samachara
www.samachara.com
ಇಂಡೋನೇಷ್ಯಾ ಸುನಾಮಿ: ಮೃತರ ಸಂಖ್ಯೆ 222ಕ್ಕೆ ಏರಿಕೆ, ನೂರಾರು ಮಂದಿ ಕಣ್ಮರೆ
ಸುದ್ದಿ ಸಾರ

ಇಂಡೋನೇಷ್ಯಾ ಸುನಾಮಿ: ಮೃತರ ಸಂಖ್ಯೆ 222ಕ್ಕೆ ಏರಿಕೆ, ನೂರಾರು ಮಂದಿ ಕಣ್ಮರೆ

ಇಂಡೋನೇಷ್ಯಾದಲ್ಲಿ ಮತ್ತೆ ಸುನಾಮಿ ತನ್ನ ರೌದ್ರಾವತಾರ ತೋರಿದೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 222ಕ್ಕೆ ಏರಿದೆ.

ಜ್ವಾಲಾಮುಖಿಯಿಂದ ಉಂಟಾದ ಸುನಾಮಿಗೆ ಇಂಡೋನೇಷ್ಯಾದಲ್ಲಿ ಮೃತಪಟ್ಟವರ ಸಂಖ್ಯೆ 222ಕ್ಕೇರಿದೆ. 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ನೂರಾರು ಜನರು ಕಣ್ಮರೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಕ್ರಾಕಟೊ ಜ್ವಾಲಾಮುಖಿಯಿಂದ ರೂಪುಗೊಂಡಿರುವ ಅನ್ಕಾ ಕ್ರಾಕಟೊ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟವಾಗಿ ಶನಿವಾರ ರಾತ್ರಿ ಸುನಾಮಿ ಉಂಟಾಗಿದೆ. ಜ್ವಾಲಾಮುಖಿ ಸ್ಫೋಟದಿಂದ ಸಮುದ್ರದೊಳಗಿನ ಭೂಫಲಕಗಳು ಕುಸಿದದ್ದೇ ಸುನಾಮಿಗೆ ಕಾರಣ ಎನ್ನಲಾಗಿದೆ.

ಅಲ್ಲದೆ, ಶನಿವಾರ ಹುಣ್ಣಿಮೆ ಇದ್ದಿದ್ದರಿಂದ ಸಮುದ್ರದ ಉಬ್ಬರವೂ ಜೋರಾಗಿತ್ತು. ಸುನಾಮಿ ತೀವ್ರತೆ ಹೆಚ್ಚಲು ಸಮುದ್ರದ ಉಬ್ಬರವೂ ಕಾರಣ ಎಂದು ಇಂಡೋನೇಷ್ಯಾದ ಹವಾಮಾನ ಇಲಾಖೆ ತಿಳಿಸಿದೆ.

ಅವಶೇಷಗಳನ್ನು ತೆಗೆಯುತ್ತಿದ್ದಂತೆ ಅವುಗಳಡಿ ಮೃತ ದೇಹಗಳು ಪತ್ತೆಯಾಗುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಇಂಡೋನೇಷ್ಯಾದಲ್ಲಿ 2004ರ ಡಿಸೆಂಬರ್‌ ತಿಂಗಳಲ್ಲಿ ಸಂಭವಿಸಿದ್ದ ಸುನಾಮಿಯಿಂದ ಎರಡೂವರೆ ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಆಗ ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಿದ್ದ ಸುನಾಮಿಯಿಂದಾಗಿ ಭಾರತದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.