samachara
www.samachara.com
ನಿಲ್ಲದ ಪ್ರಯತ್ನ, ಚೆನ್ನೈನಿಂದ ಶಬರಿಮಲೆಯತ್ತ ಹೊರಟ 50 ಮಹಿಳೆಯರ ತಂಡ
ಸುದ್ದಿ ಸಾರ

ನಿಲ್ಲದ ಪ್ರಯತ್ನ, ಚೆನ್ನೈನಿಂದ ಶಬರಿಮಲೆಯತ್ತ ಹೊರಟ 50 ಮಹಿಳೆಯರ ತಂಡ

ಶಬರಿಮಲೆ ದೇವಾಲಯ ಪ್ರವೇಶಕ್ಕೆ ಚೆನ್ನೈನ ‘ಮನಿಥಿ’ ಸಂಘಟನೆಯ ಸದಸ್ಯರು ಮುಂದಾಗಿದ್ದಾರೆ. 50 ಮಹಿಳೆಯರು ಭಾನುವಾರ ದೇವಸ್ಥಾನ ಪ್ರವೇಶ ಮಾಡಲಿದ್ದಾರೆ ಎಂದು ಸಂಘಟನೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದೆ.

ಶಬರಿಮಲೆಯಲ್ಲಿ ‘ಮಂಡಲ ಪೂಜೆ’ಗೆ ಕೆಲವೇ ದಿನಗಳಿರುವಾಗ ಮಹಿಳೆಯರ ತಂಡವೊಂದು ಸುಪ್ರೀಂ ಕೋರ್ಟ್‌ ಆದೇಶವನ್ನು ಜಾರಿಗೊಳಿಸಲು ಮುಂದಾಗಿದೆ. ಇದಕ್ಕಾಗಿ ಚೆನ್ನೈನಲ್ಲಿ 50 ಜನ ಮಹಿಳೆಯರ ತಂಡ ಸಿದ್ಧಗೊಂಡಿದೆ.

ಸದ್ಯ ಶಬರಿಮಲೆ ದರ್ಶನದ ಮಾಸ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ದೇವರ ದರ್ಶನ ಮಾಡುತ್ತಿದ್ದಾರೆ. ಶುಕ್ರವಾರ 1,12,260 ಭಕ್ತರು ಶಬರಿಮಲೆಯಲ್ಲಿ ದರ್ಶನ ಪಡೆದಿದ್ದಾರೆ ಎಂದು ಟ್ರಾವಂಕೂರ್‌ ದೇವಸ್ವಂ ಬೋರ್ಡ್‌ ಹೇಳಿದೆ. ದೇವಾಲಯದಲ್ಲಿ ವಿಪರೀತ ಜನ ಸಂದಣಿ ಇದ್ದು ಇದರ ನಡುವೆಯೇ ದೇವಸ್ಥಾನ ಪ್ರವೇಶಕ್ಕೆ ಚೆನ್ನೈ ಮೂಲದ ಸಂಘಟನೆಯ ಮಹಿಳಾ ಸದಸ್ಯರು ಸಿದ್ಧವಾಗಿದ್ದಾರೆ.

ನಿರಂತರ ಅಹಿತಕರ ಘಟನೆಗಳ ನಂತರ ಶಬರಿಮಲೆಯಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದರು ಮತ್ತು ಹಲವು ನಿರ್ಬಂಧಗಳನ್ನು ಹೇರಿದ್ದರು. ಇವಿನ್ನೂ ಜಾರಿಯಲ್ಲಿದ್ದು ಇದರ ನಡುವೆಯೇ ದಾರಿ ಮಾಡಿಕೊಂಡು ದೇವಾಲಯ ಪ್ರವೇಶಕ್ಕೆ ಪಕ್ಕದ ಚೆನ್ನೈನ ‘ಮನಿಥಿ’ ಎಂಬ ಸಂಘಟನೆಯ ಸದಸ್ಯರು ಮುಂದಾಗಿದ್ದಾರೆ.

50 ಮಹಿಳೆಯರು ಭಾನುವಾರ ದೇವಸ್ಥಾನ ಪ್ರವೇಶ ಮಾಡಲಿದ್ದಾರೆ ಎಂದು ಸಂಘಟನೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದೆ. ಇವರಲ್ಲಿ ತಮಿಳುನಾಡು, ಮಧ್ಯ ಪ್ರದೇಶ, ಒಡಿಶಾ, ಕೇರಳ ಮತ್ತು ಕರ್ನಾಟಕ ರಾಜ್ಯದವರು ಸೇರಿದ್ದಾರೆ ಎಂದು ‘ಮನಿಥಿ’ ಸದಸ್ಯೆ ಸೆಲ್ವಿ ಮಲಯಾಳಂ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಬಿಗುವಿನ ವಾತಾವರಣದ ಮಧ್ಯೆಯೂ ಬೆಟ್ಟ ಏರಲು ಮಹಿಳೆಯರು ನಿರ್ಧರಿಸಿದ್ದು ಇವರು ಯಾವುದೇ ಪೊಲೀಸ್‌ ರಕ್ಷಣೆಯನ್ನು ಕೋರಿಲ್ಲ ಎಂದು ತಿಳಿದು ಬಂದಿದೆ. ಆದರೆ ಮಹಿಳೆಯರು ಭಾನುವಾರ ಅಯ್ಯಪ್ಪನ ದರ್ಶನ ಪಡೆಯಲಿದ್ದಾರೆ ಎಂದು ಪೊಲೀಸರು ಶನಿವಾರ ಖಚಿತಪಡಿಸಿದ್ದಾರೆ.

“ಮಾಹಿತಿಗಳ ಪ್ರಕಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮಹಿಳೆಯರು ಕೊಟ್ಟಾಯಂಗೆ ಬರಲಿದ್ದಾರೆ. ಆದರೆ ಯಾವುದೇ ವಿಶೇಷ ಭದ್ರತೆಗೆ ಅವರೇನೂ ಕೋರಿಕೆ ಸಲ್ಲಿಸಿಲ್ಲ. ಅವರು ಬೇಸ್‌ ಕ್ಯಾಂಪ್‌ ನಿಲಕ್ಕಲ್‌ ತಲುಪಿದ ನಂತರ ಏನಾದರೂ ಕಾನೂನು ಸುವ್ಯವಸ್ಥೆ ಸಮಸ್ಯೆಯಾದರೆ ನಾವು ಅದನ್ನು ನಿರ್ವಹಿಸಲಿದ್ದೇವೆ,” ಎಂದು ಪೊಲೀಸ್‌ ಅಧಿಕಾಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಶುಕ್ರವಾರ 43 ವರ್ಷದ ಆಂಧ್ರ ಪ್ರದೇಶ ಮೂಲದ ಮಹಿಳೆಯೊಬ್ಬರು ದೇವಸ್ಥಾನ ಪ್ರವೇಶಕ್ಕೆ ಇತರ ಭಕ್ತಾದಿಗಳ ಜತೆ ಆಗಮಿಸಿದ್ದರು. ಆದರೆ ಪೊಲಿಸರು ಭದ್ರತಾ ನೆಪವೊಡ್ಡಿ ಅವರನ್ನು ಅರ್ಧದಾರಿಯಿಂದ ಹಿಂದಕ್ಕೆ ಕಳುಹಿಸಿದ್ದಾರೆ.

ಮೊದಲ ಹಂತದ ಭಕ್ತರ 41 ದಿನಗಳ ವ್ರತಾಚರಣೆ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಇದೇ ಡಿಸೆಂಬರ್‌ 27ರಂದು ಈ ಋತುವಿನ ಚೊಚ್ಚಲ ಮಂಡಲ ಪೂಜೆಯನ್ನು ಅಯ್ಯಪ್ಪ ದೇಗುಲದಲ್ಲಿ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮುನ್ನ ದೇಗುಲ ಪ್ರವೇಶಕ್ಕೆ ಮಹಿಳೆಯರು ಸಿದ್ಧತೆ ಮಾಡಿಕೊಂಡಿದ್ದಾರೆ.

ಸೆಪ್ಟೆಂಬರ್‌ನಲ್ಲಿ 10-50 ವರ್ಷದೊಳಗಿನ ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿತ್ತು. ಈ ತೀರ್ಪು ನೀಡಿದ ನಂತರ ಹಲವು ಮಹಿಳೆಯರು ದೇಗುಲ ಪ್ರವೇಶಕ್ಕೆ ಯತ್ನಿಸಿದ್ದರು. ಆದರೆ ಕೇರಳ ಸರಕಾರ ಸುಪ್ರೀಂ ಕೋರ್ಟ್‌ ತೀರ್ಪನ್ನು ಜಾರಿಗೊಳಿಸಲು ಮುಂದಾಗಿಯೂ ಈ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು.

ಸುಪ್ರೀಂ ಕೋರ್ಟ್‌ ಆದೇಶ ವಿರೋಧಿಸಿ ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ಹಿಂದೂ ಪರ ಸಂಘಟನೆಗಳು ಶಬರಿಮಲೆಯಲ್ಲಿ ಸರಣಿ ಪ್ರತಿಭಟನೆಗಳನ್ನು ನಡೆಸಿದ್ದವು. ರಾಜಕೀಯ ಲಾಭಕ್ಕಾಗಿ ಬಿಜೆಪಿ ರಥಯಾತ್ರೆಗಳನ್ನೂ ನಡೆಸಿತ್ತು. ಈ ಎಲ್ಲಾ ಕಾರಣಗಳಿಂದ ನ್ಯಾಯಾಲಯದ ಆದೇಶವಿದ್ದರೂ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿಯ ದರ್ಶನ ಸಿಕ್ಕಿರಲಿಲ್ಲ. ಇದೀಗ 50 ಜನ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿಯ ದರ್ಶನ ಸಿಗಲಿದೆಯಾ ಎಂಬುದನ್ನು ಕಾದು ನೋಡಬೇಕಾಗಿದೆ.