ಎನ್‌ಡಿಎ ಬಿಹಾರ ಸೀಟು ಹಂಚಿಕೆ; 22ರ ಬದಲಿಗೆ 17 ಕ್ಷೇತ್ರಗಳಲ್ಲಷ್ಟೇ ಬಿಜೆಪಿ ಸ್ಪರ್ಧೆ!
ಸುದ್ದಿ ಸಾರ

ಎನ್‌ಡಿಎ ಬಿಹಾರ ಸೀಟು ಹಂಚಿಕೆ; 22ರ ಬದಲಿಗೆ 17 ಕ್ಷೇತ್ರಗಳಲ್ಲಷ್ಟೇ ಬಿಜೆಪಿ ಸ್ಪರ್ಧೆ!

ಬಿಹಾರದಲ್ಲಿ ಜೆಡಿಯು, ಎಲ್‌ಜೆಪಿ ಮೈತ್ರಿಯೊಂದಿಗೆ ಚುನಾವಣೆ ಎದುರಿಸಲು ಮುಂದಾಗಿರುವ ಬಿಜೆಪಿ ಈಗಿರುವ 22 ಸ್ಥಾನಗಳ ಬದಲಿಗೆ 17 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲು ನಿರ್ಧರಿಸಿದೆ.

2019ರ ಲೋಕಸಭಾ ಚುನಾವಣೆಗೆ ಎನ್‌ಡಿಎ ಮಿತ್ರಪಕ್ಷಗಳು ಬಿಹಾರದಲ್ಲಿ ಸೀಟು ಹಂಚಿಕೆ ಮಾಡಿಕೊಂಡಿಕೊಂಡಿವೆ. ಬಿಜೆಪಿ 17, ಜೆಡಿಯು 17 ಮತ್ತು ಎಲ್‌ಜೆಪಿ 6 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅಂತಿಮ ತೀರ್ಮಾನಕ್ಕೆ ಬಂದಿವೆ.

2014ರ ಲೋಕಸಭಾ ಚುನಾವಣೆಯಲ್ಲಿ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 22 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಈ ಬಾರಿ ಹಿಂದಿನ ಚುನಾವಣೆಗಿಂತ ಸುಮಾರು ಅರ್ಧದಷ್ಟು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆಗಿಳಿಯಲು ಮುಂದಾಗಿರುವ ಬಿಜೆಪಿ ಜೆಡಿಯು, ಎಲ್‌ಜೆಪಿ ಜತೆಗೆ ಮೈತ್ರಿ ಮುಂದುವರಿಸಿದೆ.

ಬಿಹಾರ ಸೀಟು ಹಂಚಿಕೆ ನಿರ್ಧಾರವನ್ನು ಬಿಜೆಪಿ, ಜೆಡಿಯು ಮತ್ತು ಎಲ್‌ಜೆಪಿ ಪಕ್ಷಗಳ ಮುಖಂಡರು ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಜೆಡಿಯು ನಾಯಕ ನಿತೀಶ್‌ ಕುಮಾರ್‌, ಎಲ್‌ಜೆಪಿ ನಾಯಕ ರಾಮ್‌ ವಿಲಾಸ್‌ ಪಾಸ್ವಾನ್‌ ಮತ್ತು ಅವರ ಪುತ್ರ ಚಿರಾಗ್‌ ಪಾಸ್ವಾನ್‌ ದೆಹಲಿಯಲ್ಲಿ ಸಭೆ ನಡೆಸಿ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದಾರೆ.

“ಬಿಜೆಪಿ ಸೀಟು ಹಂಚಿಕೆ ವಿಚಾರವನ್ನು ಅಂತಿಮಗೊಳಿಸದಿದ್ದರೆ ಎಲ್‌ಜೆಪಿ ಬಿಹಾರದಲ್ಲಿ ಸ್ವತಂತ್ರವಾಗಿ ಚುನಾವಣೆ ಎದುರಿಸಲು ಸಿದ್ಧವಿದೆ” ಎಂದು ಚಿರಾಗ್‌ ಪಾಸ್ವಾನ್‌ ಕಳೆದ ವಾರ ಹೇಳಿದ್ದರು. ಆದರೆ, ಅಮಿತ್‌ ಶಾ ಜತೆಗಿನ ಸಭೆಯ ಬಳಿಕ ಮಾತನಾಡಿರುವ ರಾಮ್‌ ವಿಲಾಸ್‌ ಪಾಸ್ವಾನ್‌, “ಮೈತ್ರಿ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವು ಒಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆ” ಎಂದಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಪ್ರಭಾವ ತಗ್ಗಿದೆ ಎಂದಿರುವ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌, “ಬಿಹಾರದಲ್ಲಿ 22 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ 17ರಲ್ಲಿ ಮಾತ್ರ ಸ್ಪರ್ಧಿಸಲು ಮುಂದಾಗಿದೆ. 2 ಸ್ಥಾನಗಳಲ್ಲಿ ಗೆದ್ದಿರುವ ಜೆಡಿಯು 17 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಎನ್‌ಡಿಎ ಸ್ಥಿತಿ ಎಲ್ಲಿಗೆ ಬಂದಿದೆ ಎಂಬುದು ಇದರಿಂದಲೇ ಅರ್ಥವಾಗುತ್ತದೆ” ಎಂದು ಟ್ವೀಟ್‌ ಮಾಡಿದ್ದಾರೆ.