ಆನ್‌ಲೈನ್‌ ಮೀಡಿಯಾದ ಮೆಘಾ ಡೀಲ್‌: ಟಬೂಲ ಜಾಹೀರಾತಿಗೆ 300 ಕೋಟಿ  ರೂ. ಕೇಳಿದ ಎನ್‌ಡಿಟಿವಿ!
ಸುದ್ದಿ ಸಾರ

ಆನ್‌ಲೈನ್‌ ಮೀಡಿಯಾದ ಮೆಘಾ ಡೀಲ್‌: ಟಬೂಲ ಜಾಹೀರಾತಿಗೆ 300 ಕೋಟಿ ರೂ. ಕೇಳಿದ ಎನ್‌ಡಿಟಿವಿ!

ಎನ್‌ಡಿಟಿವಿ ಸಮೂಹದ ‘ಎನ್‌ಡಿಟಿವಿ ಕನ್ವರ್ಜೆನ್ಸ್‌’ ಸಂಸ್ಥೆ ‘ಟಬೂಲ’ ಸಂಸ್ಥೆ ಜತೆ ಐದು ವರ್ಷಗಳ ಅವಧಿಗೆ ಬರೋಬ್ಬರಿ 300 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ಭಾರತದಲ್ಲಿ ಆನ್‌ಲೈನ್‌ ಸುದ್ದಿ ಮಾಧ್ಯಮಗಳು ಬೆಳೆಯುತ್ತಿರುವ ವೇಗಕ್ಕೆ ತನ್ನ ಹೊಸ ಡೀಲ್‌ ಮೂಲಕ ಎನ್‌ಡಿವಿಟಿ ಸಾಕ್ಷಿ ಒದಗಿಸಿದೆ. ಭಾರತದ ಅಗ್ರಗಣ್ಯ ಸುದ್ದಿ ಜಾಲತಾಣವಾದ ಎನ್‌ಡಿಟಿವಿ ಡಾಟ್‌ ಕಾಂ ಮತ್ತಿತರ ವೆಬ್‌ಸೈಟ್‌ಗಳನ್ನು ನಿರ್ವಹಿಸುವ ಎನ್‌ಡಿಟಿವಿ ಸಮೂಹದ ‘ಎನ್‌ಡಿಟಿವಿ ಕನ್ವರ್ಜೆನ್ಸ್‌’ ಸಂಸ್ಥೆ ‘ಟಬೂಲ’ ಸಂಸ್ಥೆ ಜತೆ ಐದು ವರ್ಷಗಳ ಅವಧಿಗೆ ಬರೋಬ್ಬರಿ 300 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ಟಬೂಲ ವೈಯಕ್ತಿಕ ಆಸಕ್ತಿಗಳ ಮೇಲೆ ಇತರ ವೆಬ್‌ಸೈಟ್‌ಗಳ ಸುದ್ದಿಗಳು ಮತ್ತು ಜಾಹೀರಾತುಗಳನ್ನು ಬಳಕೆದಾರರಿಗೆ ನೀಡುವ ಸಂಸ್ಥೆಯಾಗಿದ್ದು ಎನ್‌ಡಿಟಿವಿ ಜತೆ ದೊಡ್ಡ ಮೊತ್ತದ ಡೀಲ್‌ ಕುದುರಿಸಿದೆ. ಇದು ಏಷ್ಯಾ ಪೆಸಿಫಿಕ್‌ ಭಾಗದ ಆನ್‌ಲೈನ್‌ ಸುದ್ದಿ ಜಗತ್ತಿನಲ್ಲಿ ನಡೆದ ಬೃಹತ್ ಮೊತ್ತದ ಒಪ್ಪಂದ ಎಂದು ಎನ್‌ಡಿಟಿವಿ ಹೇಳಿಕೊಂಡಿದೆ.

ಒಪ್ಪಂದದ ಪ್ರಕಾರ ಟಬೂಲ ಐದು ವರ್ಷಗಳ ಅವಧಿಗೆ ಜಾಹೀರಾತು ಮತ್ತು ಸುದ್ದಿಗಳನ್ನು ಎನ್‌ಡಿಟಿವಿಯ ವೆಬ್‌ಸೈಟ್‌ಗಳ ಮೂಲಕ ಪ್ರಸಾರ ಮಾಡಲಿದೆ. ಈ ಹಿಂದೆ ಮೂರು ವರ್ಷಗಳ ಅವಧಿಗೆ ಟಬೂಲ ಜತೆ ಎನ್‌ಡಿಟಿವಿ 100 ಕೋಟಿ ರೂಪಾಯಿಗಳ ಒಪ್ಪಂದವನ್ನು 2015ರಲ್ಲಿ ಮಾಡಿಕೊಂಡಿತ್ತು. ಇದೀಗ ಮುಂದಿನ ಐದು ವರ್ಷಗಳ ಅವಧಿಗೆ ಕನಿಷ್ಠ 300 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದೆ.

“ಈ ಒಪ್ಪಂದದೊಂದಿಗೆ ಆನ್‌ಲೈನ್‌ ಜಗತ್ತಿನಲ್ಲಿ ಎನ್‌ಡಿಟಿವಿಗೆ ಸರಿಸಾಟಿ ಯಾರೂ ಇಲ್ಲದಾಗಿದೆ ಮತ್ತು ಜಾಗತಿಕ ಮಟ್ಟದ ಕಂಪನಿಗಳ ಜತೆ ಸಂಸ್ಥೆ ಕೈಜೋಡಿಸುತ್ತಿದೆ,” ಎಂದು ಸಂಸ್ಥೆಯ ಸಿಇಒ ಸುಪರ್ಣ ಸಿಂಗ್‌ ಹೇಳಿದ್ದಾರೆ. ಡೀಲ್‌ ಬೆನ್ನಿಗೆ ಮುಂಬೈ ಶೇರು ಮಾರುಕಟ್ಟೆಯಲ್ಲಿ ಎನ್‌ಡಿಟಿವಿಯ ಶೇರು ಮೌಲ್ಯ ಶುಕ್ರವಾರ ಶೇಕಡಾ 10ರಷ್ಟು ಏರಿಕೆಯೂ ಕಂಡಿದೆ.

ಇವತ್ತಿಗೆ ಎನ್‌ಡಿಟಿವಿ ತಿಂಗಳಿಗೆ 20 ಕೋಟಿ ಓದುಗರನ್ನು ತಲುಪುತ್ತಿದ್ದು, ಭಾರತದಲ್ಲಿ ಅತೀ ಹೆಚ್ಚಿನ ಓದುಗರನ್ನು ಹೊಂದಿರುವ ನ್ಯೂಸ್‌ ವೆಬ್‌ಸೈಟ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಳಕೆದಾರರ ವಿಚಾರಕ್ಕೆ ಬಂದಾಗ ಜಾಗತಿಕವಾಗಿ ಎನ್‌ಡಿಟಿವಿ 23ನೇ ಸ್ಥಾನ ಪಡೆದಿದ್ದು ವಾಷಿಂಗ್ಟನ್‌ ಪೋಸ್ಟ್‌, ಹಫಿಂಗ್ಟನ್‌ ಪೋಸ್ಟ್‌ ಮೊದಲಾದ ಜಾಗತಿಕ ಸಂಸ್ಥೆಗಳಿಗಿಂತ ಮೇಲಿನ ಸ್ಥಾನದಲ್ಲಿದೆ.

“ಭಾರತದಲ್ಲಿ ಮೊಬೈಲ್‌ ಇಂಟರ್‌ನೆಟ್‌ ಬಳಕೆ ರಾಕೆಟ್‌ ವೇಗದಲ್ಲಿ ಮೇಲೇರುತ್ತಿದೆ. ಇವತ್ತಿಗೆ ಭಾರತದಲ್ಲಿ 50 ಕೋಟಿಗಿಂತ ಹೆಚ್ಚು ಜನರು ಮೊಬೈಲ್‌ ಇಂಟರ್‌ನೆಟ್‌ ಬಳಸುತ್ತಿದ್ದು ಚೀನಾಕ್ಕಿಂತ ನಂತರದ ಸ್ಥಾನದಲ್ಲಿದೆ. ಮೊಬೈಲ್‌ ಬಳಕೆದಾರರು ಮುಂದೇನು ಎಂದು ನೋಡುತ್ತಿರುತ್ತಾರೆ. ಅಂಥವರಿಗೆ ಎನ್‌ಡಿಟಿವಿಯಂಥ ಜಾಲತಾಣಗಳಿಂದ ವೈಯಕ್ತಿಕ ಆಸಕ್ತಿಯ ವಿಷಯಗಳನ್ನು ನೀಡಲು ಸಹಾಯವಾಗುತ್ತದೆ,” ಎಂದು ಟಬೂಲ ಸಂಸ್ಥಾಪಕ ಮತ್ತು ಸಿಇಒ ಆಡಂ ಸಿಂಗೊಲ್ಡ ತಿಳಿಸಿದ್ದಾರೆ.

ಒಂದು ಕಾಲದಲ್ಲಿ ಭಾರತದ ಮುದ್ರಣ ಮಾಧ್ಯಮ, ನಂತರದ ದಿನಗಳಲ್ಲಿ ಟಿವಿ ಮಾಧ್ಯಮ ನೂರಾರು ಕೋಟಿ ರೂಪಾಯಿಗಳ ಹೂಡಿಕೆ, ಡೀಲ್‌ಗಳನ್ನು ಕಾಣುವ ದಿನಗಳಿದ್ದವು. ಇವತ್ತು ಆ ಸ್ಥಾನಕ್ಕೆ ಆನ್‌ಲೈನ್‌ ಮಾಧ್ಯಮಗಳೂ ಬಂದು ನಿಂತಿವೆ ಎಂಬುದಕ್ಕೆ ಎನ್‌ಡಿಟಿವಿಯ ಈ ಡೀಲ್‌ ಉದಾಹರಣೆಯಾಗಿ ನಿಂತಿದೆ.