ಖಾಸಗಿ ಕಂಪ್ಯೂಟರ್‌ ಜಾಲಾಡಲು ಅಧಿಕಾರ; ಮೂಲಭೂತ ಹಕ್ಕಿಗೆ ಧಕ್ಕೆ ತರಲಿದೆಯೇ ಆದೇಶ?
ಸುದ್ದಿ ಸಾರ

ಖಾಸಗಿ ಕಂಪ್ಯೂಟರ್‌ ಜಾಲಾಡಲು ಅಧಿಕಾರ; ಮೂಲಭೂತ ಹಕ್ಕಿಗೆ ಧಕ್ಕೆ ತರಲಿದೆಯೇ ಆದೇಶ?

ಐಟಿ ಕಾಯ್ದೆಯಡಿ ಹೊಸ ಆದೇಶ ಹೊರಡಿಸಿರುವ ಕೇಂದ್ರ ಸರಕಾರ 10 ಪ್ರಮುಖ ತನಿಖಾ ಸಂಸ್ಥೆಗಳಿಗೆ ದೇಶದ ಎಲ್ಲಾ ಕಂಪ್ಯೂಟರ್‌ಗಳನ್ನು ಜಾಲಾಡುವ ಅಧಿಕಾರ ಕೊಟ್ಟಿದೆ.

ಸರಕಾರದ ನಿಗದಿತ ತನಿಖಾ ಸಂಸ್ಥೆಗಳು ದೇಶದ ಎಲ್ಲಾ ಕಂಪ್ಯೂಟರ್‌ಗಳ ಮೇಲೆ ನಿಗಾ ವಹಿಸುವ ಹಾಗೂ ಯಾವುದೇ ಕಂಪ್ಯೂಟರ್‌ಗೆ ಕೈಹಾಕಿ ಮಾಹಿತಿ ತೆಗೆದುಕೊಳ್ಳಬಹುದು ಎಂಬ ಹೊಸ ಆದೇಶವನ್ನು ಕೇಂದ್ರ ಸರಕಾರ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಹೊರಡಿಸಿದೆ.

ಹೊಸ ಆದೇಶದ ಪ್ರಕಾರ ಕೇಂದ್ರೀಯ ಬೇಹುಗಾರಿಕಾ ದಳ (ಐಬಿ), ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ), ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ), ಆರ್ಥಿಕ ಬೇಹುಗಾರಿಕೆ ನಿರ್ದೇಶನಾಲಯ (ಡಿಆರ್‌ಐ), ಕೇಂದ್ರೀಯ ತನಿಖಾ ದಳ (ಸಿಬಿಐ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಕೇಂದ್ರ ಸಂಪುಟ ಸಚಿವಾಲಯ, ಜಮ್ಮು- ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಸಿಗ್ನಲಿಂಗ್‌ ಬೇಹುಗಾರಿಕಾ ದಳ ಮತ್ತು ದೆಹಲಿ ಪೊಲೀಸ್‌ ಕಮಿಷನರ್‌ – ಈ ಹತ್ತು ಸಂಸ್ಥೆಗಳಿಗೆ ವಿಶೇಷಾಧಿಕಾರ ಕೊಡಲಾಗಿದೆ.

ಈ ಸಂಸ್ಥೆಗಳು ಹಾಗೂ ಅಗತ್ಯಬಿದ್ದರೆ ಸ್ಥಳೀಯ ಬೇಹುಗಾರಿಕಾ ಸಂಸ್ಥೆಗಳಿಗೆ ದೇಶದ ಯಾವುದೇ ಕಂಪ್ಯೂಟರ್‌ನ ಮಾಹಿತಿಗೆ ಕೈ ಹಾಕುವ ಅಧಿಕಾರ ಕೊಡಲಾಗಿದೆ. ಹೊಸ ಆದೇಶದ ಪ್ರಕಾರ ಈ ತನಿಖಾ ಸಂಸ್ಥೆಗಳು ಯಾವುದೇ ಕಂಪ್ಯೂಟರ್‌ನ ಮಾಹಿತಿಯನ್ನು ಸೇವಾದಾರರ ಮೂಲಕ ಪಡೆಯಬಹುದು. ತನಿಖೆಗಾಗಿ ಅಗತ್ಯ ಕಂಡ ಯಾವುದೇ ಕಂಪ್ಯೂಟರ್‌ ಅನ್ನು ಯಾವುದೇ ಮುನ್ಸೂಚನೆ ಇಲ್ಲದೆ ಸಂಪೂರ್ಣ ಡೇಟಾ ಸಹಿತ ವಶಕ್ಕೆ ಪಡೆಯಬಹುದು.

ಆದರೆ, ಈ ಹೊಸ ಆದೇಶ ದೇಶದ ಜನರ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ವಿಪಕ್ಷಗಳು ಆರೋಪಿಸಿವೆ. “ಇಂದೊಂದು ಪ್ರಜಾಪ್ರಭುತ್ವ ವಿರೋಧಿ ಮತ್ತು ವೈಯಕ್ತಿಕ ಖಾಸಗಿತನದ ಉಲ್ಲಂಘನೆಯ ಆದೇಶವಾಗಿದೆ. ಖಾಸಗಿತನ ಮೂಲಭೂತ ಹಕ್ಕು. ಆದರೆ, ಹೊಸ ಆದೇಶದ ಈ ಮೂಲಭೂತ ಹಕ್ಕನ್ನೇ ಉಲ್ಲಂಘಿಸುವಂತಿದೆ. ನಾವು ಈ ಹೊಸ ಆದೇಶವನ್ನು ತೀವ್ರವಾಗಿ ವಿರೋಧಿಸುತ್ತೇವೆ” ಎಂದು ಕಾಂಗ್ರೆಸ್‌ ಮುಖಂಡ ಆನಂದ್ ಶರ್ಮಾ ಹೇಳಿದ್ದಾರೆ.

“ಎಲ್ಲಾ ಭಾರತೀಯರನ್ನು ಅಪರಾಧಿಗಳಂತೆ ನೋಡುತ್ತಿರುವುದೇಕೆ? ತನಿಖಾ ಸಂಸ್ಥೆಗಳು ಯಾವುದೇ ಕಂಪ್ಯೂಟರ್‌ನ ಮಾಹಿತಿಗೆ ಕೈಹಾಕಬಹುದೆಂಬ ಹೊಸ ಆದೇಶ ಅಸಂವಿಧಾನಿಕ” ಎಂದು ಕಮ್ಯುನಿಸ್ಟ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯಚೂರಿ ಟ್ವೀಟ್ ಮಾಡಿದ್ದಾರೆ.

ವಿಪಕ್ಷಗಳ ಟೀಕೆಗೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, “ತನಿಖಾ ಸಂಸ್ಥೆಗಳು ಎಲ್ಲಾ ಕಂಪ್ಯೂಟರ್‌ನ ಮೇಲೆ ನಿಗಾ ವಹಿಸುವ ನಿಯಮ ಯುಪಿಎ ಸರಕಾರ ಅಧಿಕಾರದಲ್ಲಿದ್ದ 2009ರಿಂದಲೇ ಜಾರಿಯಲ್ಲಿದೆ. ಈಗ ಅದನ್ನು ಪರಿಷ್ಕರಿಸಿ ಹೊಸದಾಗಿ ಆದೇಶ ಹೊರಡಿಸಲಾಗಿದೆಯಷ್ಟೆ. ವಿಪಕ್ಷಗಳು ಸಣ್ಣ ವಿಚಾರವನ್ನು ಅಗತ್ಯಕ್ಕಿಂತ ದೊಡ್ಡದು ಮಾಡುತ್ತಿವೆ” ಎಂದಿದ್ದಾರೆ.

ಜೇಟ್ಲಿ ಹೇಳಿರುವಂತೆ ಇಂಥದ್ದೊಂದು ನಿಯಮ ಐಟಿ ಕಾಯ್ದೆಯಡಿ 2009ರಿಂದಲೂ ಇದೆ. ಆದರೆ, ಯಾವೆಲ್ಲಾ ತನಿಖಾ ಸಂಸ್ಥೆಗಳು ಈ ಅಧಿಕಾರ ಪ್ರಯೋಗಿಸಬಹುದು ಎಂಬುದನ್ನಷ್ಟೇ ಹೊಸ ಆದೇಶ ಸ್ಪಷ್ಟಪಡಿಸಿದೆ.