೆಪಿ ಇಂಥ ಘೋಷಣೆ ಮಾಡುವ ಮೊದಲೇ ಕಾಂಗ್ರೆಸ್‌ ಹರಿಯಾಣದಲ್ಲಿ ಈ ಘೋಷಣೆ ಮಾಡಿರುವುದರಿಂದ ಮುಂಬರುವ ಚುನಾವಣೆಯಲ್ಲಿ ಹರಿಯಾಣದಲ್ಲಿ ಗೆಲ್ಲುವ ಕನಸನ್ನು ಕಾಂಗ್ರೆಸ್‌ ಕಾಣುತ್ತಿದೆ.