ಬುಲಂದ್‌ಶರ್‌ ಪ್ರಕರಣಕ್ಕೆ ‘ರಾಜಕೀಯ ಬಣ್ಣ’ ಬಳಿದ ಉತ್ತರ ಪ್ರದೇಶ ಸಿ.ಎಂ. ಯೋಗಿ ಆದಿತ್ಯನಾಥ್‌
ಸುದ್ದಿ ಸಾರ

ಬುಲಂದ್‌ಶರ್‌ ಪ್ರಕರಣಕ್ಕೆ ‘ರಾಜಕೀಯ ಬಣ್ಣ’ ಬಳಿದ ಉತ್ತರ ಪ್ರದೇಶ ಸಿ.ಎಂ. ಯೋಗಿ ಆದಿತ್ಯನಾಥ್‌

ಬುಲಂದ್‌ಶರ್‌ ಘಟನೆ ಅಪಘಾತ ಎಂದು ಈ ಮೊದಲು ಹೇಳಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈಗ ಇದು ರಾಜಕೀಯ ಪ್ರೇರಿಕ ಕೃತ್ಯ ಎಂದಿದ್ದಾರೆ.

“ಬುಲಂದ್‌ಶರ್‌ ಪ್ರಕರಣ ರಾಜಕೀಯ ಪ್ರೇರಿತ ಸಂಚು” ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಕರಣಕ್ಕೆ ತಾವೇ ರಾಜಕೀಯ ಬಣ್ಣ ಬಳಿದಿದ್ದಾರೆ.

ಬುಧವಾರ ಉತ್ತರ ಪ್ರದೇಶದ ವಿಧಾನಸಭಾ ಕಲಾಪದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಆದಿತ್ಯನಾಥ್‌, “ರಾಜ್ಯದಲ್ಲಿ ರಾಜಕೀಯ ಅಸ್ಥಿತ್ವ ಕಳೆದುಕೊಂಡಿರುವವರ ರಾಜಕೀಯ ಪ್ರೇರಿತ ಕೃತ್ಯ ಇದು” ಎಂದಿದ್ದಾರೆ.

ಬುಲಂದ್‌ಶರ್‌ ಪ್ರಕರಣ ಉತ್ತರ ಪ್ರದೇಶದ ಕಾನೂನು- ಸುವ್ಯವಸ್ಥೆಯಲ್ಲಿ ಸರಕಾರದ ಲೋಪ ಎಂದು ವಿಪಕ್ಷಗಳಾದ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್‌ನ ಶಾಸಕರು ವಿಧಾನಸಭೆಯ ಕಲಾಪದ ವೇಳೆ ಯೋಗಿ ಆದಿತ್ಯನಾಥ್‌ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ವಿಪಕ್ಷಗಳ ಗದ್ದಲದ ಕಾರಣಕ್ಕೆ ಕಲಾಪವನ್ನು ಮುಂದೂಡಲಾಗಿತ್ತು.

ಕಲಾಪ ಮುಂದೂಡಿದ ಬಳಿಕ ವಿಧಾನಸಭೆಯ ಹೊರಗೆ ಮಾತನಾಡಿರುವ ಆದಿತ್ಯನಾಥ್‌ ಘಟನೆಗೆ ರಾಜಕೀಯ ಪ್ರೇರಣೆಯೇ ಕಾರಣ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಕಾಪಾಡಲು ನಮ್ಮ ಆಡಳಿತ ಸಮರ್ಥವಾಗಿದೆ ಎಂದಿದ್ದಾರೆ.

ಡಿಸೆಂಬರ್‌ 3ರಂದು ಬುಲಂದ್‌ಶರ್‌ನಲ್ಲಿ ಗೋಹತ್ಯೆ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಒಬ್ಬ ಪೊಲೀಸ್‌ ಅಧಿಕಾರಿ ಹಾಗೂ ಒಬ್ಬ ಯುವಕ ಮೃತಪಟ್ಟಿದ್ದರು. ಮೊದಲು ಇದೊಂದು ಅಪಘಾತ ಎಂದು ಹೇಳಿದ್ದ ಯೋಗಿ ಆದಿತ್ಯನಾಥ್‌ ಈಗ ಇದು ರಾಜಕೀಯ ಪ್ರೇರಿಕ ಕೃತ್ಯ ಎಂದಿದ್ದಾರೆ.

ಘಟನೆ ನಡೆದ ಮರುದಿನ ಪ್ರತಿಕ್ರಿಯಿಸಿದ್ದ ಯೋಗಿ ಸಂಪುಟದ ಸಚಿವ ಓಂಪ್ರಕಾಶ್‌ ರಾಜ್‌ಭರ್‌, “ಬುಲಂದ್‌ಶರ್‌ ಗಲಭೆ ಸಂಘ ಪರಿವಾರದ ಪೂರ್ವ ನಿಯೋಜಿತ ಕೃತ್ಯ” ಎಂದಿದ್ದರು. “ಇದು ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ ಮತ್ತು ಆರ್‌ಎಸ್‌ಎಸ್‌ನ ಪೂರ್ವ ನಿಯೋಜಿತ ಸಂಚು” ಎಂದು ಬಿಜೆಪಿಯ ಮೈತ್ರಿ ಪಕ್ಷವಾಗಿರುವ ಸುಹಲ್‌ದೇವ್‌ ಭಾರ್ತಿ ಸಮಾಜ್‌ ಪಾರ್ಟಿಯ ಅಧ್ಯಕ್ಷ ಓಂಪ್ರಕಾಶ್‌ ಆರೋಪಿಸಿದ್ದರು.

Also read: ಬುಲಂದ್‌ಶರ್‌ ಗಲಭೆ ಸಂಘ ಪರಿವಾರದ ವ್ಯವಸ್ಥಿತ ಸಂಚು: ಯೋಗಿ ಸಂಪುಟದ ಸಚಿವರ ಆರೋಪ!