ರೈಲ್ವೆ ಅವ್ಯವಸ್ಥೆ ಬಗ್ಗೆ ಮೋದಿಗೆ ತರಾಟೆ; ಬಿಜೆಪಿ  ನಾಯಕಿ ಲಕ್ಷ್ಮೀಕಾಂತಾ ಚಾವ್ಲಾ ವಿಡಿಯೊ ವೈರಲ್
ಸುದ್ದಿ ಸಾರ

ರೈಲ್ವೆ ಅವ್ಯವಸ್ಥೆ ಬಗ್ಗೆ ಮೋದಿಗೆ ತರಾಟೆ; ಬಿಜೆಪಿ ನಾಯಕಿ ಲಕ್ಷ್ಮೀಕಾಂತಾ ಚಾವ್ಲಾ ವಿಡಿಯೊ ವೈರಲ್

ಮೊಬೈಲ್‌ ವಿಡಿಯೊ ಹರಿಬಿಟ್ಟಿರುವ ಚಾವ್ಲಾ ಮಾತುಗಳು ಮೋದಿ ಸರಕಾರದ ವಾಸ್ತವಗಳನ್ನು ಬಟಾಬಯಲು ಮಾಡುವಂತಿದೆ.

ದೇಶದ ಜನತೆಗೆ ‘ಅಚ್ಚೇ ದಿನ’ದ ಹಗಲುಗನಸು ತೋರಿಸುತ್ತಿರುವ ಮೋದಿ ಸರಕಾರದ ವಿರುದ್ಧ ಅವರದ್ದೇ ಪಕ್ಷದ ಹಿರಿಯ ನಾಯಕಿಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ಬುಲೆಟ್‌ ರೈಲಿನ ಮಾತು ದೂರವಾಯಿತು, ದೇಶದ ಸಾಮಾನ್ಯ ಜನರು ಪ್ರಯಾಣಿಸುವ ರೈಲು ವ್ಯವಸ್ಥೆಯನ್ನೇ ಸರಿಪಡಿಸಲು ಸಾಧ್ಯವಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರನ್ನು ಚಾವ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಮೃತ್‌ಸರ ಮೂಲದ ಬಿಜೆಪಿ ಹಿರಿಯ ಬಿಜೆಪಿ ನಾಯಕಿ, ಪಂಜಾಬ್‌ನ ಮಾಜಿ ಸಚಿವೆ ಚಾವ್ಲಾ ಡಿಸೆಂಬರ್‌ 22ರಂದು ಸರಯೂ- ಯಮುನಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ರೈಲಿನ ಪ್ರಯಾಣ ಯಾವುದೇ ಸೂಚನೆ ಇಲ್ಲದೆ 10 ಗಂಟೆ ತಡವಾದ ಬಗ್ಗೆ ಮೊಬೈಲ್‌ ವಿಡಿಯೊ ಹರಿಬಿಟ್ಟಿರುವ ಚಾವ್ಲಾ ಮಾತುಗಳು ಮೋದಿ ಸರಕಾರದ ವಾಸ್ತವಗಳನ್ನು ಬಟಾಬಯಲು ಮಾಡುವಂತಿದೆ.

“ಮೋದಿಜಿ, ದೇಶದ ಸಾಮಾನ್ಯ ಜನರ ಬಗ್ಗೆ ಯೋಚಿಸಿ. ಈ ರೈಲು ಯಾವುದೇ ಸೂಚನೆ ಇಲ್ಲದೆ ಹಲವು ಗಂಟೆಗಳ ಕಾಲ ವಿಳಂಬವಾಗಿದೆ. ವಿಳಂಬಕ್ಕೆ ಕಾರಣವನ್ನೂ ರೈಲ್ವೆ ಅಧಿಕಾರಿಗಳು ಹೇಳಿಲ್ಲ. ಈ ರೈಲಿನ ಕಿಟಕಿಗಳು ಒಡೆದಿವೆ, ಸೀಟು ಹರಿದಿವೆ, ಶೌಚಾಲಯದ ವ್ಯವಸ್ಥೆ ಸರಿಯಿಲ್ಲ. ದೇಶದ ಸಾಮಾನ್ಯ ಜನರು, ಯೋಧರು, ಯೋಧರ ಕುಟುಂಬದವರು ಪ್ರಯಾಣಿಸುವ ಇಂಥ ರೈಲ್ವೆ ವ್ಯವಸ್ಥೆ ಇಷ್ಟು ಕೆಟ್ಟರೆ ಹೇಗೆ?” ಎಂದು ಚಾವ್ಲಾ ಪ್ರಶ್ನಿಸಿದ್ದಾರೆ.

“ರೈಲಿನಲ್ಲಿ ಮಕ್ಕಳಿಗೆ, ಮಹಿಳೆಯರಿಗೆ, ವೃದ್ಧರಿಗೆ ಆರೋಗ್ಯದ ಸಮಸ್ಯೆಯಾದರೆ ತುರ್ತು ಸಂಖ್ಯೆಗಳಿಗೆ ಕರೆ ಮಾಡಿದರೆ ವೈದ್ಯಕೀಯ ಸೇವೆ ಸಿಗುತ್ತದೆ ಎಂದು ಜಾಹೀರಾತುಗಳಲ್ಲಿ ಹೇಳಲಾಗುತ್ತಿದೆ. ಆದರೆ, ತುರ್ತು ಸಂಖ್ಯೆಗಳೆಂದು ಹೇಳಿರುವ ಯಾವ ಸಂಖ್ಯೆಗೆ ಕರೆ ಮಾಡಿದರೂ ಅವು ಸಂಪರ್ಕಕ್ಕೆ ಸಿಗುತ್ತಿಲ್ಲ. ಅಚ್ಚೇ ದಿನ್‌ ಏನಾಗಿದೆ? ದೇಶದಲ್ಲಿ ಓದಿರುವ ಯುವಜನರಿಗೆ ಸೂಕ್ತ ಕೆಲಸಗಳಿಲ್ಲ. ಬಡಜನರಿಗೆ ಯಾವ ಸೌಲಭ್ಯಗಳೂ ಸಿಗುತ್ತಿಲ್ಲ. ನೀವು ಹೇಳಿದ ಅಚ್ಚೇ ದಿನ್‌ ಜನ ಸಾಮಾನ್ಯರಿಗೆ ಸಿಕ್ಕಿಲ್ಲ” ಎಂದು ಚಾವ್ಲಾ ಬೇಸರ ವ್ಯಕ್ತಪಡಿಸಿದ್ದಾರೆ.