‘ಇಯರ್ ಎಂಡ್‌’ಗೆ ಜೇಬಲ್ಲಿ ದುಡ್ಡಿರಬೇಕು ಅಂತಿದ್ದರೆ ಮಾತ್ರ ಈ ಮಾಹಿತಿ ಗಮನಿಸಿ...
ಸುದ್ದಿ ಸಾರ

‘ಇಯರ್ ಎಂಡ್‌’ಗೆ ಜೇಬಲ್ಲಿ ದುಡ್ಡಿರಬೇಕು ಅಂತಿದ್ದರೆ ಮಾತ್ರ ಈ ಮಾಹಿತಿ ಗಮನಿಸಿ...

ಮುಂದಿನ ಆರು ದಿನಗಳಲ್ಲಿ ಕೇವಲ ಒಂದು ದಿನ ಮಾತ್ರ ಬ್ಯಾಂಕ್‌ಗಳು ತೆರೆಯಲಿವೆ. ಬ್ಯಾಂಕ್‌ ವಹಿವಾಟು ಸ್ಥಗಿತಗೊಂಡಾಗ ಎಟಿಎಂಗಳ ಹಣವೂ ಖಾಲಿಯಾಗುವ ಸಂಭವ ಹೆಚ್ಚಾಗಿರುತ್ತದೆ. ಮುಂದಿನ ವಾರ ಜೇಬಲ್ಲಿ ದುಡ್ಡು ಇರಲೇಬೇಕು ಅಂತಿದ್ದರೆ...

ನಾಳೆಯಿಂದ ಆರಂಭವಾಗಿ ಮುಂದಿನ ಆರು ದಿನಗಳಲ್ಲಿ ಐದು ದಿನಗಳ ಕಾಲ ದೇಶದಲ್ಲಿ ಬ್ಯಾಂಕುಗಳು ಬಾಗಿಲು ಮುಚ್ಚಲಿವೆ. ಇದರಿಂದ ವರ್ಷಾಂತ್ಯಕ್ಕೆ ಜನ ಬ್ಯಾಂಕಿಂಗ್‌ ವ್ಯವಹಾರ ಮತ್ತು ಹಣದ ವಹಿವಾಟಿನಲ್ಲಿ ತೊಂದರೆಗೆ ಸಿಲುಕಲಿದ್ದಾರೆ.

ನಾಳೆ ಅಂದರೆ ಡಿಸೆಂಬರ್‌ 21ರಂದು ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ಬ್ಯಾಂಕ್‌ ಮುಷ್ಕರಕ್ಕೆ ಕರೆ ಕೊಟ್ಟಿದೆ. ಶನಿವಾರ ನಾಲ್ಕನೇ ವಾರಾಂತ್ಯದಂದು ಬ್ಯಾಂಕಿಗೆ ರಜೆ ಇರಲಿದ್ದು, ಭಾನುವಾರ ಎಂದಿನಂತೆ ವಾರದ ರಜೆ ಇರಲಿದೆ. ಇದರ ನಡುವೆ ಸೋಮವಾರ ಡಿಸೆಂಬರ್‌ 24ರಂದು ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಲಿವೆ. ಆದರೆ ಸತತ ರಜೆಯ ಕಾರಣ ಬ್ಯಾಂಕ್‌ಗಳಲ್ಲಿ ಸಿಬ್ಬಂದಿಗಳ ಕೊರತೆ ಇರಲಿದೆ.

ಮಂಗಳವಾರ ಡಿಸೆಂಬರ್‌ 25ರಂದು ಕ್ರಿಸ್ಮಸ್‌ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ಇದ್ದರೆ ಡಿಸೆಂಬರ್‌ 26ರಂದು ರಾಷ್ಟ್ರವ್ಯಾಪಿ ಬ್ಯಾಂಕ್‌ ಬಂದ್‌ಗೆ ಬ್ಯಾಂಕ್‌ ಒಕ್ಕೂಟ (ಯುಎಫ್‌ಬಿಯು) ಕರೆ ನೀಡಿದೆ. ಬ್ಯಾಂಕ್‌ ಆಫ್‌ ಬರೋಡಾ, ದೇನಾ ಬ್ಯಾಂಕ್‌ ಮತ್ತು ವಿಜಯಾ ಬ್ಯಾಂಕ್‌ಗಳ ವಿಲೀನ ಕ್ರಮ ವಿರೋಧಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. “ಬ್ಯಾಂಕ್‌ ವಿಲೀನಕ್ಕೆ ಮುಂದಾಗಿರುವ ಕೇಂದ್ರ ಸರಕಾರದ ವಿರುದ್ಧ ಈ ಮುಷ್ಕರ,” ಎಂದು ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್‌.ವೆಂಕಟಾಚಲಂ ಹೇಳಿದ್ದಾರೆ.

ಹೀಗೆ ಮುಂದಿನ ಆರು ದಿನಗಳಲ್ಲಿ ಕೇವಲ ಒಂದು ದಿನ ಮಾತ್ರ ಬ್ಯಾಂಕ್‌ ತೆರೆಯಲಿದೆ. ಸಾಮಾನ್ಯವಾಗಿ ಬ್ಯಾಂಕ್‌ ವಹಿವಾಟು ಸ್ಥಗಿತಗೊಂಡಾಗ ಎಟಿಎಂಗಳ ಹಣವೂ ಖಾಲಿಯಾಗುವ ಸಂಭವ ಹೆಚ್ಚಾಗಿರುತ್ತದೆ. ಇದರಿಂದ ವರ್ಷಾಂತ್ಯಕ್ಕೆ ಪ್ರವಾಸ, ಮೋಜು ಮಸ್ತಿ ಎಂದು ತೆರಳುವವರು ಈಗಲೇ ಹಣವನ್ನು ಮುಂಗಡವಾಗಿ ತೆಗೆದಿಟ್ಟುಕೊಳ್ಳುವುದು ಸೂಕ್ತ. ಬ್ಯಾಂಕಿಂಗ್ ಕ್ಷೇತ್ರದವರ ‘ಇಯರ್ ಎಂಡ್' ಯೋಜನೆಗೆ ಜನ ಬೆಲೆ ತೆರುವಂತೆ ಆಗದಿರಲಿ.