ಬುದ್ಧ, ಬಸವ, ಅಂಬೇಡ್ಕರ್‌, ದೇವರ ಹೆಸರಿನಲ್ಲಿ 8 ಮಂದಿ ಸಚಿವರ ಪ್ರಮಾಣ ವಚನ
ಸುದ್ದಿ ಸಾರ

ಬುದ್ಧ, ಬಸವ, ಅಂಬೇಡ್ಕರ್‌, ದೇವರ ಹೆಸರಿನಲ್ಲಿ 8 ಮಂದಿ ಸಚಿವರ ಪ್ರಮಾಣ ವಚನ

ರಾಜಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ 8 ಮಂದಿ ಕಾಂಗ್ರೆಸ್‌ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಎಚ್‌.ಡಿ. ಕುಮಾರಸ್ವಾಮಿ ಸಂಪುಟದ ನೂತನ ಸಚಿವರಾಗಿ ಕಾಂಗ್ರೆಸ್‌ನ 8 ಮಂದಿ ಶನಿವಾರ ಸಂಜೆ 5.20ಕ್ಕೆ ರಾಜಭವನದ ಗಾಜಿನಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಪಾಲ ವಜುಬಾಯ್‌ ವಾಲಾ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಎಂ.ಬಿ. ಪಾಟೀಲ್‌, ಆರ್‌.ಬಿ. ತಿಮ್ಮಾಪುರ, ಇ. ತುಕಾರಾಂ ದೇವರ ಹೆಸರಿನಲ್ಲಿ ಪ್ರತಿಜ್ಞೆ ಮಾಡಿದರು.

ಸತೀಶ್‌ ಜಾರಕಿಹೊಳಿ ಬುದ್ಧ, ಬಸವ, ಅಂಬೇಡ್ಕರ್‌ ಹೆಸರಿನಲ್ಲಿ, ಸಿ.ಎಸ್‌. ಶಿವಳ್ಳಿ ಈಶ್ವರನ ಹೆಸರಿನಲ್ಲಿ, ಪಿ.ಟಿ. ಪರಮೇಶ್ವರ್‌ ನಾಯ್ಕ್‌ ತುಳಜಾ ಭವಾನಿ ಹೆಸರಿನಲ್ಲಿ ಮತ್ತು ಎಂ.ಟಿ.ಬಿ. ನಾಗರಾಜ್‌ ಮಂಜುನಾಥಸ್ವಾಮಿ ಹೆಸರಿನಲ್ಲಿ ಹಾಗೂ ರಹಿಂ ಖಾನ್‌ ಅಲ್ಲಾ ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.

ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಹಲವರು ಅಸಮಾಧಾನ ಹೊರ ಹಾಕಿದ್ದಾರೆ. ಕೆಲವರು ನೇರವಾಗಿ ಹಾಗೂ ಕೆಲವರು ತಮ್ಮ ಬೆಂಬಲಿಗರ ಪ್ರತಿಭಟನೆಯ ಮೂಲಕ ಪಕ್ಷದ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ತಂದೆ ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಸೌಮ್ಯರೆಡ್ಡಿ ಹಾಗೂ ತಮಗೆ ಸಚಿವ ಸ್ಥಾನ ಕೊಡದ ಕಾರಣಕ್ಕೆ ಚಳ್ಳಕೆರೆ ಶಾಸಕ ರಘುಮೂರ್ತಿ ತಮಗೆ ಹಂಚಿಕೆಯಾಗಿದ್ದ ನಿಗಮ- ಮಂಡಳಿ ಸ್ಥಾನವನ್ನೂ ನಿರಾಕರಿಸಿದ್ದಾರೆ ಎನ್ನಲಾಗಿದೆ.