‘24 ಗಂಟೆಯಲ್ಲಿ ಮೈತ್ರಿ ಸರಕಾರ ಪತನ,  ವಾರದೊಳಗೆ ಬಿಜೆಪಿ ಅಧಿಕಾರಕ್ಕೆ’: ಗಾಳಿಯಲ್ಲಿ ಗುಂಡು ಹೊಡೆದ ಕತ್ತಿ!
ಸುದ್ದಿ ಸಾರ

‘24 ಗಂಟೆಯಲ್ಲಿ ಮೈತ್ರಿ ಸರಕಾರ ಪತನ, ವಾರದೊಳಗೆ ಬಿಜೆಪಿ ಅಧಿಕಾರಕ್ಕೆ’: ಗಾಳಿಯಲ್ಲಿ ಗುಂಡು ಹೊಡೆದ ಕತ್ತಿ!

ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌- ಜೆಡಿಎಸ್ ಶಾಸಕರ ಅಸಮಾಧಾನದ ಲಾಭ ಪಡೆಯಲು ಯತ್ನಿಸಿರುವ ಬಿಜೆಪಿ ಉಮೇಶ್‌ ಕತ್ತಿ ಮೂಲಕ ಮೈತ್ರಿ ಸರಕಾರ ಉರುಳಿಸುವ ಹೇಳಿಕೆ ಉರುಳಿಸಿದೆ.

ಮೈತ್ರಿ ಸರಕಾರದ ಬಗ್ಗೆ ಬೆಳಗಾವಿಯಲ್ಲಿ ಭವಿಷ್ಯ ನುಡಿದಿರುವ ಬಿಜೆಪಿ ಶಾಸಕ ಉಮೇಶ್‌ ಕತ್ತಿ, “ಮುಂದಿನ 24 ಗಂಟೆಗಳಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರಕಾರ ಪತನವಾಗುತ್ತದೆ. ಒಂದು ವಾರದೊಳಗೆ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ” ಎಂದಿದ್ದಾರೆ.

“ನಾವು ಆಪರೇಷನ್‌ ಕಮಲ ನಡೆಸುವುದಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಮನನೊಂದು ಬರುವ ಶಾಸಕರನ್ನು ನಾವು ಸ್ವಾಗತಿಸುತ್ತೇವೆ. 15 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ” ಎಂದಿರುವ ಕತ್ತಿ ಸಂಪುಟ ವಿಸ್ತರಣೆ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೆ ರಂಗು ಬೆರೆಸಿದ್ದಾರೆ.

ರಮೇಶ್‌ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈ ಬಿಟ್ಟಿರುವುದಕ್ಕೆ ಹಾಗೂ ಹಿರಿಯ ಕಾಂಗ್ರೆಸ್ಸಿಗರಾದ ಶ್ಯಾಮನೂರು ಶಿವಶಂಕರಪ್ಪ ಮತ್ತು ರಾಮಲಿಂಗಾ ರೆಡ್ಡಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದ ಬಗ್ಗೆ ಕಾಂಗ್ರೆಸ್‌ ಒಳಗೆ ಸದ್ಯ ಹಿರಿಯ ಮುಖಂಡರಿಂದಲೇ ಅಸಮಾಧಾನದ ಮಾತುಗಳು ಬಹಿರಂಗವಾಗಿಯೇ ಏಳುತ್ತಿವೆ.

ಪಕ್ಷೇತರ ಶಾಸಕರಿಬ್ಬರು ಗಾಳಿ ಬಂದಾಗ ತೂರಿಕೊಳ್ಳಲು ಸಿದ್ಧರಾಗಿದ್ದಾರೆ. ಅತೃಪ್ತ ಕಾಂಗ್ರೆಸ್‌ ನಾಯಕರ ಜತೆಗಿರುವ ಶಾಸಕರು ತಮ್ಮ ನಾಯಕರು ತೋರುವ ದಾರಿಯಲ್ಲಿ ಸಾಗಲು ಮುಂದಾಗಿದ್ದಾರೆ. ಇಲ್ಲಿಯವರೆಗೂ ತಣ್ಣಗಿದ್ದ ಬಿಜೆಪಿ ಮುಖಂಡರು ಈಗ ‘ಇದು ಆಪರೇಷನ್‌ ಕಮಲ ಅಲ್ಲ, ಬರುವವರಿಗೆ ತೆರೆದ ಬಾಗಿಲು’ ಎನ್ನುವ ಮೂಲಕ ಅತೃಪ್ತರಿಗೆ ಗಾಳ ಹಾಕುವ ಪ್ರಯತ್ನ ನಡೆಸಿದ್ದಾರೆ.

ಸಂಪುಟ ವಿಸ್ತರಣೆ ಬಳಿಕ ಸಿದ್ದರಾಮಯ್ಯ ಮೇಲೆ ಸಿಟ್ಟಾಗಿರುವ ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ತಮ್ಮ ಬಾಲಬಡುಕರಿಗೆ ಸಂಪುಟದಲ್ಲಿ ಸ್ಥಾನ ಕೊಡಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸಂಪುಟ ವಿಸ್ತರಣೆ ಕಸರತ್ತಿನ ಬೆನ್ನಲ್ಲೇ ಕಾಂಗ್ರೆಸ್‌ಗೆ ಖಾತೆ ಹಂಚಿಕೆಯೂ ಕಗ್ಗಂಟಾಗಿದೆ. ಡಿ.ಕೆ.ಶಿವಕುಮಾರ್‌ ಬಳಿ ಇರುವ ಜಲಸಂಪನ್ಮೂಲ ಖಾತೆಯನ್ನು ತಮಗೆ ಕೊಡುವಂತೆ ಎಂ.ಬಿ. ಪಾಟೀಲ್‌ ಹಾಗೂ ಕೆ.ಜೆ. ಜಾರ್ಜ್‌ ಬಳಿ ಇರುವ ಕೈಗಾರಿಕಾ ಖಾತೆಯನ್ನು ಕೊಡುವಂತೆ ಆರ್‌.ವಿ. ದೇಶಪಾಂಡೆ ಕಾಂಗ್ರೆಸ್‌ ಹೈಕಮಾಂಡ್‌ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.

ಖಾತೆ ಹಂಚಿಕೆಯ ಕಗ್ಗಂಟಿನ ನಡುವೆಯೇ ಗೃಹ ಖಾತೆಯನ್ನು ಬಿಟ್ಟುಕೊಡಲು ಹಿಂದೇಟು ಹಾಕಿರುವ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅಸಮಾಧಾನವನ್ನು ತಣಿಸುವ ಹೊರೆಯೂ ಈಗ ಕಾಂಗ್ರೆಸ್‌ ಮೇಲೆ ಬಿದ್ದಿದೆ. ಗೃಹ ಖಾತೆ ಬಿಟ್ಟುಕೊಡಲು ಒಪ್ಪದ ಪರಮೇಶ್ವರ್‌ ಸಿದ್ದರಾಮಯ್ಯ ವಿರುದ್ಧ ಗರಂ ಆಗಿ ಸಭೆಯಿಂದಲೇ ಹೊರನಡೆದಿದ್ದಾರೆ ಎಂಬ ಮಾತುಗಳಿವೆ.

ಕಾಂಗ್ರೆಸ್‌ ಒಳಗೆ ಇಷ್ಟೆಲ್ಲಾ ತಾಕಲಾಟಗಳು ನಡೆಯುತ್ತಿರುವಾಗ ಅತ್ತ ಜೆಡಿಎಸ್‌ನಲ್ಲೂ ಸಚಿವ ಸ್ಥಾನ ಹಾಗೂ ಖಾತೆ ವಿಚಾರವಾಗಿ ಬಹಿರಂಗ ಹೇಳಿಕೆಗಳ ಹಾರಾಟ ನಡೆಯುತ್ತಿದೆ. ಜೆಡಿಎಸ್‌ ಮುಖಂಡ ಬಸವರಾಜ ಹೊರಟ್ಟಿ ಕೊಟ್ಟರೆ ತಮಗೆ ಶಿಕ್ಷಣ ಖಾತೆಯನ್ನೇ ನೀಡುವಂತೆ ಹೋದಲ್ಲಿ ಬಂದಲ್ಲಿ ಹೇಳಿಕೆ ನೀಡುತ್ತಿದ್ದಾರೆ.

ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌- ಜೆಡಿಎಸ್ ಶಾಸಕರ ಅಸಮಾಧಾನದ ಲಾಭ ಪಡೆಯಲು ಯತ್ನಿಸಿರುವ ಬಿಜೆಪಿ ಉಮೇಶ್‌ ಕತ್ತಿ ಮೂಲಕ ಮೈತ್ರಿ ಸರಕಾರ ಉರುಳಿಸುವ ಹೇಳಿಕೆ ಉರುಳಿಸಿದೆ. ಈ ಮೂಲಕ ಅತೃಪ್ತ ಶಾಸಕರನ್ನು ಸೆಳೆಯುವ ಗಾಳವನ್ನಂತೂ ಬಿಜೆಪಿ ಹಾಕಿಕೊಂಡು ಕುಳಿತಿದೆ.