samachara
www.samachara.com
ಬಿಜೆಪಿಯ ‘ಸೋಲಿನ ಮೌನ’ ಮುರಿದ ರಫೇಲ್‌ ತೀರ್ಪು; ಮತ್ತೆ ತೆರೆ ಮುಂದೆ ಬಂದ ಮುಖಂಡರು!
ಸುದ್ದಿ ಸಾರ

ಬಿಜೆಪಿಯ ‘ಸೋಲಿನ ಮೌನ’ ಮುರಿದ ರಫೇಲ್‌ ತೀರ್ಪು; ಮತ್ತೆ ತೆರೆ ಮುಂದೆ ಬಂದ ಮುಖಂಡರು!

ಪಂಚರಾಜ್ಯಗಳ ಜನಾದೇಶದಿಂದ ಕಂಗೆಟ್ಟು ತೆರೆಮರೆಯಲ್ಲಿ ಉಳಿದಿದ್ದ ಬಿಜೆಪಿ ಮುಖಂಡರಿಗೆ ಸುಪ್ರೀಂಕೋರ್ಟ್‌ನ ಇಂದಿನ ಆದೇಶ ಮತ್ತೆ ತೆರೆಯ ಮುಂದೆ ಬಂದು ಮಾತನಾಡಲು ತ್ರಾಣ ನೀಡಿದೆ.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬಿದ್ದ ನಂತರ ಮೌನಕ್ಕೆ ಶರಣಾಗಿದ್ದ ಬಹುತೇಕ ಬಿಜೆಪಿ ಮುಖಂಡರು ಇಂದು ಮೌನ ಮುರಿದಿದ್ದಾರೆ. ರಫೇಲ್‌ ಒಪ್ಪಂದದಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸದು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ ಹಿನ್ನೆಲೆಯಲ್ಲಿ, “ಸುಳ್ಳಿನ ವಿರುದ್ಧ ಸತ್ಯಕ್ಕೆ ಸಿಕ್ಕ ಜಯ” ಎಂದು ಬಿಜೆಪಿ ಮುಖಂಡರು ಪ್ರತಿಕ್ರಿಯಿಸಿದ್ದಾರೆ.

ಚುನಾವಣಾ ಸೋಲಿನ ಬಗ್ಗೆ ಒಂದು ಅಕ್ಷರವನ್ನೂ ಮಾತನಾಡದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಮಾತನಾಡಲು ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಕರೆದಿದ್ದರು. “ಕೇಂದ್ರ ಸರಕಾರದ ವಿರುದ್ಧ ಅತಿ ದೊಡ್ಡ ಆರೋಪ ಮಾಡಿದ ರಾಹುಲ್‌ ಗಾಂಧಿ ದೇಶದ ಜನತೆಯ ಕ್ಷಮೆ ಕೇಳಬೇಕು ಮತ್ತು ರಫೇಲ್‌ ಒಪ್ಪಂದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಮಾಹಿತಿ ಮೂಲವನ್ನು ಬಹಿರಂಗಗೊಳಿಸಬೇಕು” ಎಂದಿದ್ದಾರೆ ಅಮಿತ್ ಶಾ.

“ರಾಹುಲ್‌ ಗಾಂಧಿ ದೇಶದಲ್ಲಿ ಸುಳ್ಳನ್ನು ಬಿತ್ತುತ್ತಾ ಸರಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಸುಳ್ಳಿನ ಆಧಾರದಲ್ಲಿ ನಡೆಸುವ ರಾಜಕಾರಣ ಹೆಚ್ಚು ಕಾಲ ನಡೆಯುವುದಿಲ್ಲ. ಸುಪ್ರೀಂಕೋರ್ಟ್‌ ನೀಡಿರುವ ಈ ತೀರ್ಪೇ ಇದ್ದಕ್ಕೆ ಸಾಕ್ಷಿ” ಎಂದು ಅಮಿತ್‌ ಶಾ ಹೇಳಿದ್ದಾರೆ.

Also read: ‘ಇನ್ ಡೀಟೆಲ್’: 21ನೇ ಶತಮಾನದ ಮೆಘಾ ಡೀಲ್; ಏನಿದು ರಫೇಲ್‌?

“ರಫೇಲ್‌ ಖರೀದಿ ಒಪ್ಪಂದಲ್ಲಿ ಕೇವಲ ಸುಳ್ಳು ಆರೋಪಗಳನ್ನೇ ಮಾಡುತ್ತಾ ಬಂದ ಕಾಂಗ್ರೆಸ್‌ಗೆ ಸುಪ್ರೀಂಕೋರ್ಟ್‌ ತೀರ್ಪು ಪೆಟ್ಟು ಕೊಟ್ಟಿದೆ. ಯುಪಿಎ ಸರಕಾರದ ಹತ್ತು ವರ್ಷದ ಅವಧಿಯಲ್ಲಿ ವಾಯುಪಡೆಗೆ ಯಾವುದೇ ಯುದ್ಧ ವಿಮಾನಗಳ ಖರೀದಿಯ ಒಪ್ಪಂದ ಅಂತಿಮವಾಗಲಿಲ್ಲ. ಆ ಕೊರತೆ ತುಂಬಿಸಲು ನಾವು ಎರಡು ಒಪ್ಪಂದಗಳನ್ನು ಮಾಡಿಕೊಳ್ಳಬೇಕಾಯಿತು. ಆದರೆ, ಕಾಂಗ್ರೆಸ್ ಈ ಬಗ್ಗೆ ಜನರಲ್ಲಿ ಸುಳ್ಳನ್ನೇ ಹಬ್ಬಿಸಿತ್ತು” ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದ್ದಾರೆ.

“ಸುಳ್ಳಿಗೆ ಹೆಚ್ಚು ಆಯಸ್ಸಿಲ್ಲ. ರಫೇಲ್‌ ಪ್ರಕರಣದಲ್ಲಿ ಸುಳ್ಳಿನ ಆಯಸ್ಸು ಕೆಲವು ತಿಂಗಳುಗಳು ಮಾತ್ರ. ಸುಳ್ಳು ತನ್ನನ್ನು ಸೃಷ್ಟಿಸಿದವರ ವಿಶ್ವಾಸಾರ್ಹತೆಯನ್ನೇ ಕುಗ್ಗಿಸುತ್ತದೆ” ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಸುಪ್ರೀಂಕೋರ್ಟ್‌ ತೀರ್ಪನ್ನು ಸ್ವಾಗತಿಸಿರುವ ಬಿಜೆಪಿ ವಕ್ತಾರ ಶಹನವಾಜುದ್ದೀನ್‌ ಹುಸೇನ್‌, “ಎಲ್ಲಾ ಒಪ್ಪಂದಗಳೂ ಬೋಫೋರ್ಸ್‌ ಒಪ್ಪಂದಗಳಾಗಿರುವುದಿಲ್ಲ. ಇಂಥ ದೊಡ್ಡ ಒಪ್ಪಂದಗಳಲ್ಲಿ ದೇಶದ ಭದ್ರತೆಯ ಹಣವನ್ನು ಲಪಟಾಯಿಸುವುದು ಕಾಂಗ್ರೆಸ್‌ ಪಕ್ಷದ ಮತ್ತು ಅದರ ಹಿರಿಯ ನಾಯಕರ ಸಂಸ್ಕೃತಿ” ಎಂದಿದ್ದಾರೆ.

ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, “ಆಧಾರವೇ ಇಲ್ಲದೆ ಹಗರಣವೊಂದನ್ನು ಸೃಷ್ಟಿಸಲು ಹೊರಟ ನಾಮ್‌ದಾರ್‌ಗೆ ಸುಪ್ರೀಂಕೋರ್ಟ್‌ ತೀರ್ಪು ದೊಡ್ಡ ಪೆಟ್ಟು ಕೊಟ್ಟಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಕಳೆದ ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆ ಕೇಳಬೇಕು” ಎಂದಿದ್ದಾರೆ.

ಪಂಚ ರಾಜ್ಯಗಳ ಸೋಲಿನಿಂದ ಕಂಗೆಟ್ಟು ತೆರೆಮರೆಯಲ್ಲಿ ಉಳಿದಿದ್ದ ಬಿಜೆಪಿ ಮುಖಂಡರಿಗೆ ಸುಪ್ರೀಂಕೋರ್ಟ್‌ನ ಇಂದಿನ ತೀರ್ಪು ತೆರೆಯ ಮುಂದೆ ಬಂದು ಮಾತನಾಡಲು ತ್ರಾಣ ನೀಡಿದೆ.

Also read: ರಫೇಲ್‌ ‘ಟೇಕ್‌ ಆಫ್‌’ಗೆ ಸುಪ್ರಿಂ ಕೋರ್ಟ್‌ ‘ಕ್ಲಿಯರೆನ್ಸ್‌’; ಯಾಕೆ ಹೀಗೆ?