samachara
www.samachara.com
ಶಬರಿಮಲೆ ಪೋಸ್ಟ್‌: ನ್ಯಾಯಾಂಗ ಬಂಧನದಲ್ಲಿದ್ದ ಫಾತಿಮಾಗೆ ಕೇರಳ ಹೈಕೋರ್ಟ್‌ ಜಾಮೀನು
ಸುದ್ದಿ ಸಾರ

ಶಬರಿಮಲೆ ಪೋಸ್ಟ್‌: ನ್ಯಾಯಾಂಗ ಬಂಧನದಲ್ಲಿದ್ದ ಫಾತಿಮಾಗೆ ಕೇರಳ ಹೈಕೋರ್ಟ್‌ ಜಾಮೀನು

ಶಬರಿಮಲೆಯ ಪಂಪಾ ಪೊಲೀಸ್‌ ಠಾಣಾ ವ್ಯಾಪ್ತಿಯನ್ನು ಪ್ರವೇಶಿದಂತೆ ಷರತ್ತು ವಿಧಿಸಿ ಕೇರಳ ಹೈಕೋರ್ಟ್‌ ಫಾತಿಮಾಗೆ ಜಾಮೀನು ಮಂಜೂರು ಮಾಡಿದೆ.

ಶಬರಿಮಲೆ ಅಯ್ಯಪ್ಪ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಕೇರಳದ ಸಾಮಾಜಿಕ ಕಾರ್ಯಕರ್ತೆ ಹಾಗೂ ರೂಪದರ್ಶಿ ರೆಹನಾ ಫಾತಿಮಾ ಅವರಿಗೆ ಕೇರಳ ಹೈಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಫಾತಿಮಾ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಚಿತ್ರಗಳು ಹಾಗೂ ಬರಹಗಳು ಶಬರಿಮಲೆ ಅಯ್ಯಪ್ಪ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ ಎಂದು ಹಲವರು ಫಾತಿಮಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಈ ದೂರುಗಳ ಆಧಾರದ ಮೇಲೆ ಪಟ್ಟಣಂಥಿಟ್ಟ ಪೊಲೀಸರು ಫಾತಿಮಾ ಅವರನ್ನು ಬಂಧಿಸಿದ್ದರು.

ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂಥ ಯಾವುದೇ ಪೋಸ್ಟ್ ಹಾಗೂ ಕಮೆಂಟ್‌ ಹಾಕದಂತೆ ಕೋರ್ಟ್‌ ನಿರ್ಬಂಧ ವಿಧಿಸಿದೆ. ಅಲ್ಲದೆ ಶಬರಿಮಲೆಯ ಪಂಪಾ ಪೊಲೀಸ್‌ ಠಾಣಾ ವ್ಯಾಪ್ತಿಯನ್ನು ಪ್ರವೇಶಿದಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.

ಫಾತಿಮಾ ಸೆಪ್ಟೆಂಬರ್‌ 30ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಫೋಟೊ ಇದು:

ತಮ್ಮ ವಿರುದ್ಧ ದೂರುಗಳ ದಾಖಲಾದ ಬಳಿಕ ಫಾತಿಮಾ ಜಾಮೀನು ಕೋರಿ ಪಟ್ಟಣಂಥಿಟ್ಟ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಮನವಿ ಅರ್ಜಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಫಾತಿಮಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

ಬಳಿಕ ಫಾತಿಮಾ ಕೇರಳ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ನವೆಂಬರ್‌ 16ರಂದು ಕೇರಳ ಹೈಕೋರ್ಟ್‌ ಕೂಡಾ ಫಾತಿಮಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಆನಂತರ ಫಾತಿಮಾ ಪರ ವಕೀಲರು ಹೈಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಸದ್ಯ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ.

ಫಾತಿಮಾ ವಿರುದ್ಧ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಆರೋಪ (ಐಪಿಸಿ ಸೆಕ್ಷನ್‌ 295 ಎ) ಹಾಗೂ ಸಮುದಾಯವನ್ನು ಅಪಮಾನಿಸಿದ ಆರೋಪಗಳ (ಐಪಿಸಿ ಸೆಕ್ಷನ್‌ 505) ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಪಟ್ಟಣಂಥಿಟ್ಟ ಪೊಲೀಸರು ನವೆಂಬರ್‌ 27ರಂದು ಅವರನ್ನು ಬಂಧಿಸಿದ್ದರು.

Also read: ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ್ದ ರೆಹನಾ ಫಾತಿಮಾ ಬಂಧನ; ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಆರೋಪ