ಸಿಎಂ ಆದ ಬೆನ್ನಲ್ಲೇ ರೈತರ ಸಾಲಮನ್ನಾ ಘೋಷಿಸಿದ ‘ಇಂದಿರಾ ಗಾಂಧಿಯ 3ನೇ ಮಗ’
ಸುದ್ದಿ ಸಾರ

ಸಿಎಂ ಆದ ಬೆನ್ನಲ್ಲೇ ರೈತರ ಸಾಲಮನ್ನಾ ಘೋಷಿಸಿದ ‘ಇಂದಿರಾ ಗಾಂಧಿಯ 3ನೇ ಮಗ’

2018ರ ಮಾರ್ಚ್‌ 31ರವರೆಗೆ ರಾಜ್ಯದ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಎರಡು ಲಕ್ಷ ರೂಪಾಯಿವರೆಗಿನ ಅಲ್ಪಾವಧಿ ಕೃಷಿ ಸಾಲ ಮನ್ನಾ ಮಾಡಿದ್ದಾರೆ.

‘ಇಂದಿರಾ ಗಾಂಧಿಯ ಮೂರನೇ ಮಗ’ ಎಂದೇ ಗುರುತಿಸಿಕೊಂಡಿರುವ ಕಮಲ್‌ ನಾಥ್‌ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ರೈತರ ಎರಡು ಲಕ್ಷ ರೂಪಾಯಿವರೆಗಿನ ಸಾಲಮನ್ನಾ ಘೋಷಣೆ ಮಾಡಿದ್ದಾರೆ.

ಸೋಮವಾರ ಮಧ್ಯಪ್ರದೇಶದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕಮಲ್‌ ನಾಥ್‌, 2018ರ ಮಾರ್ಚ್‌ 31ರವರೆಗೆ ರಾಜ್ಯದ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಎರಡು ಲಕ್ಷ ರೂಪಾಯಿವರೆಗಿನ ಅಲ್ಪಾವಧಿ ಕೃಷಿ ಸಾಲ ಮನ್ನಾ ಮಾಡಿದ್ದಾರೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 2 ಲಕ್ಷ ರೂಪಾಯಿವರೆಗಿನ ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಅಲ್ಲದೆ ನಿರುದ್ಯೋಗ ಯುವಕರಿಗೆ ಭಾರೀ ಸಂಖ್ಯೆಯಲ್ಲಿ ಉದ್ಯೋಗ ನೀಡುವ ಭರವಸೆಯೂ ಪ್ರಣಾಳಿಕೆಯಲ್ಲಿತ್ತು. ಮೊದಲ ಭರವಸೆಯ ಘೋಷಣೆ ಮಾಡಿರುವ ಕಮಲ್‌ ನಾಥ್‌ ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾಗಿದ್ದಾರೆ.

ಸೋಮವಾರ ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮ ನಿಗಧಿಯಾಗಿತ್ತು. ರಾಜಸ್ತಾನದ ಮುಖ್ಯಮಂತ್ರಿಯಾಗಿ ಅಶೋಕ್‌ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿಯಾಗಿ ಸಚಿನ್‌ ಪೈಲಟ್‌ ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಮಧ್ಯಾಹ್ನ ಕಮಲ್‌ ನಾಥ್‌ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಜೆ ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿ ಭೂಪೇಶ್‌ ಬಘೇಲ್‌ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ರಾಷ್ಟ್ರೀಯ ನಾಯಕರು, ಎಡಪಕ್ಷಗಳ ಮೈತ್ರಿಕೂಟದ ಮುಖಂಡರು ಹಾಜರಾಗಿದ್ದಾರೆ.