ಸ್ಟೆರ್‌ಲೈಟ್‌ ತೆರೆಯಲು ಎನ್‌ಜಿಟಿ ಆದೇಶ; ಸುಪ್ರೀಂ ಮೇಲ್ಮನವಿಗೆ ತಮಿಳುನಾಡು ಸಿದ್ಧತೆ
ಸುದ್ದಿ ಸಾರ

ಸ್ಟೆರ್‌ಲೈಟ್‌ ತೆರೆಯಲು ಎನ್‌ಜಿಟಿ ಆದೇಶ; ಸುಪ್ರೀಂ ಮೇಲ್ಮನವಿಗೆ ತಮಿಳುನಾಡು ಸಿದ್ಧತೆ

ತಾಮ್ರ ಘಟಕದ ಪುನರಾರಂಭದ ಬಗ್ಗೆ ಮೂರು ವಾರಗಳೊಳಗೆ ಹೊಸದಾಗಿ ಆದೇಶ ಹೊರಡಿಸುವಂತೆ ಎನ್‌ಜಿಟಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದೆ.

ತಮಿಳುನಾಡಿನ ತೂತ್ತುಕುಡಿಯ ವೇದಾಂತ ಸಮೂಹದ ಸ್ಟೆರ್‌ಲೈಟ್‌ ತಾಮ್ರ ಘಟಕವನ್ನು ಶಾಶ್ವತವಾಗಿ ಮುಚ್ಚಲು ತಮಿಳುನಾಡು ಸರಕಾರ ಹೊರಡಿಸಿದ್ದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಶನಿವಾರ ತೆರವುಗೊಳಿಸಿದೆ.

ತಾಮ್ರ ಘಟಕದ ಪುನರಾರಂಭದ ಬಗ್ಗೆ ಮೂರು ವಾರಗಳೊಳಗೆ ಹೊಸದಾಗಿ ಆದೇಶ ಹೊರಡಿಸುವಂತೆ ಎನ್‌ಜಿಟಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದೆ. ಘಟಕವನ್ನು ಶಾಶ್ವತವಾಗಿ ಮುಚ್ಚಿಸಲು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಎಂದಿರುವ ಎನ್‌ಜಿಟಿ ಘಟಕ ಪುನರಾರಂಭಕ್ಕೆ ಸಮ್ಮತಿ ನೀಡಿದೆ.

Also read: ಹನ್ನೊಂದು ಜನರನ್ನು ಬಲಿ ಪಡೆದ ವೇದಾಂತ ಕಂಪನಿ: ಜನ ಪ್ರತಿಭಟನೆ ಸಾಗಿ ಬಂದ ಹಾದಿ

ತಾಮ್ರ ಘಟಕದಿಂದ ಮಾಲಿನ್ಯ ಹೆಚ್ಚಾಗಿ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಮೇ ತಿಂಗಳಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆ ಹಿಂಸಾಚಾರದ ಸ್ವರೂಪ ಪಡೆದು ಪೊಲೀಸರ ಗುಂಡಿಗೆ 13 ಮಂದಿ ಬಲಿಯಾಗಿದ್ದರು. ಆ ಘಟನೆಯ ನಂತರ ತಮಿಳುನಾಡು ಸರಕಾರ ತಾಮ್ರ ಘಟಕವನ್ನು ಶಾಶ್ವತವಾಗಿ ಮುಚ್ಚುವ ಆದೇಶ ಹೊರಡಿಸಿತ್ತು.

ತಮಿಳುನಾಡು ಸರಕಾರದ ಆದೇಶವನ್ನು ಪ್ರಶ್ನಿಸಿ ವೇದಾಂತ ಕಂಪೆನಿ ಎನ್‌ಜಿಟಿ ಮೊರೆ ಹೋಗಿತ್ತು. ಕಂಪೆನಿಯ ಪರವಾಗಿ ಆದೇಶ ಹೊರಡಿಸಿರುವ ಎನ್‌ಜಿಟಿ ಘಟಕ ಪುನರಾರಂಭಕ್ಕೆ ಒಪ್ಪಿಗೆ ನೀಡುವ ಹೊಸ ಆದೇಶಕ್ಕೆ ಎನ್‌ಜಿಟಿ ನಿರ್ದೇಶನ ನೀಡಿದೆ.

ಮುಂದಿನ ಮೂರು ವರ್ಷಗಳ ಅವಧಿಗೆ ತಾಮ್ರ ಘಟಕದ ಸುತ್ತಮುತ್ತಲಿನ ಪ್ರದೇಶದ ಪುನರುಜ್ಜೀವನ ಹಾಗೂ ಕಲ್ಯಾಣ ಕಾರ್ಯಗಳಿಗಾಗಿ 1 ಕೋಟಿ ರೂಪಾಯಿಯನ್ನು ಖರ್ಚು ಮಾಡುವಂತೆ ಎನ್‌ಜಿಟಿ ಸ್ಟೆರ್‌ಲೈಟ್‌ ಕಂಪೆನಿಗೆ ಸೂಚಿಸಿದೆ.

ಎನ್‌ಜಿಟಿ ಆದೇಶವನ್ನು ವಿರೋಧಿಸಿರುವ ತಮಿಳುನಾಡು ಸರಕಾರ ಈ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದಿದೆ.