samachara
www.samachara.com
ತೃತೀಯ ಲಿಂಗಿಗಳಿಗೆ ಅಯ್ಯಪ್ಪ ದರ್ಶನ; ಶಬರಿಮಲೆ ಪ್ರವೇಶಕ್ಕೆ 30 ಮಹಿಳೆಯರು ಸಜ್ಜು
ಸುದ್ದಿ ಸಾರ

ತೃತೀಯ ಲಿಂಗಿಗಳಿಗೆ ಅಯ್ಯಪ್ಪ ದರ್ಶನ; ಶಬರಿಮಲೆ ಪ್ರವೇಶಕ್ಕೆ 30 ಮಹಿಳೆಯರು ಸಜ್ಜು

ತೃತೀಯ ಲಿಂಗಿಗಳಿಗೆ ದರ್ಶನಕ್ಕೆ ಅವಕಾಶ ನೀಡಲು ತಂತ್ರಿಗಳು ಹಾಗೂ ಪಂದಳಂ ರಾಜಮನೆತನದವರು ಒಪ್ಪಿಗೆ ಸೂಚಿಸಿದ್ದರು.

ನಾಲ್ಕು ಮಂದಿ ತೃತೀಯ ಲಿಂಗಿಗಳು ಮಂಗಳವಾರ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಬಿಗಿ ಪೊಲೀಸ್‌ ಭದ್ರತೆಯಲ್ಲಿ ತೃತೀಯ ಲಿಂಗಿಗಳಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.

ಎರ್ನಾಕುಲಂನಿಂದ ಬಂದಿದ್ದ ನಾಲ್ಕು ಮಂದಿ ತೃತೀಯ ಲಿಂಗಿಗಳಿಗೆ ಭಾನುವಾರ ಶಬರಿಮಲೆಗೆ ಪ್ರವೇಶ ನಿರಾಕರಿಸಲಾಗಿತ್ತು. ಈ ಬಗ್ಗೆ ಕೊಟ್ಟಾಯಂ ಎಸ್‌ಪಿಗೆ ದೂರು ಸಲ್ಲಿಸಿದ್ದ ಈ ನಾಲ್ಕು ಮಂದಿ, ನಂತರ ಕೇರಳ ಹೈಕೋರ್ಟ್‌ ನೇಮಿಸಿರುವ ಐಜಿ ನೇತೃತ್ವದ ನಿಗಾ ಸಮಿತಿಗೆ ದರ್ಶನಕ್ಕಾಗಿ ಮನವಿ ಸಲ್ಲಿಸಿದ್ದರು.

ನಿಗಾ ಸಮಿತಿಯು ತೃತೀಯ ಲಿಂಗಿಗಳ ಮನವಿ ಬಗ್ಗೆ ಅಯ್ಯಪ್ಪ ದೇಗುಲದ ಪ್ರಧಾನ ತಂತ್ರಿಗಳ ಜತೆಗೆ ಮಾತುಕತೆ ನಡೆಸಿತ್ತು. ತೃತೀಯ ಲಿಂಗಿಗಳಿಗೆ ದರ್ಶನಕ್ಕೆ ಅವಕಾಶ ನೀಡಲು ತಂತ್ರಿಗಳು ಹಾಗೂ ಪಂದಳಂ ರಾಜಮನೆತನದವರು ಒಪ್ಪಿಗೆ ಸೂಚಿಸಿದ್ದರು. ಹೀಗಾಗಿ ಇಂದು ಬೆಳಿಗ್ಗೆ ಪೊಲೀಸರ ಭದ್ರತೆಯಲ್ಲಿ ಈ ನಾಲ್ಕು ಮಂದಿ ಶಬರಿಮಲೆ ಪ್ರವೇಶಿಸಿದ್ದರು.

Also read: ಶಬರಿಮಲೆ ಎಂಬ ಸ್ಥಾಪಿತ ನಂಬಿಕೆ ಮತ್ತು 250 ಕೋಟಿ ರೂ. ವಾರ್ಷಿಕ ಆದಾಯದ ಹಿಂದಿನ ಅಸಲಿ ಕತೆ!

ಕಪ್ಪು ಸೀರೆಯುಟ್ಟು ಬಂದಿದ್ದ ತೃತೀಯ ಲಿಂಗಿಗಳ ಶಬರಿಮಲೆ ಪ್ರವೇಶಕ್ಕೆ ಇಂದು ಭಕ್ತರಿಂದ ಯಾವುದೇ ಬಗೆಯ ವಿರೋಧ ವ್ಯಕ್ತವಾಗಲಿಲ್ಲ. ತೃತೀಯ ಲಿಂಗಿಗಳ ಪ್ರವೇಶದ ಬೆನ್ನಲ್ಲೇ ಶಬರಿಮಲೆ ಪ್ರವೇಶಕ್ಕೆ 30 ಮಂದಿ ಮಹಿಳೆಯರ ಗುಂಪು ಸಜ್ಜಾಗಿದೆ. ಚೆನ್ನೈ ಮೂಲದ ವಕೀಲೆ ಸೆಲ್ವಿ ನೇತೃತ್ವದ ಮಹಿಳೆಯರ ತಂಡ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯಲು ಸಿದ್ಧತೆ ನಡೆಸಿದೆ.

‘ಮನಿಥಿ’ ಹೆಸರಿನ ಚೆನ್ನೈನ ಮಹಿಳಾ ಸಂಘಟನೆ ಅಡಿಯಲ್ಲಿ 30 ಮಂದಿ ಮಹಿಳೆಯರು ಶಬರಿಮಲೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಸುಪ್ರೀಂಕೋರ್ಟ್‌ ಆದೇಶದ ಬಳಿಕ ಈವರೆಗೂ 10ರಿಂದ 50 ವರ್ಷದೊಳಗಿನ ಒಬ್ಬ ಮಹಿಳೆಗೂ ದೇಗುಲ ಪ್ರವೇಶಕ್ಕೆ ಭಕ್ತರು ಅವಕಾಶ ಸಿಕ್ಕಿಲ್ಲ. ಹೀಗಾಗಿ ತಮ್ಮ ಹಕ್ಕನ್ನು ಚಲಾಯಿಸಲು ಮನಿಥಿ ಸಂಘಟನೆಯ ಅಡಿಯಲ್ಲಿ ಮಹಿಳೆಯರು ಶಬರಿಮಲೆಗೆ ಹೋಗಲು ಮುಂದಾಗಿದ್ದಾರೆ.