samachara
www.samachara.com
ಆಂಬಿಡೆಂಟ್‌ ಪ್ರಕರಣದಲ್ಲಿ ಪೊಲೀಸರ ಮೇಲೆ ಅನುಮಾನ; ಸಿಬಿಐ ತನಿಖೆಗೆ ಒತ್ತಾಯ
ಸುದ್ದಿ ಸಾರ

ಆಂಬಿಡೆಂಟ್‌ ಪ್ರಕರಣದಲ್ಲಿ ಪೊಲೀಸರ ಮೇಲೆ ಅನುಮಾನ; ಸಿಬಿಐ ತನಿಖೆಗೆ ಒತ್ತಾಯ

ಆಂಬಿಡೆಂಟ್‌ ವಂಚನೆ ಪ್ರಕರಣದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ವಿರುದ್ಧವೂ ಆರೋಪಗಳು ಕೇಳಿಬಂದಿರುವುದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ರವಿಕೃಷ್ಣಾ ರೆಡ್ಡಿ ಒತ್ತಾಯಿಸಿದ್ದಾರೆ.

“ಆಂಬಿಡೆಂಟ್‌ ಕಂಪೆನಿಯ ವಂಚನೆ ಪ್ರಕರಣದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಮೇಲೆ ಆರೋಪಿ ಸಯ್ಯದ್‌ ಫರೀದ್‌ ಗಂಭೀರ ಆರೋಪ ಮಾಡಿರುವುದರಿಂದ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು” ಎಂದು ‘ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ’ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಡ್ಡಿ, “ಸಯ್ಯದ್‌ ಫರೀದ್‌ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಲಂಚ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಪ್ರಕರಣ ಮುಚ್ಚಿ ಹಾಕಲು ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗೆ ಕೋಟಿಗಟ್ಟಲೆ ಹಣ ನೀಡಿರುವುದಾಗಿ ಆತ ಹೇಳಿಕೊಂಡಿರುವುದರಿಂದ ಸರಕಾರ ಈ ಆರೋಪದ ಬಗ್ಗೆ ಗಂಭೀರ ಕ್ರಮಕ್ಕೆ ಮುಂದಾಗಬೇಕು” ಎಂದಿದ್ದಾರೆ.

“ಪೂರ್ವ ವಲಯ ಡಿಸಿಪಿ ಅಜಯ್ ಹಿಲೋರಿ ಕಡೆಯವರಿಗೆ ಒಟ್ಟು 20 ಕೋಟಿ ರೂಪಾಯಿ, ನಗರ ಪೊಲೀಸ್‌ ಆಯುಕ್ತ ಟಿ. ಸುನಿಲ್‌ ಕುಮಾರ್‌ ಅವರಿಗೆ 5 ಕೋಟಿ ರೂಪಾಯಿ, ಪೂರ್ವ ವಲಯ ಎಸಿಪಿ ಸೀಮಂತ್‌ ಕುಮಾರ್‌ ಸಿಂಗ್‌ ಅವರಿಗೆ 3 ಕೋಟಿ ರೂಪಾಯಿ, ಸಿಸಿಬಿಯ ಈ ಹಿಂದಿನ ಮುಖ್ಯಸ್ಥ ಸತೀಶ್‌ ಕುಮಾರ್‌ ಅವರಿಗೆ 3 ಕೋಟಿ ರೂಪಾಯಿ, ಹಿರಿಯ ಪೊಲೀಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಅವರಿಗೆ 1 ಕೋಟಿ ರೂಪಾಯಿ, ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರಿಗೆ 1 ಕೋಟಿ ರೂಪಾಯಿ ಲಂಚ ಕೊಟ್ಟಿದ್ದೇನೆ ಎಂದು ಫರೀದ್‌ ಹೇಳಿಕೊಂಡಿದ್ದಾನೆ” ಎಂದು ರೆಡ್ಡಿ ತಿಳಿಸಿದ್ದಾರೆ.

“ಫರೀದ್‌ ಹೇಳಿಕೊಂಡಿರುವ ಈ ಅಂಶಗಳು ಸತ್ಯವಿರಬಹುದು ಇಲ್ಲವೇ ಸುಳ್ಳಾಗಿರಬಹುದು. ಈ ಅನುಮಾನದ ಸತ್ಯಾಸತ್ಯತೆ ತಿಳಿಯಲು ನ್ಯಾಯಾಲಯದ ಕಣ್ಗಾವಲಿನಲ್ಲಿ ಸಿಬಿಐ ತನಿಖೆ ನಡೆಯಬೇಕು. ಪೊಲೀಸ್‌ ಅಧಿಕಾರಿಗಳು ಲಂಚ ತೆಗೆದುಕೊಂಡಿರುವುದು ನಿಜವೇ ಆದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

“2008ರಿಂದಲೇ ವಿಜಯ್ ಟಾಟಾ ವಂಚನೆ ಮಾಡುತ್ತಲೇ ಬರುತ್ತಿದ್ದಾನೆ. ಆದರೆ, ಆತನ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಪ್ರಕರಣದ ತನಿಖೆ ನಡೆಸುತ್ತಿದ್ದ ತನಿಖಾಧಿಕಾರಿ ಎಸಿಪಿ ವೆಂಕಟೇಶ್‌ ಪ್ರಸನ್ನ ವಿರುದ್ಧ ವಿಜಯ್‌ ಟಾಟಾ ನವೆಂಬರ್‌ 18ನೇ ತಾರೀಖು ದೂರು ನೀಡಿದ್ದ. ವೆಂಕಟೇಶ್‌ ಪ್ರಸನ್ನ ಲಂಚ ಕೇಳುತ್ತಿದ್ದಾರೆ ಎಂದು ಟಾಟಾ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದನ್ನು ಆಧಾರವಾಗಿಟ್ಟುಕೊಂಡು ನವೆಂಬರ್‌ 20ನೇ ತಾರೀಖು ಎಸಿಪಿ ವೆಂಕಟೇಶ್‌ ಪ್ರಸನ್ನ ಅವರನ್ನು ವರ್ಗಾವಣೆ ಮಾಡಲಾಗಿದೆ. ವಿಜಯ್‌ ಟಾಟಾ ಆರೋಪ ನಿಜವೇ ಆಗಿದ್ದರೆ ಅವರ ವೆಂಕಟೇಶ್‌ ಪ್ರಸನ್ನ ವಿರುದ್ಧವಾದರೂ ತನಿಖೆಗೆ ಆದೇಶಿಸಬೇಕು. ಇಲ್ಲವೇ ವಿಜಯ್‌ ಟಾಟಾನನ್ನು ಬಂಧಿಸಬೇಕು” ಎಂದಿದ್ದಾರೆ.

“ಆಂಬಿಡೆಂಟ್‌ ಸೇರಿದಂತೆ ಹಲವು ವಂಚಕ ಕಂಪೆನಿಗಳಿಂದ 50 ಸಾವಿರಕ್ಕೂ ಹೆಚ್ಚು ಜನರು ವಂಚನೆಗೆ ಒಳಗಾಗಿದ್ದಾರೆ. ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿ ಮಂಗಳವಾರ ನಗರದ ಆನಂದ್‌ ರಾವ್‌ ವೃತ್ತದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ” ಎಂದು ರೆಡ್ಡಿ ತಿಳಿಸಿದ್ದಾರೆ.