samachara
www.samachara.com
ಸುಳವಾಡಿ ವಿಷಾಹಾರ ದುರಂತ; 11ಕ್ಕೇರಿದ ಸಾವಿನ ಸಂಖ್ಯೆ, 29 ಮಂದಿ ಸ್ಥಿತಿ ಗಂಭೀರ
ಸುದ್ದಿ ಸಾರ

ಸುಳವಾಡಿ ವಿಷಾಹಾರ ದುರಂತ; 11ಕ್ಕೇರಿದ ಸಾವಿನ ಸಂಖ್ಯೆ, 29 ಮಂದಿ ಸ್ಥಿತಿ ಗಂಭೀರ

ಪ್ರಸಾದ ಸೇವಿಸಿ ಅಸ್ವಸ್ಥಗೊಂಡಿದ್ದವರ ಪೈಕಿ ಮೃತರ ಸಂಖ್ಯೆ 11ಕ್ಕೆ ಏರಿದೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 29 ಮಂದಿಯ ಸ್ಥಿತಿ ಗಂಭೀರವಾಗಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಸುಳವಾಡಿಯ ಕಿಚ್‌ಗುತ್‌ ಮಾರಮ್ಮನ ದೇವಾಲಯದ ಪ್ರಸಾದ ಸೇವಿಸಿ ಅಸ್ವಸ್ಥಗೊಂಡಿದ್ದವರ ಪೈಕಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿದೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ 29 ಮಂದಿಯ ಸ್ಥಿತಿ ಗಂಭೀರವಾಗಿದೆ.

ಚಾಮರಾಜನಗರ, ಕೊಳ್ಳೇಗಾಲ, ಮೈಸೂರಿನ ಆಸ್ಪತ್ರೆಗಳಲ್ಲಿ ಸುಮಾರು 60 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟ ನಾಲ್ಕು ಮಂದಿಯ ಸಾಮೂಹಿಕ ಅಂತ್ಯಕ್ರಿಯೆ ಬಿದರಹಳ್ಳಿಯಲ್ಲಿ ಶನಿವಾರ ನಡೆಯಿತು. ಅಂತ್ಯಕ್ರಿಯೆಗೆ ನೆರೆದಿದ್ದ ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು.

ದ್ವೇಷದ ಕಾರಣಕ್ಕೆ ಬೇರೊಂದು ಗುಂಪಿನ ಕಿಡಿಗೇಡಿಗಳು ಪ್ರಸಾದದ ಊಟಕ್ಕೆ ಕ್ರಿಮಿನಾಶಕ ಬೆರೆಸಿರುವ ಅನುಮಾನ ಬಲವಾಗಿದೆ. ಪೊಲೀಸರೂ ಕೂಡಾ ಇದೇ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಇಬ್ಬರು ಶಂಕಿತ ಆರೋಪಿಗಳನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.

ಘಟನೆಗೆ ಕಾರಣರಾದವರು ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸ್‌ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ತಮಿಳುನಾಡು ಪೊಲೀಸರೊಂದಿಗೆ ರಾಜ್ಯ ಪೊಲೀಸರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಶನಿವಾರ ಸುಳವಾಡಿ ಗ್ರಾಮದ ಮಾರಮ್ಮ ದೇವಾಲಯಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಆಹಾರ ಮತ್ತು ಸುರಕ್ಷತಾ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರಕಾರ ತಲಾ 5 ಲಕ್ಷ ರೂಪಾಯಿ ಹಾಗೂ ಕೆಪಿಸಿಸಿಯಿಂದ ತಲಾ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಅಸ್ವಸ್ಥರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ.