samachara
www.samachara.com
‘ಪಾರ್ಕ್‌ಗಳಲ್ಲಿ ನಮಾಜ್‌ ಮಾಡುವಂತಿಲ್ಲ’; ನೊಯಿಡಾ ಕಂಪನಿಗಳಿಗೆ ಯುಪಿ ಪೊಲೀಸರ ನೊಟೀಸ್‌
ಸುದ್ದಿ ಸಾರ

‘ಪಾರ್ಕ್‌ಗಳಲ್ಲಿ ನಮಾಜ್‌ ಮಾಡುವಂತಿಲ್ಲ’; ನೊಯಿಡಾ ಕಂಪನಿಗಳಿಗೆ ಯುಪಿ ಪೊಲೀಸರ ನೊಟೀಸ್‌

ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಮಾಡದಂತೆ ತಮ್ಮ ಮುಸ್ಲಿಂ ಉದ್ಯೋಗಿಗಳಿಗೆ ಸೂಚಿಸುವಂತೆ ನೊಯಿಡಾ ಪೊಲೀಸರು ನೊಯಿಡಾ ಸೆಕ್ಟರ್‌ 58ರ ವ್ಯಾಪ್ತಿಯಲ್ಲಿರುವ ಕಂಪನಿಗಳಿಗೆ ನೊಟೀಸ್‌ ನೀಡಿದ್ದಾರೆ.

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರಕಾರದ ಪೊಲೀಸ್‌ ಇಲಾಖೆ ನೊಯಿಡಾದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನೊಟೀಸ್‌ ಒಂದನ್ನು ಜಾರಿ ಮಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಮಾಡದಂತೆ ತಮ್ಮ ಮುಸ್ಲಿಂ ಉದ್ಯೋಗಿಗಳಿಗೆ ಸೂಚಿಸುವಂತೆ ನೊಯಿಡಾ ಪೊಲೀಸರು ನೊಯಿಡಾ ಸೆಕ್ಟರ್‌ 58ರ ವ್ಯಾಪ್ತಿಯಲ್ಲಿರುವ ಕಂಪನಿಗಳಿಗೆ ನೊಟೀಸ್‌ ನೀಡಿದ್ದಾರೆ.

ಸಾರ್ವಜನಿಕ ಉದ್ಯಾನವನ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಉದ್ಯೋಗಿಗಳು ಶುಕ್ರವಾರದ ಪ್ರಾರ್ಥನೆ ಸಲ್ಲಿಸುವುದನ್ನು ಕಂಪೆನಿಗಳು ನಿಯಂತ್ರಿಸಬೇಕು. ಉದ್ಯೋಗಿಗಳು ನಿಯಮ ಉಲ್ಲಂಘಿಸಿದರೆ ಅದಕ್ಕೆ ಕಂಪನಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನೊಯಿಡಾ ಪೊಲೀಸರು ಸೆಕ್ಟರ್‌ 58ರ ಕಂಪೆನಿಗಳಿಗೆ ನೊಟೀಸ್‌ ನೀಡಿದ್ದಾರೆ.

ಆದರೆ, ನೊಯಿಡಾ ಪೊಲೀಸರ ಈ ನೊಟೀಸ್‌ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಲು ನಿರ್ಧರಿಸಿರುವ ಸೆಕ್ಟರ್‌ 58ರ ಕಂಪನಿಗಳು, ಈ ನೊಟೀಸ್‌ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಚಿಂತನೆ ನಡೆಸಿವೆ.

“ಸಾರ್ವಜನಿಕ ಸ್ಥಳವಾದ ಉದ್ಯಾನಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವುದರಿಂದ ಇತರೆ ಸಮುದಾಯಗಳ ಭಾವನೆಗೆ ಧಕ್ಕೆಯಾಗುತ್ತದೆ” ಎಂದು ಹಿಂದೂಪರ ಸಂಘಟನೆಗಳು ನೊಯಿಡಾ ವಿಶೇಷ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ನೊಯಿಡಾ ಪೊಲೀಸರು ಇಂಥದ್ದೊಂದು ನೊಟೀಸ್‌ ಹೊರಡಿಸಿದ್ದಾರೆ.

ಈ ನೊಟೀಸ್‌ ವಿವಾದ ಸೃಷ್ಟಿಸುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ನೊಯಿಡಾ ವಿಶೇಷ ಪೊಲೀಸ್‌ ವರಿಷ್ಠಾಧಿಕಾರಿ ಅಜಯ್‌ ಪಾಲ್‌, ಯಾವುದೇ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಈ ನೊಟೀಸ್‌ ಹೊರಡಿಸಿಲ್ಲ ಎಂದಿದ್ದಾರೆ.

ಈ ಸೂಚನೆ ಉಲ್ಲಂಘಿಸಿದ ಆರೋಪದ ಮೇಲೆ ಡಿಸೆಂಬರ್‌ 14ರಂದು ಸೆಕ್ಟರ್‌ 58ರ ಸಾರ್ವಜನಿಕ ಉದ್ಯಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಕಾರಣಕ್ಕೆ ಡಿಸೆಂಬರ್‌ 18ರಂದು ನಾಲ್ಕು ಮಂದಿ ಮುಸ್ಲಿಮರನ್ನು ಪೊಲೀಸರು ಬಂದಿಸಿದ್ದರು.

“ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಆ ಜಾಗವನ್ನು ಮಸೀದಿಗಾಗಿ ಕಬಳಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ” ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಕೂಡಾ ಹಿಂದೂ ಸಂಘಟನೆಗಳ ಬೆನ್ನಿಗೆ ನಿಂತಿದ್ದು, “ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಮಾಡುವುದು ಸರಿಯಲ್ಲ. ಪ್ರಾರ್ಥನೆ ಸಲ್ಲಿಸಲು ಸ್ಥಳದ ಕೊರತೆ ಇದ್ದರೆ ಅವರು ಮನೆಗಳೊಳಗೆ ಪ್ರಾರ್ಥನೆ ಮಾಡಬೇಕು” ಎಂದಿದ್ದಾರೆ.

ನೊಯಿಡಾ ಪೊಲೀಸರ ನಡೆಯ ಬೆನ್ನಲ್ಲೇ ಸಾರ್ವಜನಿಕ ಸ್ಥಳಗಳಲ್ಲಿನ ಅನಧಿಕೃತ ಗುಡಿಗಳ ತೆರವಿನ ವಿಚಾರವೂ ಮುನ್ನೆಲೆಗೆ ಬಂದಿದೆ. ಸಾರ್ವಜನಿಕ ಉದ್ಯಾನಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿರುವ ಅನಧಿಕೃತ ಗುಡಿಗಳನ್ನು ತೆರವುಗೊಳಿಸುವ ಬಗ್ಗೆ ಸುಪ್ರೀಂಕೋರ್ಟ್‌ ಸುಮಾರು ಒಂದು ದಶಕದ ಹಿಂದೆ ನೀಡಿರುವ ಆದೇಶ ಪಾಲನೆಗೂ ಪೊಲೀಸರು ಇದೇ ಹುಮ್ಮಸ್ಸಿನಲ್ಲಿ ಮುಂದಾಗಲಿದ್ದಾರೆ ಎಂಬ ಪ್ರಶ್ನೆಗಳೂ ಎದ್ದಿವೆ.