samachara
www.samachara.com
ಕೊಳ್ಳೇಗಾಲದ ಸುಳವಾಡಿಯಲ್ಲಿ ವಿಷಾಹಾರ ದುರಂತ; ಕನಿಷ್ಠ 10 ಮಂದಿ ದುರ್ಮರಣ
ಸುದ್ದಿ ಸಾರ

ಕೊಳ್ಳೇಗಾಲದ ಸುಳವಾಡಿಯಲ್ಲಿ ವಿಷಾಹಾರ ದುರಂತ; ಕನಿಷ್ಠ 10 ಮಂದಿ ದುರ್ಮರಣ

ಸುಳವಾಡಿ ಗ್ರಾಮದ ಬೇರೊಂದು ಗುಂಪಿನವರು ದ್ವೇಷದ ಕಾರಣಕ್ಕೆ ಊಟದಲ್ಲಿ ವಿಷ ಬೆರೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೊಳ್ಳೇಗಾಲ ತಾಲ್ಲೂಕು ಹನೂರಿನ ಮಾರ್ಟಳ್ಳಿ ಸಮೀಪದ ಸುಳವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥಗೊಂಡ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು ಕೊಳ್ಳೇಗಾಲ ತಾಲ್ಲೂಕು ಸರಕಾರಿ ಆಸ್ಪತ್ರೆಯಲ್ಲಿ ಅಸ್ವಸ್ಥರಿಗೆ ಚಿಕಿತ್ಸ ನೀಡಲಾಗುತ್ತಿದೆ. ತೀವ್ರವಾಗಿ ಅಸ್ವಸ್ಥಗೊಂಡಿರುವವರನ್ನು ಮೈಸೂರಿನ ಕೆ.ಆರ್‌. ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಕಳಿಸಲಾಗಿದೆ.

ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಗೋಪುರ ನಿರ್ಮಾಣದ ಶಿಲಾನ್ಯಾಸದ ಪೂಜೆಯ ಅಂಗವಾಗಿ ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸುಳವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಬಿದರಹಳ್ಳಿ, ಹಳೇ ಮಾರ್ಟಳ್ಳಿ, ತಂಡಮೇಡು ಗ್ರಾಮಗಳಿಂದ ನೂರಾರು ಗ್ರಾಮಸ್ಥರು ಅನ್ನ ಸಂತರ್ಪಣೆಗೆಂದು ಬಂದಿದ್ದರು.

ಮೊದಲು ಪ್ರಸಾದ ಸೇವಿಸಿದ ಹಲವರು ಸ್ವಲ್ಪ ಹೊತ್ತಿನ ಬಳಿಕ ಅಸ್ವಸ್ಥರಾಗಿದ್ದಾರೆ. ನಂತರ ಪ್ರಸಾದವನ್ನು ಚೆಲ್ಲಲಾಗಿದೆ. ಎಸೆದ ಪ್ರಸಾದವನ್ನು ತಿಂದಿರುವ ನೂರಾರು ಕಾಗೆ, ನಾಯಿಗಳೂ ಸಾವನ್ನಪ್ಪಿವೆ ಎಂದು ಸ್ಥಳೀಯರು ಹೇಳಿದ್ದಾರೆ.

ಅಸ್ವಸ್ಥರಾದವರನ್ನು ಮೊದಲು ಸಮೀಪದ ಕಾಮಗೆರೆಯ ಹೋಲಿಕ್ರಾಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೊಳ್ಳೇಗಾಲ ಆಸ್ಪತ್ರೆ ಹಾಗೂ ಮೈಸೂರಿನ ಕೆ.ಆರ್‌. ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಘಟನೆಯಲ್ಲಿ ಹಲವರು ತೀವ್ರವಾಗಿ ಅಸ್ವಸ್ಥಗೊಂಡಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಅನ್ನ ಸಂತರ್ಪಣೆಯ ಪ್ರಸಾದದ ಊಟಕ್ಕೆ ದುಷ್ಕರ್ಮಿಗಳು ವಿಷ ಬೆರೆಸಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ದೇವಾಲಯದಲ್ಲಿ ಉತ್ಸವ ಮಾಡುವುದು ಬೇರೊಂದು ಗ್ರಾಮದ ಗುಂಪಿನವರಿಗೆ ಇಷ್ಟವಿರಲಿಲ್ಲ. ಹೀಗಾಗಿ ದ್ವೇಷದ ಕಾರಣಕ್ಕೆ ಊಟದಲ್ಲಿ ವಿಷ ಬೆರೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ಸಮೀಪದಲ್ಲಿರುವ ಸುಳವಾಡಿ ಗ್ರಾಮದ ಮಾರಮ್ಮನ ಗೋಪುರ ಶಿಲಾನ್ಯಾಸದ ಅನ್ನ ಸಂತರ್ಪಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಮಿಳರು ಭಾಗಿಯಾಗಿದ್ದರು. ಅಸ್ವಸ್ಥಗೊಂಡವರ ಪೈಕಿ ಹೆಚ್ಚಿನವರು ತಮಿಳರು ಎನ್ನಲಾಗಿದೆ. ಇವರು ತಮಿಳುನಾಡಿನಿಂದ ಉತ್ಸವಕ್ಕೆಂದು ಸುಳವಾಡಿಗೆ ಬಂದಿದ್ದರೇ ಅಥವಾ ತಮಿಳುನಾಡಿನಿಂದ ಬಂದು ಸುಳವಾಡಿಯಲ್ಲೇ ನೆಲೆ ನಿಂತಿದ್ದವರೇ ಎಂಬುದು ಖಚಿತವಾಗಿಲ್ಲ.

ಆಹಾರದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ವರದಿ ಬಂದ ನಂತರ ಘಟನೆಗೆ ಕಾರಣ ತಿಳಿಯಲಿದೆ. ವಿಷಾಹಾರ ಸೇವನೆಯಿಂದ ಹಲವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಊಟಕ್ಕೆ ವಿಷ ಬೆರೆಸಿದ್ದು ನಿಜವೇ, ವಿಷ ಬೆರೆಸಿದ್ದು ಯಾರು ಮತ್ತು ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ಗೊತ್ತಾಗಲಿದೆ.