1984ರ ಸಿಖ್‌ ವಿರೋಧಿ ದಂಗೆ: ಸಜ್ಜನ್‌ ಕುಮಾರ್‌ಗೆ ಜೀವಾವಧಿ ಶಿಕ್ಷೆ
ಸುದ್ದಿ ಸಾರ

1984ರ ಸಿಖ್‌ ವಿರೋಧಿ ದಂಗೆ: ಸಜ್ಜನ್‌ ಕುಮಾರ್‌ಗೆ ಜೀವಾವಧಿ ಶಿಕ್ಷೆ

ಕಾಂಗ್ರೆಸ್‌ ಮುಖಂಡ ಸಜ್ಜನ್‌ ಕುಮಾರ್‌ಗೆ 1984ರ ಸಿಖ್‌ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿದೆ.

1984ರ ಸಿಖ್‌ ವಿರೋಧಿ ದಂಗೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದ್ದ ಕಾಂಗ್ರೆಸ್‌ ಮುಖಂಡ ಸಜ್ಜನ್‌ ಕುಮಾರ್‌ಗೆ ದೆಹಲಿ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ.

73 ವರ್ಷದ ಸಜ್ಜನ್‌ ಕುಮಾರ್‌ ಡಿಸೆಂಬರ್‌ 31ರೊಳಗೆ ಶರಣಾಗುವಂತೆ ಹಾಗೂ ದೆಹಲಿ ಬಿಟ್ಟು ತೆರಳದಂತೆ ನ್ಯಾಯಾಲಯ ಆದೇಶ ನೀಡಿದೆ. “ಇದು ನ್ಯಾಯಕ್ಕೆ ಸಂದ ಜಯ” ಎಂದು ಸಂತ್ರಸ್ತ ಕುಟುಂಬ ಸದಸ್ಯೆ ಜಗದೀಶ್‌ ಕೌರ್‌ ಹೇಳಿದ್ದಾರೆ.

ಇಂದಿರಾ ಗಾಂಧಿ ಹತ್ಯೆಯ ನಂತರ ನಡೆದ ಗಲಭೆಯಲ್ಲಿ ಸಿಖ್ಖರನ್ನು ಗುರಿಯಾಗಿಸಿಕೊಂಡು ನಡೆದ ದಾಳಿಗಳಲ್ಲಿ ಕಾಂಗ್ರೆಸ್‌ ಮುಖಂಡರಾದ ಸಜ್ಜನ್‌ ಕುಮಾರ್‌ ಮತ್ತು ಜಗದೀಶ್‌ ಟೈಟ್ಲರ್‌ ಪ್ರಮುಖ ಆರೋಪಿಗಳು ಎಂದು ಗುರುತಿಸಲಾಗಿತ್ತು.

Also read: 34 ವರ್ಷದ ಹಿಂದೆ ಬಿದ್ದಿದ್ದ ದೊಡ್ಡ ಮರ; ಮತ್ತೆ ಕಾಂಗ್ರೆಸ್‌ ಬುಡ ಅದುರಿಸಲಿದೆಯೇ ಸಿಖ್‌ ದಂಗೆ?

ಪ್ರಕರಣದ ಸುದೀರ್ಘ ವಿಚಾರಣೆಗಳು ನಡೆದು 1994ರಲ್ಲಿ ದೆಹಲಿ ಪೊಲೀಸರು ಸಿಖ್‌ ದಂಗೆ ಪ್ರಕರಣಗಳಿಗೆ ಇತಿಶ್ರೀ ಹಾಡಿದ್ದರು. ಸಿಖ್‌ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್‌ ಮುಖಂಡರ ವಿರುದ್ಧ ಇದ್ದ ಪ್ರಕರಣಗಳನ್ನು ದೆಹಲಿಯ ಅಧೀನ ನ್ಯಾಯಾಲಯ ವಜಾಗೊಳಿಸಿತ್ತು. ಆದರೆ, ಸಂತ್ರಸ್ತರ ಕುಟುಂಬ ಸದಸ್ಯರು ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

2015ರಲ್ಲಿ ಸಿಖ್‌ ದಂಗೆ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು. ಸಿಖ್‌ ದಂಗೆ ಸಂದರ್ಭದಲ್ಲಿ ಸಿಖ್ಖರ ಮೇಲೆ ದಾಳಿ ಮಾಡುವಂತೆ ಪ್ರಚೋದನೆ ನೀಡಿದ್ದ ಆರೋಪ ಹೊತ್ತಿದ್ದ ಕಾಂಗ್ರೆಸ್‌ ಮುಖಂಡರಾದ ಸಜ್ಜನ್‌ ಕುಮಾರ್‌ ಮತ್ತು ಜಗದೀಶ್‌ ಟೈಟ್ಲರ್‌ ತಪ್ಪಿತಸ್ಥರು ಎಂದು ದೆಹಲಿ ಕೋರ್ಟ್‌ ಕಳೆದ ತಿಂಗಳು ಹೇಳಿತ್ತು.

Also read: 1984 ಸಿಖ್‌ ವಿರೋಧಿ ಗಲಭೆ: ಓರ್ವನಿಗೆ ಗಲ್ಲು, ಮತ್ತೋರ್ವನಿಗೆ ಜೀವಾವಧಿ ಶಿಕ್ಷೆ