ವಿದೇಶ ಯಾತ್ರೆ: ಮೋದಿ ಪ್ರವಾಸಕ್ಕೆ 2,021 ಕೋಟಿ, 74 ಸಚಿವರ ಪ್ರವಾಸಕ್ಕೆ ಕೇವಲ 239 ಕೋಟಿ!
ಸುದ್ದಿ ಸಾರ

ವಿದೇಶ ಯಾತ್ರೆ: ಮೋದಿ ಪ್ರವಾಸಕ್ಕೆ 2,021 ಕೋಟಿ, 74 ಸಚಿವರ ಪ್ರವಾಸಕ್ಕೆ ಕೇವಲ 239 ಕೋಟಿ!

ಮೋದಿ ಸಂಪುಟದ ಸಚಿವರ ಪ್ರವಾಸ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಪರಿಣಾಮ ಖರ್ಚು ಕೂಡ ಕಡಿಮೆಯಾಗುತ್ತಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸಕ್ಕೆ ಖರ್ಚು ಮಾಡಿದ ಹಣದ ಲೆಕ್ಕ ಕೇಳಿ ಹಲವರು ಹುಬ್ಬೇರಿಸಿದ್ದರು. ಏಕಾಂಗಿಯಾಗಿ ಅವರೊಬ್ಬರೇ ನಾಲ್ಕು ವರ್ಷಗಳಲ್ಲಿ ವಿದೇಶ ಪ್ರವಾಸಕ್ಕೆ ಬರೋಬ್ಬರಿ 2,021 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರು. ಆದರೆ ಇದೇ ಅವಧಿಯಲ್ಲಿ ಅವರ ಸಂಪುಟದ 74 ಸಚಿವರು ಒಟ್ಟಾಗಿ ವಿದೇಶ ಪ್ರವಾಸಕ್ಕೆ ಖರ್ಚು ಮಾಡಿರುವ ಹಣ ಕೇವಲ 239 ಕೋಟಿ ರೂಪಾಯಿ!

ವಿಶೇಷ ಅಂದರೆ ಮೋದಿ ಸಂಪುಟದ ಸಚಿವರ ಪ್ರವಾಸ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಪರಿಣಾಮ ಖರ್ಚು ಕೂಡ ಕಡಿಮೆಯಾಗುತ್ತಿದೆ. ಹೀಗೊಂದು ಮಾಹಿತಿಯನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ ಆರ್‌ಟಿಐ ಮೂಲಕ ಪಡೆದುಕೊಂಡಿದೆ.

ಆರ್‌ಟಿಐ ಪ್ರಶ್ನೆಗೆ ಉತ್ತರ ನೀಡಿರುವ ಪಾವತಿ ಮತ್ತು ಲೆಕ್ಕಪತ್ರ ಇಲಾಖೆ, ನಾಲ್ಕು ವರ್ಷಗಳಲ್ಲಿ 25 ಕ್ಯಾಬಿನೆಟ್‌ ದರ್ಜೆ ಸಚಿವರು 225.30 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಇದೇ ಅವಧಿಯಲ್ಲಿ 49 ಜನ (ಕೆಲವರ ನಿಧನ ಮತ್ತು ರಾಜೀನಾಮೆಯಿಂದ ಸಂಖ್ಯೆಗಳಲ್ಲಿ ಸ್ಪಲ್ಪ ಏರುಪೇರಾಗಿರಬಹುದು) ರಾಜ್ಯ ದರ್ಜೆ ಸಚಿವರು 13.75 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂಬ ವಿವರ ನೀಡಿದೆ. ಏಪ್ರಿಲ್‌ 1 2014ರಿಂದ ಮಾರ್ಚ್‌ 20, 2018ರ ನಡುವಿನ ಸಚಿವರ ಪ್ರವಾಸದ ವೆಚ್ಚಗಳು ಇವಾಗಿವೆ.

ವಿದೇಶ ಯಾತ್ರೆ: ಮೋದಿ ಪ್ರವಾಸಕ್ಕೆ 2,021 ಕೋಟಿ, 74 ಸಚಿವರ ಪ್ರವಾಸಕ್ಕೆ ಕೇವಲ 239 ಕೋಟಿ!

ಅಂಕಿ ಅಂಶಗಳ ಮೇಲೆ ಕಣ್ಣಾಡಿಸಿದಾಗ 2014-15ರಲ್ಲಿ ಸಂಪುಟ ದರ್ಜೆ ಸಚಿವರು 88.48 ಕೋಟಿ ರೂಪಾಯಿಗಳನ್ನು ವಿದೇಶ ಪ್ರವಾಸಕ್ಕೆ ಖರ್ಚು ಮಾಡಿದ್ದರೆ 2017-18ರಲ್ಲಿ ಈ ಪ್ರಮಾಣ 23.85 ಕೋಟಿ ರೂಪಾಯಿಗೆ ಇಳಿದಿದೆ. ಅಂದರೆ ಸುಮಾರು ನಾಲ್ಕು ಪಟ್ಟು ಖರ್ಚು ಕಡಿತಗೊಂಡಿದೆ. ಇಷ್ಟೇ ಪ್ರಮಾಣದಲ್ಲಿ ವಿದೇಶ ಪ್ರವಾಸಗಳೂ ಕಡಿಮೆಯಾಗಿರುತ್ತವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಇದೇ ಅವಧಿಯಲ್ಲಿ ಮೋದಿ ಮಾತ್ರ ಭರ್ಜರಿ ವಿದೇಶ ಪ್ರವಾಸಗಳನ್ನು ನಡೆಸಿದ್ದಾರೆ. ಇಲ್ಲಿಯವರೆಗೆ ಅವರು 48 ವಿದೇಶ ಪ್ರವಾಗಳನ್ನು ಕೈಗೊಂಡಿದ್ದು ಇದಕ್ಕಾಗಿ 2,025.58 ಕೋಟಿ ರೂಪಾಯಿಗಳ ವೆಚ್ಚವಾಗಿದೆ ಎಂದು ಡಿಸೆಂಬರ್‌ 13ರಂದು ರಾಜ್ಯಸಭೆಯಲ್ಲಿ ವಿದೇಶಾಂಗ ಖಾತೆ ರಾಜ್ಯ ದರ್ಜೆ ಸಚಿವ ವಿ.ಕೆ. ಸಿಂಗ್‌ ಮಾಹಿತಿ ನೀಡಿದ್ದಾರೆ. ಪ್ರಧಾನಿಗಳ ಪ್ರವಾಸ ವೆಚ್ಚದಲ್ಲಿ ವಿಮಾನಗಳ ನಿರ್ವಹಣೆ, ಚಾರ್ಟರ್ಡ್‌ ವಿಮಾನಗಳು ಮತ್ತು ಹಾಟ್‌ಲೈನ್‌ ಬಳಕೆಯೂ ಸೇರಿದೆ ಎಂದು ಅವರು ವಿವರಿಸಿದ್ದರು.

ಈಗಾಗಲೇ ಮೋದಿ ಸರಕಾರ ‘ಒನ್‌ ಮ್ಯಾನ್‌ ಆರ್ಮಿ’ ಸರಕಾರ ಎಂಬ ಆರೋಪಕ್ಕೆ ಹಲವು ಬಾರಿ ಗುರಿಯಾಗಿದೆ. ಇದಕ್ಕೆ ಕನ್ನಡಿ ಹಿಡಿಯುವಂತೆ ಪ್ರಧಾನಿಯೊಬ್ಬರೇ ಪದೇ ಪದೇ ವಿದೇಶ ಪ್ರವಾಸಗಳನ್ನು ನಡೆಸುತ್ತಿದ್ದರೆ, ಉಳಿದ ಸಚಿವರು ಕಡಿಮೆ ವಿದೇಶ ಪ್ರವಾಸಗಳನ್ನು ನಡೆಸಿರುವುದು ಬೆಳಕಿಗೆ ಬಂದಿದೆ.